ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ 3 ಕ್ರಮಗಳ ಸಲಹೆ ನೀಡಿದ ಮನಮೋಹನ್ ಸಿಂಗ್

Update: 2020-08-10 10:03 GMT

ಹೊಸದಿಲ್ಲಿ: ದೇಶದಲ್ಲಿ ಸುದೀರ್ಘ ಆರ್ಥಿಕ ನಿಧಾನಗತಿ ಅನಿವಾರ್ಯ ಎಂದು ಹೇಳಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್,  ಕೊರೋನವೈರಸ್ ಸಮಸ್ಯೆಯಿಂದಾಗಿ ಆರ್ಥಿಕ ಕ್ಷೇತ್ರಕ್ಕೆ ಬಿದ್ದಿರುವ ದೊಡ್ಡ ಹೊಡೆತದಿಂದ ಚೇತರಿಸಿಕೊಳ್ಳುವ ಸಲುವಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರ ಕೈಗೊಳ್ಳಬೇಕಾದ ಮೂರು ತುರ್ತು ಕ್ರಮಗಳ ಕುರಿತಂತೆ ವಿವರಿಸಿದ್ದಾರೆ.

ಬಿಬಿಸಿಗೆ ನೀಡಿದ ಇಮೇಲ್ ಸಂದರ್ಶನದಲ್ಲಿ ಸಿಂಗ್ ಈ ಕುರಿತು ಹೇಳಿಕೊಂಡಿದ್ದಾರೆ.

ದೇಶದ ಪ್ರಸಕ್ತ ಆರ್ಥಿಕ ನಿಧಾನಗತಿ ಒಂದು ಮಾನವತೆಯ ಬಿಕ್ಕಟ್ಟು ಎಂದು ಬಣ್ಣಿಸಿರುವ ಸಿಂಗ್ ಸರಕಾರದ `ಲಾಕ್ ಡೌನ್‍ಗೆ ಸರಕಾರ ತೋರಿದ ಆಘಾತ ಮತ್ತು ಭಯದ ಧೋರಣೆಯು ಜನರಿಗೆ ಬಹಳಷ್ಟು ನೋವು ತಂದಿದೆ. ಪ್ರಾಯಶಃ ಆ ಹಂತದಲ್ಲಿ ಲಾಕ್ ಡೌನ್ ಒಂದು ಅನಿವಾರ್ಯ ಆಯ್ಕೆಯಾಗಿದ್ದರೂ ದಿಢೀರ್ ಆಗಿ ಘೋಷಣೆ ಮಾಡಿರುವುದು ಹಾಗೂ ಕಠಿಣವಾಗಿ ಜಾರಿಗೊಳಿಸಿರುವುದು ವಿವೇಚನಾರಹಿತ ಹಾಗೂ ಅಸಂವೇದಿತನದಿಂದ ಕೂಡಿತ್ತು'' ಎಂದು  ಸಿಂಗ್ ಹೇಳಿದರು.

ಮುಂದಿನ ವರ್ಷಗಳಲ್ಲಿ ಆರ್ಥಿಕತೆ ಸಹಜತೆಗೆ ಬರುವ ನಿಟ್ಟಿನಲ್ಲಿ ಮೂರು ಕ್ರಮಗಳನ್ನು ಸೂಚಿಸಿದ ಸಿಂಗ್, “ಜನರ ಜೀವನೋಪಾಯಗಳನ್ನು ರಕ್ಷಿಸಲು ಯತ್ನಿಸಬೇಕು ಹಾಗೂ ಗಣನೀಯ ನೇರ ನಗದು ಸಹಾಯದ ಮೂಲಕ ಅವರಿಗೆ  ಖರೀದಿಸುವ ಸಾಮರ್ಥ್ಯ ದೊರೆಯುವಂತೆ ಸರಕಾರ ಮಾಡಬೇಕು'' ಎಂದು ಹೇಳಿದರು.

“ಸರಕಾರ ಬೆಂಬಲಿತ ಸಾಲ ಗ್ಯಾರಂಟಿ ಯೋಜನೆಗಳ ಮೂಲಕ ಉದ್ದಿಮೆಗಳಿಗೆ ಸೂಕ್ತ ಹಣಕಾಸು ಒದಗಿಸಬೇಕು ಹಾಗೂ  ಆರ್ಥಿಕ ಕ್ಷೇತ್ರದ ಸಮಸ್ಯೆಗಳನ್ನು `ಸಾಂಸ್ಥಿಕ ಸ್ವಾಯತ್ತತೆ ಮತ್ತು ಪ್ರಕ್ರಿಯೆಗಳ' ಮೂಲಕ ಪರಿಹರಿಸಬೇಕು” ಎಂದು ಅವರು ಸಲಹೆಯಿತ್ತಿದ್ದಾರೆ.

ಕೆಲವು ಇತರ ದೇಶಗಳನ್ನು ಅನುಸರಿಸಿ ಭಾರತ  ಆಮದು ಸುಂಕವನ್ನು ಬಹಳಷ್ಟು ಹೆಚ್ಚಿಸುವುದರ  ಅಪಾಯದ ಕುರಿತು ಎಚ್ಚರಿಕೆ ನೀಡಿದ ಸಿಂಗ್, ಅದೇ ಸಮಯ ಭಾರತದ ವ್ಯಾಪಾರ  ನೀತಿಯು ಕಳೆದ ಮೂರು ದಶಕಗಳಲ್ಲಿ ಸಾಕಷ್ಟು ಆರ್ಥಿಕ ಲಾಭವನ್ನು ಎಲ್ಲಾ ಸ್ತರದ ಜನರಿಗೆ ಒದಗಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News