ಯಾವ ಮಾಸ್ಕ್ ಎಷ್ಟು ಪರಿಣಾಮಕಾರಿ: ವಿಜ್ಞಾನಿಗಳು ನಡೆಸಿದ ಸರಳ ಪ್ರಯೋಗದ ವಿಡಿಯೋ

Update: 2020-08-10 07:17 GMT

ನ್ಯೂಯಾರ್ಕ್ : ಕೋವಿಡ್ 19 ಸಮಸ್ಯೆಯ ಈ ಕಾಲದಲ್ಲಿ ಜನರು ಸೋಂಕು ಹರಡುವಿಕೆಯನ್ನು ತಡೆಗಟ್ಟಲು ವಿವಿಧ ರೀತಿಯ ಮಾಸ್ಕ್‍ ಗಳನ್ನು ಧರಿಸುವುದರಿಂದ ಇದರಲ್ಲಿ ಯಾವ ವಿಧದ ಮಾಸ್ಕ್ ‍ಗಳು ಸೋಂಕು ಹರಡುವಿಕೆಯಲ್ಲಿ ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಅಮೆರಿಕಾದ ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಒಂದು ಸರಳ ವಿಧಾನವನ್ನು ಕಂಡುಕೊಂಡಿದೆ.

ಜನರಿಗೆ ವಿತರಿಸಲೆಂದು ಸ್ಥಳೀಯ ಸಂಘಟನೆಯೊಂದು ಡ್ಯೂಕ್ ಸ್ಕೂಲ್ ಆಫ್ ಮೆಡಿಸಿನ್  ಇಲ್ಲಿನ ಪ್ರೊಫೆಸರ್ ಒಬ್ಬರ ಸಹಾಯ ಪಡೆದಾಗ ಯಾವ ರೀತಿಯ ಮಾಸ್ಕ್ ಹೆಚ್ಚು ಪರಿಣಾಮಕಾರಿ ಎಂದು ತಿಳಿಯುವ ಪ್ರಯತ್ನದ ಭಾಗವಾಗಿ ಈ ಅಧ್ಯಯನ ನಡೆದಿದ್ದು ಅದರ ವಿವರಗಳನ್ನು ಕಳೆದ ಶುಕ್ರವಾರ  ಪ್ರಕಟಿಸಲಾಗಿದೆ.

ಡ್ಯೂಕ್ಸ್ ವಿವಿಯ ಭೌತ ಶಾಸ್ತ್ರ ವಿಭಾಗದ ಸಂಶೋಧಕರು  ಲೇಸರ್ ಕಿರಣಗಳು ಹಾಗೂ ಸೆಲ್ ಫೋನ್ ಬಳಸಿ ಜನರು ಮಾತನಾಡುವಾಗ ಅವರ ಮಾಸ್ಕ್ ‍ಗಳು ವೈರಾಣುಗಳು ಹರಡದಂತೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದೆಂದು  ತಿಳಿಯಲು ಒಂದು ಸರಳ ವಿಧಾನ ಕಂಡು ಹಿಡಿದಿದ್ದಾರೆ.

“ನಾವು ಒಂದು ಕಪ್ಪು ಪೆಟ್ಟಿಗೆ, ಒಂದು ಲೇಸರ್ ಹಾಗೂ ಕ್ಯಾಮರಾ ಬಳಸಿದ್ದೇವೆ'' ಎಂದು ಅಧ್ಯಯನ ತಂಡದ ಭಾಗವಾಗಿದ್ದ ಸಂಶೋಧಕರು ಹೇಳಿದ್ದಾರೆ

