ಕೊರೋನ ಸೋಂಕು ನಡುವೆ ಇದೀಗ ಬೆಲೆ ಏರಿಕೆ ಬಿಸಿ !

Update: 2020-08-14 04:42 GMT

ಹೊಸದಿಲ್ಲಿ: ಆಹಾರಧಾನ್ಯದ ಬೆಲೆಯಲ್ಲಿ ಗಣನೀಯ ಹೆಚ್ಚಳ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನಿಂದ ತಕ್ಷಣಕ್ಕೆ ಬಡ್ಡಿದರದಲ್ಲಿ ಕಡಿತದ ಸಾಧ್ಯತೆ ಇಲ್ಲದಿರುವ ಕಾರಣದಿಂದ ಜುಲೈ ತಿಂಗಳಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರ ಶೇಕಡ 7ಕ್ಕೇರಿದೆ. ಆರ್‌ಬಿಐ ಕಳೆದ ವಾರ ಬಿಡುಗಡೆ ಮಾಡಿದ ವಿತ್ತೀಯ ನೀತಿ ಪರಾಮರ್ಶೆ ವರದಿಯಲ್ಲಿ ಬಡ್ಡಿದರ ಕಡಿತದ ಪ್ರಸ್ತಾವ ಇಲ್ಲದಿರುವುದು ಏರಿಕೆಗೆ ಮುಖ್ಯ ಕಾರಣ.

ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ (ಎನ್‌ಎಸ್‌ಓ) ಗುರುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಜುಲೈ ತಿಂಗಳಲ್ಲಿ 6.9%ಗೇರಿದೆ. ಇದು ಜೂನ್‌ನಲ್ಲಿ ದಾಖಲಾದ ಪ್ರಮಾಣ (6.2%)ಕ್ಕಿಂತ ಅಧಿಕ. ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಶೇಕಡ 7ರಷ್ಟಿದ್ದು, ನಗರ ಪ್ರದೇಶಗಳಲ್ಲಿ 6.8ರಷ್ಟಿದೆ.

ಹಿಂದಿನ ತಿಂಗಳು 8.7% ಇದ್ದ ಆಹಾರಧಾಣ್ಯಗಳ ಹಣದುಬ್ಬರ ದರ ಇದೀಗ 9.6%ಕ್ಕೇರಿದೆ. ಪೂರೈಕೆಯಲ್ಲಿನ ವ್ಯತ್ಯಯ ಮುಖ್ಯ ಕಾರಣ. ಮಾಂಸ ಮತ್ತು ಮೀನಿನ ಬೆಲೆ 18.8% ಏರಿಕೆ ಕಂಡಿದ್ದು, ಬೇಳೆಕಾಳುಗಳು ಹಾಗೂ ಇತರ ಉತ್ಪನ್ನಗಳ ಬೆಲೆ 15.9% ಹೆಚ್ಚಿದೆ. ತೈಲ ಮತ್ತು ಕೊಬ್ಬಿನ ಬೆಲೆ 12.4% ಏರಿಕೆ ಕಂಡಿದ್ದರೆ, ತರಕಾರಿ ದರ 11.3% ಹೆಚ್ಚಿದೆ. ಸಾಂಬಾರ ಪದಾರ್ಥಗಳು 13.3%ದಷ್ಟು ತುಟ್ಟಿಯಾಗಿವೆ. ಸಾಂಕ್ರಾಮಿಕದ ಕಾರಣದಿಂದ ಸ್ಯಾನಿಟೈಸೇಷನ್ ವೆಚ್ಚ ಸೇರ್ಪಡೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

1114 ನಗರ ಮಾರುಕಟ್ಟೆ ಹಾಗೂ 1181 ಗ್ರಾಮೀಣ ಮಾರುಕಟ್ಟೆಗಳಿಗೆ ಭೇಟಿ ನೀಡಿ ಕ್ಷೇತ್ರ ಸಿಬ್ಬಂದಿ ಕಲೆ ಹಾಕಿದ ಮಾಹಿತಿ ಆಧರಿಸಿ ಈ ಅಂಕಿ ಅಂಶ ಬಿಡುಗಡೆ ಮಾಡಲಾಗಿದೆ ಎಂದು ಎನ್‌ಎಸ್‌ಓ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News