ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ: ಕೊರೋನ ಯೋಧರಿಗೆ ಸೆಲ್ಯೂಟ್

Update: 2020-08-15 04:51 GMT

ಹೊಸದಿಲ್ಲಿ, ಆ.15: ಪ್ರಧಾನಮಂತ್ರಿ ನರೇಂದ್ರ ಮೋದಿ 74ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ಶನಿವಾರ ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ದೇಶವನ್ನು ಉದ್ದೇಶಿಸಿ ಏಳನೇ ಬಾರಿ ಭಾಷಣ ಮಾಡಿದರು. ಆತ್ಮನಿರ್ಭರ ಭಾರತ, ರಕ್ಷಣೆ,ಕೃಷಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಹಾಗೂ ಮಹಿಳಾ ಸಬಲೀಕರಣ ಹಾಗೂ ಅಂತರ್‌ರಾಷ್ಟ್ರೀಯ ಬಾಂಧವ್ಯ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಕೊರೋನ ವೈರಸ್ ಹಾವಳಿಯ ನಡುವೆ ಪ್ರಧಾನಿ ಅವರು ವೈರಸ್‌ನ್ನು ಮಣಿಸಲು ಶ್ರಮಿಸುತ್ತಿರುವ ಕೊರೋನ ಯೋಧರನ್ನು ಶ್ಲಾಘಿಸಿದರು.

"ದೇಶಕ್ಕಾಗಿ ದಣಿವಿಲ್ಲದೆ ಶ್ರಮಿಸುತ್ತಿರುವ ಕೊರೋನ ವಾರಿಯರ್ಸ್‌ಗೆ ನಾನು ಸೆಲ್ಯೂಟ್ ಮಾಡುವೆ. ಈ ಹೋರಾಟದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುವೆ. ದೇಶದ ಉಜ್ವಲ ಭವಿಷ್ಯಕ್ಕೆ ಕೊರೋನ ಅಡ್ಡಿಯಾಗಿದೆ. ಕೊರೋನ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದು, ದೇಶದಲ್ಲಿ ಮೂರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ವಿಜ್ಞಾನಿಗಳು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಅಪಾರ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ'' ಎಂದರು.

ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಆಗುವುದು ದೇಶಕ್ಕೆ ಅತ್ಯಂತ ಅಗತ್ಯ ಇದೆ. ದೇಶದ ಎಲ್ಲ ಜನರಿಗೂ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಪ್ರಧಾನಿ ಪ್ರಕಟಿಸಿದರು.

ಕೆಂಪುಕೋಟೆಯಲ್ಲಿ ನಡೆದಿದ್ದ ಸ್ವಾತಂತ್ರೋತ್ಸವದಲ್ಲಿ ರಾಜತಾಂತ್ರಿಕರು, ಅಧಿಕಾರಿಗಳು ಹಾಗೂ ಮಾಧ್ಯಮ ಸಿಬ್ಬಂದಿ ಸಹಿತ 4,000 ಅಧಿಕ ಮಂದಿ ಭಾಗವಹಿಸಿದರು. ಸುರಕ್ಷಿತ ಅಂತರ ಹಾಗೂ ಮಾಸ್ಕ್‌ಗಳನ್ನು ಧರಿಸುವುದರೊಂದಿಗೆ ಸುರಕ್ಷತ ಶಿಷ್ಟಾಚಾರಗಳನ್ನು ಪಾಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News