ಮೂರು ಕೋವಿಡ್ ಲಸಿಕೆಗಳು ಪರೀಕ್ಷೆಯ ವಿವಿಧ ಹಂತದಲ್ಲಿವೆ: ಪ್ರಧಾನಿ ಮೋದಿ

Update: 2020-08-15 08:00 GMT

ಹೊಸದಿಲ್ಲಿ, ಆ.15: "ಕೊರೋನ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದು, ದೇಶದಲ್ಲಿ ಮೂರು ಲಸಿಕೆಗಳು ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ವಿಜ್ಞಾನಿಗಳು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಅಪಾರ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ. ಲಸಿಕೆಯನ್ನು ಪ್ರತಿಯೊಬ್ಬ ಭಾರತೀಯನಿಗೂ ತಲುಪುವಂತೆ ಸರಕಾರವು ಯೋಜನೆ ರೂಪಿಸಿಕೊಂಡಿದೆ''ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ತಮ್ಮ ಭಾಷಣದ ವೇಳೆ ಹೇಳಿದ್ದಾರೆ.

ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸಲು ಡಿಜಿಟಲ್ ಹೆಲ್ತ್ ಮಿಷನ್‌ನ್ನು ಘೋಷಿಸಿರುವ ಪ್ರಧಾನಿ,ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಗುರುತುಪತ್ರ ನೀಡಲಾಗುವುದು ಎಂದರು.

"ಕೊರೋನಕ್ಕೆ ಸಂಬಂಧಿಸಿದ ಮೂರು ಲಸಿಕೆಗಳು ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ವಿಜ್ಞಾನಿಗಳು ನಮಗೆ ಅನುಮತಿ ನೀಡಿದರೆ, ಲಸಿಕೆ ಉತ್ಪಾದನೆಯ ಯೋಜನೆಯೊಂದಿಗೆ ನಾವು ಸಿದ್ಧರಾಗುತ್ತೇವೆ.ಲಸಿಕೆ ಪ್ರತಿಯೊಬ್ಬ ಭಾರತೀಯನಿಗೆ ಹೇಗೆ ತಲುಪುತ್ತದೆ ಎಂಬ ಕುರಿತು ನಾವು ಮಾರ್ಗಸೂಚಿಯನ್ನು ಸಿದ್ದಪಡಿಸಿದ್ದೇವೆ'' ಎಂದು ಪ್ರಧಾನಿ ಹೇಳಿದರು.

ದೇಶಾದ್ಯಂತ ಕೊರೋನ ವೈರಸ್ ಪ್ರಕರಣ ಉಲ್ಬಣಗೊಳ್ಳುತ್ತಿರುವ ಕಾರಣ ಲಸಿಕೆ ಉತ್ಪಾದಿಸುವ ದೇಶಗಳಲ್ಲಿ ಭಾರತವೂ ಒಂದು. ಪಟ್ಟಿಮಾಡದ ಲಸಿಕೆ ತಯಾರಕ ಭಾರತ್ ಬಯೋಟಕ್ ಇಂಟರ್‌ನ್ಯಾಶನಲ್ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲು ನಿಯಂತ್ರಕ ಅನುಮೋದನೆಯನ್ನು ಪಡೆದಿದೆ. ಝಿಡಸ್ ಕ್ಯಾಡಿಲಾ ಹಾಗೂ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ಕೂಡ ಲಸಿಕೆಗಳನ್ನು ಪರೀಕ್ಷಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News