ಸರಕಾರ ಈವರೆಗೂ ಯಾವುದೇ ಭದ್ರತೆ ನೀಡಿಲ್ಲ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆರೋಪ

Update: 2020-08-15 16:12 GMT

ಬೆಂಗಳೂರು, ಆ. 15: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ರಾಜ್ಯ ಸರಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿದ್ದು, ಘಟನೆ ಸಂಬಂಧ ಹೈಕೋರ್ಟಿನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಗಲಭೆ ಸತ್ಯಶೋಧನೆಗಾಗಿ ಕೆಪಿಸಿಸಿ ರಚಿಸಿರುವ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮೇಲ್ಮನೆ ಸದಸ್ಯ ಹರಿಪ್ರಸಾದ್, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರೊಂದಿಗೆ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಘಟನೆ ಸಂಬಂಧ ಸಮಗ್ರ ಮಾಹಿತಿ ಸಂಗ್ರಹಿಸಿ ಪಕ್ಷದ ಅಧ್ಯಕ್ಷರಿಗೆ ವರದಿ ನೀಡಲಿದ್ದೇವೆ. `ದಲಿತ ಶಾಸಕರಿಗೆ ರಕ್ಷಣೆ ಇಲ್ಲ' ಎಂದು ಸಚಿವರು, ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ. ಆದರೆ, ರಕ್ಷಣೆ ನೀಡುವ ಜವಾಬ್ದಾರಿ ಯಾರದ್ದು? ಸರಕಾರ ಮೊದಲು ಆ ಕೆಲಸವನ್ನು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಘಟನೆ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಇರಲಿಲ್ಲವೇ? ಗುಪ್ತಚರ ಇಲಾಖೆ ವಿಫಲವಾಗಿದೆಯೇ? ಘರ್ಷಣೆ ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ತನಿಖೆಯಿಂದ ಸತ್ಯಾಂಶ ಗೊತ್ತಾಗಲಿದೆ. ಘಟನೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಸಂಪೂರ್ಣ ನಾಶವಾಗಿದೆ. ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳಿಗೂ ಹಾನಿಯಾಗಿದೆ. ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮುನೇಗೌಡ ಎಂಬವರ ಮನೆಗೂ ಬೆಂಕಿ ಹಾಕಿದ್ದಾರೆ ಎಂದರು.

ಮಕ್ಕಳು-ಮಹಿಳೆಯರ ಬಂಧನ: ಘಟನೆ ಸಂಬಂಧ ಮಹಿಳೆಯರು, ಮಕ್ಕಳನ್ನ ಬಂಧಿಸಲಾಗುತ್ತಿದೆ. ತಪ್ಪಿತಸ್ಥರನ್ನು ಬಂಧಿಸಲು ಯಾರೂ ವಿರೋಧಿಸುವುದಿಲ್ಲ. ಹತ್ತು ವರ್ಷದೊಳಗಿನ ಮಕ್ಕಳ ಬಂಧಿಸಿದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಒಬ್ಬ ಹುಡುಗನನ್ನು ಬಂಧಿಸಿದ್ದು, ಬಂಧನದ ಬಳಿಕ ಆತನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ. ಸರಕಾರ ಇದಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಆಗ್ರಹಿಸಿದರು.

ದಿಕ್ಕು ತಪ್ಪಿಸಬೇಡಿ: ರಾಜ್ಯ ಸರಕಾರ ಘಟನೆಯ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಬೆಳಕಿಗೆ ತರಬೇಕು. ಅದು ಬಿಟ್ಟು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುವುದು ಸಲ್ಲ. ಅಮಾಯಕ ಬಂಧನವನ್ನು ಕೂಡಲೇ ನಿಲ್ಲಿಸಬೇಕು. ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರ ಕ್ಷೇತ್ರದಲ್ಲಿ ಮೌಲ್ವಿಯನ್ನು ಬಂಧಿಸಿದ್ದು, ಪ್ರಾರ್ಥನೆಗೆ ಬಂದವರನ್ನು ಬಂಧಿಸುವ ಮೂಲಕ ಆತಂಕದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಪರಮೇಶ್ವರ್ ದೂರಿದರು.

ಘಟನೆ ಸಂಬಂಧ ಶಾಸಕರು, ಸ್ಥಳೀಯ ಮುಖಂಡರು, ಡಿಸಿಪಿ ಸೇರಿದಂತೆ ಅನೇಕರ ಅಭಿಪ್ರಾಯ ಪಡೆದಿದ್ದೇವೆ. ಇನ್ನೂ ಅನೇಕ ಮಂದಿಯ ಅಭಿಪ್ರಾಯ ಸಂಗ್ರಹಿಸಬೇಕಿದೆ. ಆ ಬಳಿಕ ವರದಿ ಸಲ್ಲಿಸುತ್ತೇವೆ ಎಂದ ಅವರು, ಎಸ್‍ಡಿಪಿಐ ಒಂದು ರಾಜಕೀಯ ಪಕ್ಷ. ಅವರು ಕೆಲವು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಾವು ಎಸ್‍ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ತನಿಖೆಗೆ ಮೊದಲೇ ಎಸ್‍ಡಿಪಿಐನಿಂದಲೇ ಘಟನೆ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಅಮಾಯಕರಿಗೆ ಕಿರುಕುಳ ನೀಡುವುದು ಸರಿಯಲ್ಲ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಂಧಿಸಲಿ. ಆದರೆ, ಘಟನೆಯಲ್ಲಿ ಭಾಗಿಯಾಗದವರನ್ನು ಬಂಧಿಸಲಾಗುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ. ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ಆದರೆ, ನೋಟಿಸ್ ನೀಡುವುದು ಪೊಲೀಸ್ ಇಲಾಖೆ

-ಕೆ.ಜೆ.ಜಾರ್ಜ್, ಮಾಜಿ ಸಚಿವ

ಶಾಸಕನಿಗೆ ರಕ್ಷಣೆ ಇಲ್ಲ ಎಂದರೆ ಇನ್ನೂ ಜನ ಸಾಮಾನ್ಯರ ಪಾಡೇನು. ಉದ್ದೇಶಪೂರ್ವಕವಾಗಿಯೇ ನನ್ನ ಮನೆ ಮೇಲೆ ದಾಳಿ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಬಹಳ ದಿನಗಳಿಂದ ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಜೀವನ ನಡೆಸುತ್ತಿದ್ದೇವೆ. ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಭದ್ರತೆ ಕಲ್ಪಿಸುವ ಭರವಸೆ ನೀಡಿದ್ದ ಸರಕಾರ ಈವರೆಗೂ ಯಾವುದೇ ಭದ್ರತೆಯನ್ನು ನೀಡಿಲ್ಲ'

-ಅಖಂಡ ಶ್ರೀನಿವಾಸಮೂರ್ತಿ, ಪುಲಕೇಶಿನಗರ ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News