ಗೃಹ ಸಚಿವ ಬೊಮ್ಮಾಯಿ ಬಗ್ಗೆ ಏಕವಚನ ಬಳಕೆ: ಡಿ.ಕೆ.ಶಿವಕುಮಾರ್ ವಿಷಾದ

Update: 2020-08-15 18:40 GMT

ಬೆಂಗಳೂರು, ಆ.15: ನಗರದ ಕೆ.ಜಿ. ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಏಕವಚನ ಪ್ರಯೋಗವಾದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರ ಬಗ್ಗೆ, ಅವರು ಅಲಂಕರಿಸಿರುವ ಗೃಹ ಸಚಿವ ಸ್ಥಾನದ ಬಗ್ಗೆ ತಮಗೆ ಗೌರವವಿದೆ. ಉದ್ದೇಶಪೂರ್ವಕವಾಗಿ ತಾವು ಏಕವಚನ ಬಳಸಲಿಲ್ಲ. ಮಾತಿನ ಓಘದಲ್ಲಿ ಪ್ರಮಾದವಶಾತ್ ಪ್ರಯೋಗವಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿಸಿಎಂ ಸವದಿ ಟೀಕೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಏಕವಚನದಲ್ಲಿ ಮಾತನಾಡಿದ್ದೀರಿ. ಇಷ್ಟು ದಿನ ನೀವೊಬ್ಬ ಹಿರಿಯ ರಾಜಕಾರಣಿ ಎಂದು ನಿಮ್ಮ ಮೇಲಿದ್ದ ಗೌರವವನ್ನೆಲ್ಲಾ ಇಂದು ಕಳಕೊಂಡಿದ್ದೀರಿ. ವಿರೋಧಿಗಳೇ ಇರಬಹುದು. ಆದರೆ, ಹಿರಿಯ ರಾಜಕಾರಣಿಯೊಬ್ಬರ ಬಗ್ಗೆ ಈ ಹೇಳಿಕೆ ಖಂಡನೀಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಟ್ವೀಟ್ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ನಿಮಗೆ ಪಕ್ಷದೊಳಗೆ ಸಿಗಬೇಕಾದ ಗೌರವ ಸಿಗದಿದ್ದರ ಹತಾಶೆಯನ್ನು ನೀವು ಈ ರೀತಿ ಹೊರ ಹಾಕುತ್ತಿರುವುದು ನೋಡಿ ನಿಮ್ಮ ಮೇಲೆ ಮರುಕು ಉಂಟಾಗುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News