ನ್ಯಾಯಕ್ಕೆ ಇದು ‘ಭೂಷಣ’ವಲ್ಲ!

Update: 2020-08-17 04:09 GMT

‘‘ನಾವು ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ’’ ಎಂದು ಸಂಸದರೊಬ್ಬರು ಬಹಿರಂಗವಾಗಿ ಹೇಳಿಕೆ ನೀಡಿದರೆ ನ್ಯಾಯ ವ್ಯವಸ್ಥೆ ಕಿವುಡು ನಟಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಯೊಬ್ಬ ‘‘ದೇಶ ಹಿಂದೂ ರಾಷ್ಟ್ರವಾಗಬೇಕು’’ ಎಂದಾಗಲೂ ಅದು ಸಂವಿಧಾನಕ್ಕೆ, ಆ ಮೂಲಕ ತನಗೇ ಹಾಕಿದ ಸವಾಲು ಎಂದು ನ್ಯಾಯಾಲಯಕ್ಕೆ ಅನ್ನಿಸುವುದಿಲ್ಲ. ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಈ ದೇಶದ ಪ್ರಜಾಸತ್ತೆಗೆ, ಸಂವಿಧಾನಕ್ಕೆ ಸವಾಲು ಹಾಕುವ ಹತ್ತು ಹಲವು ಹೇಳಿಕೆಗಳು ಪ್ರಕಟವಾಗುತ್ತಲೇ ಇವೆಯಾದರೂ ಅದನ್ನು ನ್ಯಾಯಾಂಗ ನಿಂದನೆಯಾಗಿ ಗುರುತಿಸಲಿಲ್ಲ. ಆದರೆ ಯಾವಾಗ ಸಂವಿಧಾನ ಮತ್ತು ನ್ಯಾಯವ್ಯವಸ್ಥೆಯ ಕುರಿತಂತೆ ಈ ದೇಶದ ಹಿರಿಯ ವಕೀಲ, ಚಿಂತಕರೊಬ್ಬರು ಕಾಳಜಿ ವ್ಯಕ್ತಪಡಿಸಿ ಟ್ವಿಟರ್‌ನಲ್ಲಿ ಹೇಳಿಕೆ ನೀಡಿದರೋ, ತಕ್ಷಣ ನ್ಯಾಯಾಲಯ ಸ್ವಯಂ ದೂರು ದಾಖಲಿಸಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತದೆ. ‘ದೇಶದ ಸಂವಿಧಾನವನ್ನು ಅಧಿಕಾರದಲ್ಲಿರುವ ನಾಯಕರು ಹಂತಹಂತವಾಗಿ ಸಾಯಿಸುತ್ತಿದ್ದಾರೆ, ನ್ಯಾಯವ್ಯವಸ್ಥೆಯನ್ನು ಕೊಂಡು ಕೊಳ್ಳುತ್ತಿದ್ದಾರೆ’ ಎಂಬ ಆರೋಪಗಳು ಈವರೆಗೆ ಕೇಳಿ ಬರುತ್ತಿತ್ತು. ಆದರೆ ಪ್ರಶಾಂತ್ ಭೂಷಣ್ ‘ನ್ಯಾಯಾಂಗ ನಿಂದನೆ’ ಪ್ರಕರಣದಲ್ಲಿ, ನ್ಯಾಯ ವ್ಯವಸ್ಥೆಯೇ ಆತ್ಮಹತ್ಯೆಯ ದಾರಿಯನ್ನು ಹಿಡಿದಿದೆಯೇ ಎಂದು ಆತಂಕ ಪಡಬೇಕಾದ ಸ್ಥಿತಿ ನಮ್ಮದಾಗಿದೆ.

