ರಾಜ್ಯ ರಾಜಧಾನಿಯಲ್ಲಿಂದು ಕೋವಿಡ್ ಗೆ 23 ಮಂದಿ ಮೃತ್ಯು, 2802 ಮಂದಿಗೆ ಪಾಸಿಟಿವ್

Update: 2020-08-12 17:46 GMT

ಬೆಂಗಳೂರು, ಆ.12: ನಗರದಲ್ಲಿ ಮತ್ತೆ ಕೊರೋನ ಸೋಂಕಿತರ ಪ್ರಮಾಣಕ್ಕಿಂತ ಬಿಡುಗಡೆಯಾಗುವವರ ಸಂಖ್ಯೆ ಇಳಿಕೆಯಾಗಿದೆ. ಬುಧವಾರದಂದು 2,802 ಮಂದಿಗೆ ಕೊರೋನ ದೃಢವಾಗಿದ್ದು, 2,360 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೇ 23 ಮಂದಿ ಮೃತರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 79,840 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ನಗರದಲ್ಲಿ 1,316 ಜನರು ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೆ 45,034 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33,489 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 91,358 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಸೀಲ್‍ಡೌನ್: ನಗರದ ಬಡಾವಣೆಯ ಯಾವುದೇ ರಸ್ತೆಗಳಲ್ಲಿ ಮೂರಕ್ಕಿಂತ ಹೆಚ್ಚಿನ ಕೊರೋನ ಸೋಂಕಿತ ಪ್ರಕರಣಗಳು ಕಂಡು ಬಂದರೆ ಮಾತ್ರ ರಸ್ತೆ ಸೀಲ್‍ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಯಾವುದೇ ಮನೆಯಲ್ಲಿ ಕೊರೋನ ಸೋಂಕಿನ ಪ್ರಕರಣ ಪತ್ತೆಯಾದರೆ ಮನೆಯ ಮುಂದೆ ಬ್ಯಾನರ್ ಹಾಕಲಾಗುವುದು ಅಥವಾ ಪೋಸ್ಟರ್ ಅಂಟಿಸಲಾಗುತ್ತದೆ. ಮನೆಗೆ ಯಾರೂ ಭೇಟಿ ನೀಡಬಾರದು ಎಂದು ಬ್ಯಾನರ್ ನಲ್ಲಿ ಮುದ್ರಿಸಲಾಗಿರುತ್ತದೆ. ಮನೆಗಳನ್ನು ಶೀಟ್ ಹಾಕಿ ಸೀಲ್‍ಡೌನ್ ಮಾಡುವ ಬಗ್ಗೆ ಟೀಕೆಗಳು ಬಂದ ಹಿನ್ನಲೆಯಲ್ಲಿ ಮತ್ತು ಕೊರೋನ ಬಗ್ಗೆ ಜನರಿಗೆ ಅರಿವು ಬಂದಿರುವ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.

336 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಸೋಂಕಿನಿಂದ ಒಟ್ಟು 336 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ವೈದ್ಯರು, ನರ್ಸ್ ಗಳ ನಡುವೆ ತಾರತಮ್ಯ; ಆರೋಪ

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ನರ್ಸ್ ಗಳಿಗೆ ಐಸೋಲೇಷನ್ ವಿಷಯದಲ್ಲಿ ಬೇರೆ ಬೇರೆ ನಿಯಮ ರೂಪಿಸಲಾಗಿದ್ದು, ವೈದ್ಯರ ಸಮನಾಗಿ ಕರ್ತವ್ಯ ನಿರ್ವಹಿಸಿದರೂ ನಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಅಲ್ಲಿನ ನರ್ಸ್ ಗಳು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ಕೊರೋನ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯರನ್ನು ಒಂದು ವಾರ ಐಸೋಲೇಟ್ ಮಾಡಲಾಗುತ್ತದೆ. ಇದಕ್ಕಾಗಿ ಅವರಿಗೆ ವಿಶೇಷ ಹೋಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ವೈದ್ಯರಿಗೆ ಸಮನಾಗಿ ಕೆಲಸ ಮಾಡುವ ನರ್ಸ್‍ಗಳನ್ನು ಕೇವಲ ಎರಡು ದಿನ ಮಾತ್ರ ಐಸೋಲೇಷನ್ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News