ಮನುವಾದಿಗಳಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಿದೆ: ಎಸ್.ಆರ್.ಹಿರೇಮಠ

Update: 2020-08-15 18:33 GMT

ಬೆಂಗಳೂರು, ಆ.15: ಮನುವಾದಿಗಳು ದೇಶವನ್ನು ಮತ್ತೆ ದಾಸ್ಯದ ಸಂಕೋಲೆಗೆ ತೆಗೆದುಕೊಂಡು ಹೋಗುವ ದಿನಗಳು ದೂರವಿಲ್ಲ. ಹೀಗಾಗಿ ದೇಶದ ಬಹುಜನತೆ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಬೇಕಿದೆ ಎಂದು ಹೋರಾಟಗಾರ, ಚಿಂತಕ ಎಸ್.ಆರ್.ಹಿರೇಮಠ ತಿಳಿಸಿದ್ದಾರೆ.

ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ರಾಜ್ಯ ರೈತ ಸಂಘವು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಕೇಂದ್ರ ಸರಕಾರದ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಮುಂದಿನ ಜೀವನ ಮನುವಾದಿಗಳ ವಿರುದ್ಧದ ಹೋರಾಟದಲ್ಲಿ ಕಳೆಯುತ್ತೇನೆಂದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿವೆ. ದೇಶಾದ್ಯಂತ ಬಡತನ, ನಿರುದ್ಯೋಗ ತಾಂಡವವಾಡುತ್ತಿದೆ. ಇದನ್ನು ಬಗೆಹರಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಧೋರಣೆ ತಾಳಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಸೆಟೆದು ನಿಲ್ಲಬೇಕಾಗಿದೆ ಎಂದು ಅವರು ಕರೆ ನೀಡಿದರು.

ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಜಾಪ್ರಭುತ್ವದಡಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಿಗೆ, ಆರೆಸ್ಸೆಸ್ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿವೆ. ಹೀಗಾಗಿ ಸರಕಾರದ ನೇತೃತ್ವದಲ್ಲಿಯೇ ಸಂವಿಧಾನದ ಆಶಯಗಳನ್ನು ನಾಶವಾಗುತ್ತಿವೆ ಎಂದು ಆರೋಪಿಸಿದರು.

ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವುದೇ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಮಾನತೆಯ ಆಶಯಗಳನ್ನೊಳಗೊಂಡ ಸಂವಿಧಾನವನ್ನು ನಾಶಮಾಡಿ ಮನುಸಂಸ್ಕೃತಿಯನ್ನು ಜಾರಿ ಮಾಡಲು. ಆ ಮೂಲಕ ಮೌಢ್ಯತೆ, ಅಜ್ಞಾನವನ್ನೇ ಕಾನೂನುಗಳನ್ನಾಗಿ ರೂಪಿಸುವುದಕ್ಕಾಗಿ. ಇದಕ್ಕೆ ನಾವು ಅವಕಾಶ ಮಾಡಿಕೊಡಬಾರದೆಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಬಡಗಲಪುರ ನಾಗೇಂದ್ರ, ದಸಂಸದ ಗುರುಪ್ರಸಾದ್ ಕೆರೆಗೋಡ್, ವಿ.ನಾಗರಾಜ್, ರೈತ ಸಂಘದ ಗೋಪಾಲ್, ಜನಪದ ಹಾಡುಗಾರರಾದ ಜನಾರ್ದನ್(ಜನ್ನಿ), ಗೋಪಾಲಕೃಷ್ಣ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News