ದ್ವೇಷದ ಅಮಲೇರಿಸಿ ಶೃಂಗೇರಿಗೆ ಬೆಂಕಿ ಹಚ್ಚಲು ಹೊರಟವರು

Update: 2020-08-15 05:30 GMT

ಸಾಮಾಜಿಕ ಜಾಲತಾಣದದಲ್ಲಿ ಕೋಮುಉದ್ವಿಗ್ನಕಾರಿ ಹೇಳಿಕೆಗಳನ್ನು ಹಾಕಿ ಬೆಂಗಳೂರಿಗೆ ಬೆಂಕಿ ಹಚ್ಚುವಲ್ಲಿ ಯಶಸ್ವಿಯಾದ ಶಕ್ತಿಗಳು, ಇದೀಗ ಶೃಂಗೇರಿಗೆ ಬೆಂಕಿ ಹಚ್ಚಲು ಹೊರಟು, ಕೊನೆಯ ಕ್ಷಣದಲ್ಲಿ ಕೈ ಸುಟ್ಟುಕೊಂಡಿವೆ. ಅಷ್ಟೇ ಅಲ್ಲ, ನಾಡಿನ ಶಾಂತಿಯನ್ನು ಕೆಡಿಸಲು ಸಂಘಪರಿವಾರ ಹಮ್ಮಿಕೊಂಡಿರುವ ವ್ಯವಸ್ಥಿತ ಸಂಚು ಕೂಡ ಈ ಮೂಲಕ ಬೆಳಕಿಗೆ ಬಂದಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ಜನರ ನಡುವೆ ಅಸಹನೆಯನ್ನು ಬಿತ್ತಿ, ನಾಡಿಗೆ ಬೆಂಕಿ ಹಚ್ಚಲು ಸಂಘಪರಿವಾರ ಶಕ್ತಿಗಳು ಯಾವ ಹೀನ ಕೃತ್ಯಕ್ಕೂ ಇಳಿಯಬಲ್ಲರು ಎನ್ನುವ ಅಪಾಯಕಾರಿ ಸಂದೇಶ ನಾಡಿಗೆ ದೊರಕಿದಂತಾಗಿದೆ. ಬೆಂಗಳೂರು ಮತ್ತು ಶೃಂಗೇರಿ ಪ್ರಕರಣಗಳನ್ನು ಮುಂದಿಟ್ಟುಕೊಂಡು, ಸಮಾಜವಿರೋಧಿ ಶಕ್ತಿಗಳ ಜಾಲಗಳನ್ನು ಬೇಧಿಸುವ ಹೊಣೆಗಾರಿಕೆ ಇದೀಗ ಕಾನೂನು ವ್ಯವಸ್ಥೆಯ ಮುಂದಿದೆ.

ಕಳೆದ ಬುಧವಾರ ಶೃಂಗೇರಿ ಪಟ್ಟಣದದಲ್ಲಿರುವ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಯಾರೋ ದುಷ್ಕರ್ಮಿಗಳು ಹಸಿರು ಬಣ್ಣದ, ಧಾರ್ಮಿಕ ಸಂಕೇತಗಳಿರುವ ಬ್ಯಾನರ್ ಒಂದನ್ನು ಎಸೆದಿದ್ದರು. ಬ್ಯಾನರ್ ಬಣ್ಣ ಹಸಿರಾಗಿರುವುದರಿಂದ ಮತ್ತು ಪುತ್ಥಳಿ ಹಿಂದೂ ಧರ್ಮಕ್ಕೆ ಸೇರಿರುವುದರಿಂದ ಈ ಕೃತ್ಯವನ್ನು ಒಂದು ನಿರ್ದಿಷ್ಟ ಸಮುದಾಯದವರೇ ಮಾಡಿದ್ದಾರೆ ಎನ್ನುವುದನ್ನು ಪೊಲೀಸರು ತನಿಖೆ ನಡೆಸುವ ಮೊದಲೇ ಸಂಘಪರಿವಾರ ಮುಖಂಡರು ಘೋಷಿಸಿ ಬಿಟ್ಟರು. ಶೃಂಗೇರಿ ಏಕಾಏಕಿ ಪ್ರಕ್ಷುಬ್ಧಗೊಂಡಿತು. ಮಾತ್ರವಲ್ಲ, ಅಮಾಯಕನೊಬ್ಬನ ಮನೆಗೆ ಸಂಘಪರಿವಾರದ ಗುಂಪೊಂದು ದಾಳಿ ನಡೆಸಿತು. ಓರ್ವನ ಮೇಲೆ ಹಲ್ಲೆಯೂ ನಡೆಯಿತು. ಇವೆಲ್ಲದರ ಜೊತೆಗೆ ಮಾಜಿ ಸಚಿವ ಡಿ. ಎನ್. ಜೀವರಾಜ್ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಬಳಿ ದಿಢೀರ್ ಧರಣಿ ನಡೆಯಿತು. ಕನಿಷ್ಠ ಓದು ಬರಹ ಇರುವ ಯಾರಿಗೇ ಆಗಿದ್ದರೂ, ಆ ಬ್ಯಾನರ್ ಯಾವುದೇ ಧರ್ಮದ, ಪಕ್ಷದ ಧ್ವಜ, ಬಾವುಟವಲ್ಲ ಎನ್ನುವುದು ಗೊತ್ತಾಗಿ ಬಿಡುತ್ತಿತ್ತು. ಆದರೆ ಎದೆಯಲ್ಲಿ ಅಕ್ಷರ ಬೀಜಗಳ ಜೊತೆಗೆ ದ್ವೇಷದ ವಿಷ ಬೀಜಗಳನ್ನು ಬಚ್ಚಿಟ್ಟುಕೊಂಡಿದ್ದ ಮಾಜಿ ಸಚಿವರಿಗೆ ಅದನ್ನು ಪರಿಶೀಲಿಸುವ ವ್ಯವಧಾನವೇ ಇದ್ದಿರಲಿಲ್ಲ. ಬದಲಿಗೆ, ಇನ್ನಷ್ಟು ಉದ್ವಿಗ್ನಕಾರಿ ಮಾತುಗಳನ್ನು ಆಡಿ ಶೃಂಗೇರಿಗೆ ಬೆಂಕಿ ಹಚ್ಚಲು ಸರ್ವ ತಯಾರಿ ನಡೆಸಿದ್ದರು. ಅವರಿಗೆ ಶಂಕರಾಚಾರ್ಯರ ಪ್ರತಿಮೆಗೆ ಅನ್ಯಾಯವಾಗಿದೆಯೋ ಇಲ್ಲವೋ ಎನ್ನುವುದಕ್ಕಿಂತ ಮುಖ್ಯವಾಗಿ, ಶೃಂಗೇರಿಯನ್ನು ಉದ್ವಿಗ್ನಗೊಳಿಸುವುದೇ ತುರ್ತು ಆಗತ್ಯವಾಗಿತ್ತು. ಅತ್ಯಂತ ಆಘಾತಕಾರಿ ಅಂಶವೆಂದರೆ, ಪ್ರತಿಭಟನೆಯ ಸಂದರ್ಭದಲ್ಲಿ ಅವರು, ಬೆಂಗಳೂರು ಹಿಂಸಾಚಾರಕ್ಕೆ ಕಾರಣವಾದ ಪ್ರವಾದಿ ನಿಂದನೆಯನ್ನು ಮರು ಉಲ್ಲೇಖಿಸಿ ಸಮರ್ಥಿಸಿರುವುದು. ಅಂದರೆ ಅವರಿಗೆ ಬೆಂಗಳೂರಿನ ಬೆಂಕಿಯನ್ನು ಶೃಂಗೇರಿಗೆ ತಂದು ಹಂಚುವ ದುರುದ್ದೇಶವಿದ್ದಂತಿತ್ತು. ಮಾಜಿ ಸಚಿವರು ಈ ಉದ್ವಿಗ್ನಕಾರಿ ಹೇಳಿಕೆಯನ್ನು ಪೊಲೀಸರ ಮುಂದೆಯೇ ಹೇಳಿದ್ದರೂ, ಅದರ ವಿರುದ್ಧ ಈವರೆಗೆ ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಬದಲಿಗೆ, ಸಂಘಪರಿವಾರದ ಒತ್ತಡಕ್ಕೆ ಮಣಿದು ಘಟನೆಗೆ ಸಂಬಂಧವೇ ಇಲ್ಲದ ಓರ್ವ ಅಮಾಯಕನನ್ನು ಅನಗತ್ಯವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡು ಒಂದಿಡೀ ದಿನ ಠಾಣೆಯೊಳಗಿಟ್ಟುಕೊಂಡರು.