ಪ್ರಶಾಂತ್ ಭೂಷಣ್ ಅವರು ಮಾಡಿರುವ ಟ್ವೀಟ್ ಇಂತಿದೆ ‘‘ಭವಿಷ್ಯದಲ್ಲಿ ಇತಿಹಾಸಕಾರರು ಕಳೆದ ಆರು ವರ್ಷಗಳ ಬಗ್ಗೆ ಬರೆಯುವಾಗ, ಹೇಗೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸದೆಯೂ ಪ್ರಜಾತಂತ್ರವನ್ನು ನಾಶ ಮಾಡಲಾಯಿತು ಎಂದು ದಾಖಲಿಸುವಾಗ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ನ ಪಾತ್ರವನ್ನು ಅದರಲ್ಲೂ ನಿರ್ದಿಷ್ಟವಾಗಿ ಸುಪ್ರೀಂಕೋರ್ಟ್‌ನ ಹಿಂದಿನ ನಾಲ್ಕು ಮುಖ್ಯ ನ್ಯಾಯಾಧೀಶರ ಪಾತ್ರವನ್ನು ಗುರುತಿಸುತ್ತಾರೆ’’. ಈ ಟ್ವೀಟ್‌ನಲ್ಲಿ ಪ್ರಶಾಂತ್ ಭೂಷಣ್ ಅವರು ನಿಂದನೆ ಮಾಡಿದ್ದಾರೆ ಎನ್ನುವುದಕ್ಕಿಂತ ನ್ಯಾಯ ವ್ಯವಸ್ಥೆಯ ದೌರ್ಬಲ್ಯಗಳನ್ನು ಗುರುತಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಜಾಸತ್ತೆಯ ಅಳಿವುಉಳಿವಿನಲ್ಲಿ ಅತಿ ದೊಡ್ಡ ಪಾತ್ರವನ್ನು ವಹಿಸುವ ನ್ಯಾಯ ವ್ಯವಸ್ಥೆ ಹಾದಿ ತಪ್ಪಿದಾಗ, ಅದನ್ನು ಪ್ರಭುತ್ವ ತನ್ನ ನಿಯಂತ್ರಣದಲ್ಲಿಡಲು ಯತ್ನಿಸಿದಾಗ ಸಂವಿಧಾನ ತಜ್ಞರು, ಚಿಂತಕರು ನ್ಯಾಯ ವ್ಯವಸ್ಥೆಯ ಪರವಾಗಿ ನಿಂತು ಪ್ರಭುತ್ವವನ್ನು ಎದುರಿಸುತ್ತಾ ಬಂದುದು ಇಂದು ನಿನ್ನೆಯಲ್ಲ. ಇಂದಿರಾಗಾಂಧಿಯ ಕಾಲದಿಂದ ಹಿಡಿದು ನರೇಂದ್ರ ಮೋದಿಯ ಕಾಲದವರೆಗೂ ಇದು ನಡೆದು ಬಂದಿದೆ. ಇದೇ ಸಂದರ್ಭದಲ್ಲಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದಾಗ, ಜನರ ಪರವಾಗಿ ನ್ಯಾಯ ವ್ಯವಸ್ಥೆ ನಿಂತು, ಇಂದಿರಾಗಾಂಧಿ ಜೈಲು ಸೇರುವಂತೆ ಮಾಡಿತು. ಪ್ರಭುತ್ವ ತನ್ನ ಅಧಿಕಾರ ದುರುಪಯೋಗಗೊಳಿಸಿದಾಗೆಲ್ಲ, ಜನರು ಕಟ್ಟಕಡೆಯ ಆಶ್ರಯ ಎಂಬಂತೆ ನ್ಯಾಯಾಲಯದ ಮೊರೆ ಹೋಗುತ್ತಿದ್ದರು. ಆದುದರಿಂದ ಪ್ರಭುತ್ವ ದಾರಿ ತಪ್ಪಿದರೂ, ನ್ಯಾಯವ್ಯವಸ್ಥೆ ದಾರಿ ತಪ್ಪಬಾರದು. ಯಾವಾಗೆಲ್ಲ ನ್ಯಾಯ ವ್ಯವಸ್ಥೆ ತನ್ನ ಹೊಣೆಯನ್ನು ನಿಭಾಯಿಸಲು ವಿಫಲವಾಗಿದೆಯೋ ಆವಾಗೆಲ್ಲ ದೇಶದ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿದೆ. ಪ್ರಜಾಸತ್ತೆಯ ಮೂಲಕ ಅಧಿಕಾರ ಹಿಡಿದ ನಾಯಕರೊಬ್ಬರು ಸರ್ವಾಧಿಕಾರಿ ನಿಲುವುಗಳನ್ನು