ಲೇಸರ್ ಕಿರಣವನ್ನು ಲಂಬವಾಗಿ ವಿಸ್ತರಿಸಿ ಬೆಳಕಿನ ಒಂದು ತೆಳು ಪದರವಾಗಿಸುವಂತೆ ಮಾಡಲಾಗುತ್ತದೆ. ಪೆಟ್ಟಿಗೆಯ ಎದುರು ಭಾಗದಲ್ಲಿ ಒಂದು ತೂತು ಇರಲಿದ್ದು ಅದರ ಮುಖಾಂತರ ಮಾತನಾಡಬೇಕಿದೆ.  ಪೆಟ್ಟಿಗೆಯ ಹಿಂಬದಿಯಲ್ಲಿ ಸೆಲ್ ಫೋನ್ ಕ್ಯಾಮರಾ ಇರಿಸಲಾಗುತ್ತದೆ. ಅತ್ತ ಕಡೆಯಿಂದ ಒಬ್ಬ ವ್ಯಕ್ತಿ ಮಾತನಾಡಿದಾಗ ಲೇಸರ್ ಬೀಮ್ ಮೂಲಕ ಹಾದು ಹೋಗುವ ಉಸಿರಾಟದ ಹನಿಗಳಿಂದ ಎಲ್ಲಾ ಕಡೆ ಹರಡುವ ಬೆಳಕನ್ನು ಕ್ಯಾಮರಾ ಸೆರೆಹಿಡಿಯುತ್ತದೆ. ನಂತರ ಒಂದು ಸರಳ ಕಂಪ್ಯೂಟರ್ ಆಲ್ಗಾರಿತಂ ಮೂಲಕ  ಹನಿಗಳನ್ನು ಲೆಕ್ಕ ಹಾಕಲಾಗುತ್ತದೆ.

ಈ ರೀತಿಯಾಗಿ ಸಂಶೋಧಕರು ಸಾಮಾನ್ಯವಾಗಿ ಲಭ್ಯವಿರುವ 14 ಮಾಸ್ಕ್‍ಗಳು ಎಷ್ಟು ಪರಿಣಾಮಕಾರಿ ಎಂದು ಅವಲೋಕಿಸಿದ್ದಾರೆ. ಮೊದಲು ಮಾಸ್ಕ್ ಧರಿಸದೇ ಈ ಪ್ರಯೋಗ ನಡೆಸಲಾಗಿತ್ತು. ನಂತರ ಮಾಸ್ಕ್ ಧರಿಸಿ ನಡೆಸಿದ ಪ್ರಯೋಗಗಳಲ್ಲಿ ಎನ್95 ಮಾಸ್ಕ್ ಅತ್ಯಂತ ಹೆಚ್ಚು ಪರಿಣಾಮಕಾರಿ ಎಂದು ತಿಳಿದು ಬಂದಿದೆ. ಮೂರು ಪದರಗಳ ಸರ್ಜಿಕಲ್ ಮಾಸ್ಕ್ ಹಾಗೂ ಮನೆಗಳಲ್ಲಿಯೇ ಹಲವರು ತಯಾರಿಸುವ ಕಾಟನ್ ಮಾಸ್ಕ್ ‍ಗಳು ಕೂಡ ಪರಿಣಾಮಕಾರಿ ಎಂದು ಈ ಪ್ರಯೋಗದಿಂದ ತಿಳಿದು ಬಂದಿದೆ.

ಹೆಚ್ಚಾಗಿ ಅಥ್ಲೀಟುಗಳು ಬಳಸುವ ನೆಕ್ ಫ್ಲೀಸ್ ಅಥವಾ ಗೈಟರ್ ಮಾಸ್ಕ್ ‍ಗಳು ಕನಿಷ್ಠ ಪರಿಣಾಮಕಾರಿ ಹಾಗೂ ಮಡಚಿ  ಮುಖಕ್ಕೆ ಕಟ್ಟುವಂತಹ ಬಟ್ಟೆಗಳು ಹಾಗೂ ನಿಟ್ಟೆಡ್ ಮಾಸ್ಕ್‍ ಗಳು ಕೂಡ ಅಷ್ಟೊಂದು  ಪರಿಣಾಮಕಾರಿಯಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಆದರೆ ಸಂಶೋಧಕರು ನಡೆಸಿರುವ ಈ ಪ್ರಯೋಗವನ್ನು ಜನರು ಮನೆಗಳಲ್ಲಿ ಮಾಡಬಾರದು  ಲೇಸರ್‍ ಗಳನ್ನು ಬಳಸಲು ತಿಳಿದಿರುವ ತಜ್ಞರು  ಮಾತ್ರ  ಇದನ್ನು ಮಾಡಬಹುದು ಇಲ್ಲದೇ ಹೋದಲ್ಲಿ ಕಣ್ಣಿಗೆ ಹಾನಿಯುಂಟಾಗಬಹುದು ಎಂದು ಎಚ್ಚರಿಸುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News