ಚಂದ್ರನ ಮೇಲೆ ಸಾರಾಭಾಯ್ ಕುಳಿ ಪತ್ತೆ ಮಾಡಿದ ಚಂದ್ರಯಾನ-2 ಆರ್ಬಿಟರ್

Update: 2020-08-15 03:48 GMT
ಫೋಟೊ ಕೃಪೆ: Isro

ಹೊಸದಿಲ್ಲಿ, ಆ.15: ಚಂದ್ರಯಾನ-2 ಮಿಷನ್‌ನ ಆರ್ಬಿಟರ್‌ನಲ್ಲಿ ಅಳವಡಿಸಿರುವ ಕಣಿವೆ ಮ್ಯಾಪಿಂಗ್ ಕ್ಯಾಮೆರಾ ಚಂದ್ರನ ಮೇಲ್ಮೈನಲ್ಲಿ ಸಾರಾಭಾಯ್ ಕುಳಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಭಾರತದ ಬಾಹ್ಯಾಕಾಶ ಯೋಜನೆಯ ಜನಕ ಎಂದೇ ಗುರುತಿಸ್ಪಡುವ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಚಂದ್ರನ ಮೇಲಿರುವ ಈ ಕುಳಿಗೆ ಇಡಲಾಗಿತ್ತು. ಈ ಕುಳಿಯಿಂದ 300 ಕಿಲೋಮೀಟರ್ ಪೂರ್ವಕ್ಕೆ ಅಮೆರಿಕದ ಅಪೋಲೊ 17 ಮತ್ತು ಸೋವಿಯತ್ ಉಡಾಯಿಸಿದ ಲೂನಾ 21 ಮಿಷನ್‌ಗಳಿವೆ.

ಟಿಎಂಸಿ-2 ಡಿಜಿಟಲ್ ಎಲೆವೇಶನ್ ಮಾಡೆಲ್ ಮತ್ತು ಆರ್ಥೊ ಇಮೇಜ್ ಬಳಸಿಕೊಂಡು ಜುಲೈ 30ರಂದು ಈ ಕುಳಿಯ ಮೂರು ಆಯಾಮಗಳ ದೃಶ್ಯ ಸೃಷ್ಟಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಪ್ರಕಟಿಸಿದೆ. ವಿಕ್ರಮ್ ಸಾರಾಭಾಯ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲೇ ಚಂದ್ರಯಾನ-2 ಆರ್ಬಿಟರ್ ಈ ಕುಳಿಯನ್ನು ಪತ್ತೆ ಮಾಡಿರುವುದು ಸಂತಸ ತಂದಿದೆ. ಡಾ.ಸಾರಾಭಾಯ್ ಅವರ ಹೆಸರನ್ನು ಈ ಕುಳಿಗೆ ಬಹಳಷ್ಟು ಹಿಂದೆಯೇ ಇಡಲಾಗಿದ್ದರೂ, ನಮ್ಮ ಮೂನ್ ಆರ್ಬಿಟರ್ ಇದನ್ನು ಸೆರೆಹಿಡಿಯಬೇಕು ಎಂದು ಬಯಸಿದ್ದವು. ಅದು ಚೆನ್ನಾಗಿ ಆ ಕೆಲಸ ಮಾಡಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ಆಗಸ್ಟ್ 12ರಂದು ಡಾ.ಸಾರಾಭಾಯ್ ಅವರ ಜನ್ಮ ಶತಮಾನೋತ್ಸವ ಪೂರ್ಣಗೊಂಡಿದ್ದು, ಅವರಿಗೆ ಈ ಮೂಲಕ ವಿಶಿಷ್ಟ ನಮನ ಸಲ್ಲಿಸಲಾಗಿದೆ ಎಂದು ಬಾಹ್ಯಾಕಾಶ ವಿಭಾಗ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News