ಪದೇ ಪದೇ ತೆಗೆದುಕೊಳ್ಳುತ್ತಿದ್ದಾರೆೆ ಎಂದರೆ, ನ್ಯಾಯ ವ್ಯವಸ್ಥೆ ತನ್ನ ಹೊಣೆಗಾರಿಕೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದೇ ಅರ್ಥ. ಇದನ್ನೇ ಭೂಷಣ್ ಅವರು ತಮ್ಮ ಟ್ವೀಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿ ತಿ ನಿರ್ಮಾಣವಾಗಿದೆ ಎನ್ನುವ ಮಾತನ್ನು ಪ್ರಶಾಂತ್ ಭೂಷಣ್ ಅವರಷ್ಟೇ ಹೇಳಿರುವುದಲ್ಲ. ಹಲವು ನಾಯಕರು, ಚಿಂತಕರು ಈ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಘೋಷಿತ ತುರ್ತುಪರಿಸ್ಥಿತಿಗಿಂತ, ಪ್ರಜಾಸತ್ತೆಯ ಮರೆಯಲ್ಲಿ ಹೇರಲಾಗುವ ಅಘೋಷಿತ ತುರ್ತುಪರಿಸ್ಥಿತಿಯೇ ಹೆಚ್ಚು ಅಪಾಯಕಾರಿ. ಈ ಮೂಲಕ ಸಂವಿಧಾನದ ಹೆಸರನ್ನು ಬಳಸಿಕೊಂಡೇ ಸಂವಿಧಾನದ ವಿರುದ್ಧ ಪ್ರಭುತ್ವ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲಾರಂಭಿಸುತ್ತದೆ. ಸದ್ಯಕ್ಕೆ ದೇಶದಲ್ಲಿ ಇದೇ ನಡೆಯುತ್ತಿರುವುದು. ನ್ಯಾಯ ವ್ಯವಸ್ಥೆ ಅತ್ಯಂತ ನಿಷ್ಠುರವಾಗಿದ್ದರೆ, ಸಂವಿಧಾನ ಬದ್ಧವಾಗಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗಲು ಸಾಧ್ಯವಿಲ್ಲ. ನ್ಯಾಯಾಧೀಶರು ಸಂವಿಧಾನಕ್ಕೆ ಬೆನ್ನು ತಿರುಗಿಸಿ ಆಳುವವರ ಮುಖ ನೋಡಿ ತೀರ್ಪು ನೀಡುತ್ತಿದ್ದಾರೆ ಎನ್ನುವ ಆರೋಪ ದೇಶಾದ್ಯಂತ ಕೇಳಿ ಬರುತ್ತಿದೆ. ನ್ಯಾಯ ವ್ಯವಸ್ಥೆಯ ಕೆಲವು ಗೊಂದಲಕಾರಿ, ದುರ್ಬಲ ತೀರ್ಪುಗಳು ತೀವ್ರ ಚರ್ಚೆಗೊಳಗಾಗುತ್ತಿವೆ. ಸಂವಿಧಾನ, ಸಾಕ್ಷ, ದಾಖಲೆ ಯಾವುದನ್ನೂ ಆಧರಿಸದೆ, ನಾನು ಕೊಟ್ಟ ತೀರ್ಪನ್ನು ನೀವು ಒಪ್ಪಿಕೊಳ್ಳಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದಿದ ನ್ಯಾಯಾಧೀಶರು ನ್ಯಾಯವ್ಯವಸ್ಥೆಯೊಳಗೆ ಹೆಚ್ಚಾಗುತ್ತಿದ್ದಾರೆ. ಆದುದರಿಂದ, ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದಾದರೆ, ಅದರ ಹೊಣೆಯನ್ನು ನ್ಯಾಯ ವ್ಯವಸ್ಥೆ ಹೊರಲೇ ಬೇಕಾಗುತ್ತದೆ. ಈ ಕುರಿತಂತೆ ಪ್ರಶಾಂತ್ ಭೂಷಣ್ ಎಚ್ಚರಿಸಿದರೆ ಅದು ‘ನ್ಯಾಯಾಂಗ ನಿಂದನೆ’ ಹೇಗಾಗುತ್ತದೆ ಎನ್ನುವ ಗೊಂದಲ ಜನರಲ್ಲಿದೆ.

