ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್ ಭೂಷಣ್ ವಿಷಾದದ ಹೇಳಿಕೆ ಸ್ವೀಕರಿಸದ ಸುಪ್ರೀಂ ಕೋರ್ಟ್

Update: 2020-08-10 17:55 GMT

ಹೊಸದಿಲ್ಲಿ, ಆ.10: ತಮ್ಮ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿಷಾದ ವ್ಯಕ್ತಪಡಿಸಿರುವುದನ್ನು ಹಾಗೂ ಈ ಬಗ್ಗೆ ನೀಡಿರುವ ವಿವರಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಇನ್ನಷ್ಟು ವಿಚಾರಣೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.

ಭ್ರಷ್ಟಾಚಾರದ ಬಗ್ಗೆ ಪ್ರಶಾಂತ್ ಭೂಷಣ್ ನೀಡಿರುವ ವಿವರಣೆ ನ್ಯಾಯಾಂಗ ನಿಂದನೆಯ ಪ್ರಕರಣವಾಗುತ್ತದೆಯೇ ಎಂಬ ಬಗ್ಗೆ ಪರಿಶೀಲನೆಯ ಅಗತ್ಯವಿದೆ. ಈ ಪ್ರಕರಣದ ಇನ್ನಷ್ಟು ವಿಚಾರಣೆ ಅಗತ್ಯವಿದೆ. ಆದ್ದರಿಂದ ಪ್ರಶಾಂತ್ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್ ಕೊನೆಗೊಂಡ ಬಳಿಕ ನಡೆಯುವ ದೈಹಿಕ ಉಪಸ್ಥಿತಿಯ ವಿಚಾರಣೆಯಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರಶಾಂತ್ ಭೂಷಣ್ ತಂದೆ, ಮಾಜಿ ಕೇಂದ್ರ ಸಚಿವ, ಹಿರಿಯ ನ್ಯಾಯವಾದಿ ಶಾಂತಿ ಭೂಷಣ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತು ಮತ್ತು ಮುಂದಿನ ಸೋಮವಾರ ವಿಚಾರಣೆಗೆ ದಿನ ನಿಗದಿಗೊಳಿಸಿತು.

ಭಾರತದ 16 ಸಿಜೆಐ(ಮುಖ್ಯ ನ್ಯಾಯಾಧೀಶರಲ್ಲಿ)ಗಳಲ್ಲಿ ಅರ್ಧದಷ್ಟು ಸಿಜೆಐ ಭ್ರಷ್ಟರು ಎಂದು 2009ರಲ್ಲಿ ತೆಹಲ್ಕಾ ಪತ್ರಿಕೆ ನಡೆಸಿದ್ದ ಸಂದರ್ಶನದ ಸಂದರ್ಭ ಪ್ರಶಾಂತ್ ಭೂಷಣ್ ಹೇಳಿದ್ದರು. ಇತ್ತೀಚೆಗೆ ಸಿಜೆಐ ಎಸ್‌ಎ ಬೋಬ್ಡೆ ಹಾರ್ಲೆ ಡೇವಿಡ್ಸನ್ ಸೂಪರ್ ಬೈಕ್ ಮೇಲೆ ಕುಳಿತುಕೊಂಡು ತೆಗೆಸಿದ ಫೋಟೋದ ಬಗ್ಗೆಯೂ ಪ್ರಶಾಂತ್ ಟೀಕಿಸಿದ್ದರು. ಈ ಎರಡು ಹೇಳಿಕೆಯ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ. ಕಳೆದ ಮಂಗಳವಾರ ತನ್ನ ಹೇಳಿಕೆಯ ಬಗ್ಗೆ ಪ್ರಶಾಂತ್ ವಿಷಾದ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರವೆಂದರೆ ಹಣಕಾಸಿನ ಭ್ರಷ್ಟಾಚಾರ ಅಥವಾ ಲಾಭದಾಯಕ ನೆರವು ಮಾತ್ರ ಎಂಬುದು ತನ್ನ ಹೇಳಿಕೆಯ ಅರ್ಥವಲ್ಲ. ಇದನ್ನು ವಿಶಾಲ ಅರ್ಥದಲ್ಲಿ ಬಳಸಿದ್ದೇನೆ . ಆದರೂ ತನ್ನ ಹೇಳಿಕೆಯಿಂದ ಯಾರಿಗಾದರೂ ನೋವಾದರೆ ವಿಷಾದಿಸುತ್ತೇನೆ ಎಂದು ಭೂಷಣ್ ಹೇಳಿದ್ದರು. ಈ ಮಧ್ಯೆ, ಈ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ದಾಖಲಾಗಿರುವ ಮತ್ತೊಬ್ಬ ವ್ಯಕ್ತಿ, ಹಿರಿಯ ಪತ್ರಕರ್ತ ತರುಣ್ ತೇಜ್‌ಪಾಲ್, ಈ ಸಂದರ್ಶನ ಪ್ರಕಟಿಸಿರುವುದಕ್ಕೆ ಕ್ಷಮೆ ಯಾಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News