ಕಾನೂನಿನ ಕಣ್ಣು ಕುರುಡಾಗಿದ್ದರೂ, ಮಸೀದಿಯ ಸಿಸಿ ಟಿವಿ ಕಣ್ಣು ಚುರುಕಾಗಿಯೇ ಇತ್ತು. ರಾತ್ರಿ ಮಸೀದಿಯೊಳಗೆ ನುಗ್ಗಿದ ‘ದೇಶದ್ರೋಹಿ, ಉಗ್ರಗಾಮಿ, ಭಯೋತ್ಪಾದಕ’ ಯಾರು ಎನ್ನುವುದನ್ನು ಅದು ಸಂಗ್ರಹಿಸಿ ಇಟ್ಟುಕೊಂಡಿತ್ತು. ಸಂಘಪರಿವಾರದ ಜನರೊಂದಿಗೆ ನಂಟಿರುವ ಮಿಲಿಂದ್ ಪೂಜಾರಿ ಎಂಬಾತ ಮಸೀದಿಗೆ ನುಗ್ಗಿ ಅಲ್ಲಿದ್ದ ಬ್ಯಾನರ್‌ನ್ನು ಎತ್ತಿಕೊಂಡು ನೇರವಾಗಿ ಶಂಕರಾಚಾರ್ಯರ ಪುತ್ಥಳಿಯ ಬಳಿ ಹಾಕಿದ್ದಾನೆ. ಬೆಳಗ್ಗೆ ಆತ ತಲೆನೋವು ಎಂಬ ನಾಟಕವಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಯಾವಾಗ ಈ ಸಿಸಿಟಿವಿಯ ದೃಶ್ಯ ಸತ್ಯವನ್ನು ಬಹಿರಂಗಪಡಿಸಿತೋ, ತಕ್ಷಣ ಸಂಘಪರಿವಾರದ ನಾಯಕರು ಬಾಲ ಮುದುಡಿಕೊಂಡು ತಮ್ಮ ಬಿಲಗಳನ್ನು ಸೇರಿದರು. ಸಿಸಿ,ಟಿವಿ ಫೂಟೇಜ್ ಬೆಳಕಿಗೆ ಬಂದ ಬೆನ್ನಿಗೇ ಪೊಲೀಸ್ ಇಲಾಖೆ ‘ಇದು ಕುಡುಕನೊಬ್ಬನ ಕೃತ್ಯ’ ಎಂದು ತೀರ್ಪು ನೀಡಿತು. ಇದರಲ್ಲಿ ಯಾವುದೇ ಸಂಘ, ಪಕ್ಷಗಳ ಪಾತ್ರವಿಲ್ಲ ಎಂದೂ ಘೋಷಣೆ ಮಾಡಿತು. ಇದು ಒಬ್ಬ ಕುಡುಕನ ಕೃತ್ಯವೆಂದೇ ಇಟ್ಟುಕೊಳ್ಳೋಣ. ಆದರೆ ಮಸೀದಿಯಲ್ಲಿ ಸಿಸಿಟಿವಿ ಇಲ್ಲದೇ ಹೋಗಿದ್ದರೆ, ಈ ಕೃತ್ಯ ‘ಮುಸ್ಲಿಮ್ ಉಗ್ರಗಾಮಿ’ಗಳದ್ದು ಎಂದು ಬಿಂಬಿತವಾಗುತ್ತಿರಲಿಲ್ಲವೇ? ಒಂದು ವೇಳೆ ನಿಜವಾದ ಅಪರಾಧಿ ಪತ್ತೆಯಾಗದೇ ಇರದಿದ್ದರೆ ಇಂದು ದುಷ್ಕರ್ಮಿಗಳ ದಂಡು ಶೃಂಗೇರಿಗೆ ಕೊಳ್ಳಿ ಇಡುತ್ತಿತ್ತು. ಹಲವು ಅಮಾಯಕರ ಮನೆಗಳು ಹೊತ್ತಿ ಉರಿಯುತ್ತಿದ್ದವು. ನಿರ್ದಿಷ್ಟ ಸಮುದಾಯವೊಂದರ ಅಮಾಯಕರು ಈ ಗಲಭೆಗೆ ಬಲಿಯಾಗಬೇಕಾಗಿತ್ತು. ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಜೀವರಾಜ್ ತಮ್ಮ ಮಾತಿನಲ್ಲೇ, ಈ ಕುರಿತ ಸೂಚನೆಗಳನ್ನು ನೀಡಿದ್ದರು.