ಈ ಹಿಂದೆ ಸುಪ್ರೀಂಕೋರ್ಟ್‌ನ ಕೆಲವು ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಯ ಬಗ್ಗೆ ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದರು. ಸುಪ್ರೀಂಕೋರ್ಟ್‌ನ ಒಳಗಿನ ಈ ಭಿನ್ನಮತ ದೇಶಾದ್ಯಂತ ಚರ್ಚೆಗೊಳಗಾಗಿತ್ತು. ಆದರೆ ಅದು ‘ನ್ಯಾಯಾಂಗ ನಿಂದನೆ’ಯಾಗಿ ಗುರುತಿಸಲ್ಪಡಲಿಲ್ಲ. ಅವರ ಮೇಲೆ ಪ್ರಕರಣವೂ ದಾಖಲಾಗಲಿಲ್ಲ. ಅಂದು ಪತ್ರಿಕಾಗೋಷ್ಠಿ ಕರೆದವರೇ ಬಳಿಕ ನ್ಯಾಯಮೂರ್ತಿಯಾದರು. ಆದರೆ ಪ್ರಶಾಂತ್ ಭೂಷಣ್, ಆ ರೀತಿಯಲ್ಲಿ ನ್ಯಾಯವ್ಯವಸ್ಥೆಯ ಮಾನವನ್ನೇನೂ ಕಳೆಯಲಿಲ್ಲ. ಒಂದು ಟ್ವಿಟರ್‌ನಲ್ಲಿ ಈ ದೇಶದ ಪ್ರಜಾಸತ್ತೆಯ ಕುರಿತಂತೆ ಆತಂಕ ವ್ಯಕ್ತಪಡಿಸುವ ಸ್ವಾತಂತ್ರ ಒಬ್ಬ ಹಿರಿಯ ನ್ಯಾಯವಾದಿಗೆ ಇಲ್ಲ ಎಂದರೆ, ಈ ದೇಶದಲ್ಲಿ ಭೂಷಣ್ ಅವರು ಹೇಳಿದಂತೆ ‘ಅಘೋಷಿತ ತುರ್ತುಪರಿಸ್ಥಿತಿ’ ಇದೆ ಎಂದೇ ಅರ್ಥವಲ್ಲವೇ? ಮಹಿಳೆಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ನ್ಯಾಯಮೂರ್ತಿಯೊಬ್ಬರು ತಮಗೆ ತಾವೇ ಕ್ಲೀನ್ ಚಿಟ್ ನೀಡುತ್ತಾರೆ, ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಸಂಪೂರ್ಣ ದಮನಗೊಳಿಸಲಾಗಿದೆಯಾದರೂ ಈ ಬಗ್ಗೆ ಪ್ರಭುತ್ವದ ವಿರುದ್ಧ ಮಾತನಾಡಲು ನ್ಯಾಯ ವ್ಯವಸ್ಥೆ ಮೀನಾಮೇಷ ಎಣಿಸುತ್ತದೆ, ಸಿಎಎ ಕಾಯ್ದೆಯ ಕುರಿತಂತೆ ಸ್ಪಷ್ಟವಾಗಿ ಮಾತನಾಡಲು ಹಿಂಜರಿಯುತ್ತದೆ, ರಫೇಲ್ ಹಗರಣ ತನಿಖೆಯಾಗದಂತೆ ನೋಡಿಕೊಳ್ಳುತ್ತದೆ...ಇವೆಲ್ಲವೂ ನ್ಯಾಯಾಲಯ ಜನರ ಪರವಾಗಿಲ್ಲ, ಪ್ರಭುತ್ವದ ಪರವಾಗಿದೆ ಎನ್ನುವುದಕ್ಕಿರುವ ಉದಾಹರಣೆಗಳು. ಈ ಎಲ್ಲ ಪ್ರಕರಣಗಳ ಬಗ್ಗೆಯೂ ಭೂಷಣ್ ಧ್ವನಿಯೆತ್ತುತ್ತಾ ಬಂದಿದ್ದಾರೆ. ಪ್ರಶಾಂತ್ ಭೂಷಣ್ ಪ್ರಚಲಿತ ಸರಕಾರ ಮತ್ತು ಆಡಳಿತ ಪಕ್ಷದ ವಿಮರ್ಶಕ ಮತ್ತು ಮಾನವ ಹಕ್ಕುಗಳ ಪರ ಪರಿಣಾಮಕಾರಿ ಹೋರಾಟಗಾರ ಎಂಬುದೇ ಅವರ ವಿರುದ್ಧ ಈ ಧೋರಣೆ ತಾಳುವುದಕ್ಕೆ ಕಾರಣವಾಯಿತೆ ಎಂಬ ಸಂಶಯ ದೇಶದಲ್ಲಿ ಹಲವರನ್ನು ಕಾಡುತ್ತಿದೆ. ಇಂತಹ ವ್ಯಾಪಕ ಜನಾಭಿಪ್ರಾಯ ಪ್ರಜಾಸತ್ತೆಯ ಆರೋಗ್ಯದ ಲಕ್ಷಣವಲ್ಲ. ಭೂಷಣ್ ಅವರಿಗೆ ಶಿಕ್ಷೆಯಾದರೆ, ಮುಂದಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವ ಪದ ಬರೇ ಬೂಟಾಟಿಕೆಯಾಗಿ ಪದವಾಗಿ ಬಿಡಲಿದೆ. ಸರಕಾರವನ್ನು ದೂಷಿಸಿದರೆ ದೇಶದ್ರೋಹ, ನ್ಯಾಯ ಕೇಳಿದರೆ ನ್ಯಾಯಾಂಗ ನಿಂದನೆ ಎನ್ನುವ ವಾತಾವರಣದಲ್ಲಿ ಇಡೀ ದೇಶವೇ ಒಂದು ಜೈಲಾಗಿ ಪರಿವರ್ತನೆಯಾಗುವ ದಿನ ದೂರವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News