ಪ್ರಕರಣವನ್ನು ಕೂಲಂಕಷವಾಗಿ ಗಮನಿಸಿದಾಗ ಇದು ಕುಡುಕನೊಬ್ಬನಿಂದ ನಡೆದ ಅಚಾತುರ್ಯದಂತೆ ಕಾಣುತ್ತಿಲ್ಲ. ಆರೋಪಿ ಮಿಲಿಂದ್ ಮೇಲೆ ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿವೆ. ಆತನಿಗೆ ಕ್ರಿಮಿನಲ್ ಹಿನ್ನೆಲೆಯಿದೆ. ಎರಡು ಕಳವು ಆರೋಪಗಳು ಈತನ ಮೇಲಿದೆ ಮಾತ್ರವಲ್ಲ, ಈತನಿಗೆ ಸಂಘಪರಿವಾರ ಮುಖಂಡರ ನಂಟಿರುವುದೂ ಬೆಳಕಿಗೆ ಬಂದಿವೆ. ಕುಡುಕನಿಗೆ ತಾನು ಹೋಗಿರುವುದು ಮಸೀದಿಗೆ ಎನ್ನುವುದರ ಸ್ಪಷ್ಟ ಅರಿವಿತ್ತು. ಅಷ್ಟೇ ಅಲ್ಲ, ಅಲ್ಲಿದ್ದ ಬ್ಯಾನರ್ ಒಂದನ್ನು ನೇರವಾಗಿ ಶಂಕರಾಚಾರ್ಯರ ಪ್ರತಿಮೆಯ ಬಳಿಯೇ ಹಾಕಿದ್ದು ಆಕಸ್ಮಿಕವಂತೂ ಅಲ್ಲ. ಮರುದಿನ, ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿರುವುದು ಸಂಶಯಗಳಿಗೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ. ಇದರ ಬೆನ್ನಿಗೇ ಮಾಜಿ ಸಚಿವ ಸಹಿತ ಸಂಘಪರಿವಾರ ನಡೆಸಿದ ದಾಂಧಲೆಗಳು ಏನನ್ನು ಹೇಳುತ್ತವೆ? ಮಾಜಿ ಸಚಿವರ ದಂಡು ಕೂಡ ಮದ್ಯ ಸೇವಿಸಿತ್ತೆ? ಶೃಂಗೇರಿ ಘಟನೆಯ ಜೊತೆಗೆ ಯಾವೊಂದು ಸಂಬಂಧವೂ ಇಲ್ಲದ, ಪ್ರವಾದಿ ನಿಂದನೆಯನ್ನು ಪೊಲೀಸರ ಸಮ್ಮುಖದಲ್ಲೇ ಮಾಜಿ ಸಚಿವ ಜೀವರಾಜ್ ಸಮರ್ಥಿಸುವಾಗ ಅವರು ಮದ್ಯ ಸೇವಿಸಿದ್ದರೇ? ಈ ಬಗ್ಗೆಯೂ ಪೊಲೀಸರು ಸ್ಪಷ್ಟನೆಯನ್ನು ನೀಡಬೇಕಾಗಿದೆ.

ಆರೋಪಿ ಮಿಲಿಂದ್ ಪೂಜಾರಿ, ಮಾಜಿ ಸಚಿವ ಜೀವರಾಜ್ ಮತ್ತು ಇವರ ತಂಡ ಕೋಮುದ್ವೇಷದ ಮದ್ಯವನ್ನು ಕುಡಿದು ಶೃಂಗೇರಿಗೆ ಬೆಂಕಿ ಹಚ್ಚಲು ಯತ್ನಿಸಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ, ಇಲ್ಲಿ ಆರೋಪಿ ಮಿಲಿಂದ್ ಪೂಜಾರಿ ಮಾತ್ರವಲ್ಲ, ತಮ್ಮ ಉದ್ವಿಗ್ನಕಾರಿ ಮಾತುಗಳ ಮೂಲಕ ಅನಾಹುತವೊಂದಕ್ಕೆ ಸಂಚು ರೂಪಿಸಿದ ಮಾಜಿ ಸಚಿವರೂ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದಾರೆ. ಪೊಲೀಸರು ಅವರ ಮೇಲೆ ಪ್ರಕರಣವನ್ನು ದಾಖಲಿಸಬೇಕು. ಹಾಗೆಯೇ, ಬೆಂಗಳೂರಿನ ಹಿಂಸಾಚಾರದ ಹಿಂದಿರುವ ಪ್ರವಾದಿ ನಿಂದನೆಗೈದ ವ್ಯಕ್ತಿಗಳಿಗೂ, ಈ ವ್ಯಕ್ತಿಗಳಿಗೂ ಇರುವ ನಂಟಿನ ಕುರಿತಂತೆಯೂ ತನಿಖೆಯಾಗಬೇಕು. ಇಲ್ಲವಾದರೆ, ಈ ದುಷ್ಟಶಕ್ತಿಗಳು ನಾಡಿನ ಅಳಿದುಳಿದ ಶಾಂತಿಯನ್ನೂ ಕೆಡಿಸಿ ಅಟ್ಟಹಾಸಗೈಯುವುದರಲ್ಲಿ ಅನುಮಾನವಿಲ್ಲ. ಇದೇ ಸಂದರ್ಭದಲ್ಲಿ, ಯಾವುದೇ ಕೋಮು ಉದ್ವಿಗ್ನಕಾರಿ ಘಟನೆಗಳು ನಡೆದಾಗ, ಆ ಕುರಿತಂತೆ ಸಂಯಮವನ್ನು ಪಾಲಿಸುವುದು ಜನತೆಯ ಆದ್ಯ ಕರ್ತವ್ಯವಾಗಿದೆ. ದುಷ್ಕರ್ಮಿಗಳ ಉದ್ದೇಶವೇ ದ್ವೇಷವನ್ನು ಹರಡಿ, ಸಮಾಜವನ್ನು ಒಡೆಯುವುದು. ಸಾಮಾಜಿಕ ತಾಣಗಳು ಮತ್ತು ಮಾಧ್ಯಮಗಳನ್ನು ಇದಕ್ಕಾಗಿ ಈ ಶಕ್ತಿಗಳು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿವೆ. ಆದುದರಿಂದ, ಯಾವುದೇ ಉದ್ವಿಗ್ನಕಾರಿ ಸುದ್ದಿಗಳನ್ನು ಅಥವಾ ವದಂತಿಗಳನ್ನು ಜನರು ತಾಳ್ಮೆಯಿಂದ ಸ್ವೀಕರಿಸಬೇಕು. ಸಾಮಾಜಿಕ ಜಾಲತಾಣಗಳ ಯಾವುದೇ ವಿಷಕಾರಿ ಹೇಳಿಕೆಗಳಿಗೆ ಪ್ರತಿಕ್ರಿಯಿಸದೆ ಅವುಗಳನ್ನು ಕಾನೂನಿನ ಮೂಲಕ, ಪ್ರಜಾಸತ್ತಾತ್ಮಕ ದಾರಿಯಲ್ಲೇ ಎದುರಿಸಬೇಕು. ಈ ಮೂಲಕ ಸಮಾಜ ವಿರೋಧಿ ಶಕ್ತಿಗಳ ಸಂಚನ್ನು ವಿಫಲಗೊಳಿಸಬೇಕಾಗಿದೆ. ನಾಡನ್ನು ಕೆಡಹುವವರ ನಡುವೆ ಕಟ್ಟುವವರು ಒಂದಾಗಬೇಕಾದ ಸಂದರ್ಭ ಇದು ಎನ್ನುವುದನ್ನು ನಾವು ಬೆಂಗಳೂರು ಮತ್ತು ಶೃಂಗೆೀರಿ ಘಟನೆಗಳಿಂದ ಕಲಿಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News