ಬಿಎಸ್‌ವೈಯನ್ನು ಭೇಟಿಯಾದ ಅಖಂಡ ಶ್ರೀನಿವಾಸಮೂರ್ತಿ: ಹಿಂಸಾಚಾರ ಪ್ರಕರಣದ ಸಿಬಿಐ ತನಿಖೆಗೆ ಮನವಿ

Update: 2020-08-17 14:31 GMT

ಬೆಂಗಳೂರು, ಆ. 17: `ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಪಕ್ಷವನ್ನು ಬಿಡುವ ಮಾತೇ ಇಲ್ಲ. ನನ್ನ ಮೇಲೆ ಯಾರಿಂದಲೂ ಯಾವುದೇ ರೀತಿಯ ಒತ್ತಡವೂ ಇಲ್ಲ. ನನ್ನ ರಕ್ತದಲ್ಲಿ ಇರೋದು ಕಾಂಗ್ರೆಸ್' ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಕೆ.ಜಿ.ಹಳ್ಳಿ-ಡಿ.ಜಿ.ಹಳ್ಳಿ ಗಲಭೆ ಸಂಬಂಧ ಸಿಎಂಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಮ್ಮ ತಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ನಾನು ಈ ಪಕ್ಷದಲ್ಲೇ ಇದ್ದೇನೆ. ಮಾಜಿ ಶಾಸಕ ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದರಿಂದ ನನಗೆ ಯಾವುದೇ ರೀತಿಯಲ್ಲಿ ತೊಂದರೆ ಇಲ್ಲ ಎಂದು ತಿಳಿಸಿದರು.

ಇನ್ನೂ ಭದ್ರತೆ ನೀಡಿಲ್ಲ: ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇನೆ. ನನಗೆ ಸರಕಾರ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ. ನನ್ನ ಮನೆಗೆ ಭದ್ರತೆ ನೀಡಿದ್ದಾರೆ. ನನಗೆ ಇನ್ನೂ ಭದ್ರತೆ ಕೊಟ್ಟಿಲ್ಲ. ಭದ್ರತೆ ವಿಚಾರದಲ್ಲಿ ಸರಕಾರ ನನಗೆ ಇನ್ನೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಅಖಂಡ ಶ್ರೀನಿವಾಸಮೂರ್ತಿ ಇದೇ ವೇಳೆ ಆರೋಪ ಮಾಡಿದರು.

''ಗಲಭೆ ಪ್ರಕರಣ ಸಿಬಿಐ ತನಿಖೆ ಮಾಡಿಸುವಂತೆ ಮನವಿ ಮಾಡಿದ್ದೇನೆ. ಮೊನ್ನೆ ಸಿಎಂ ಜತೆ ಘಟನೆಯ ಬಗ್ಗೆ ದೂರವಾಣಿಯಲ್ಲಿ ಮಾತಾಡಿದ್ದೆ. ನಮ್ಮ ಮನೆ ಅಕ್ಕ-ಪಕ್ಕ ನಿವಾಸಿಗಳ ವಾಹನಗಳನ್ನು ಸುಟ್ಟಿ ಹಾಕಿದ್ದಾರೆ. ಅವರಿಗೆ ಪರಿಹಾರ ನೀಡಲು ಮನವಿ ಮಾಡಿಕೊಂಡಿದ್ದೇನೆ. ಅಲ್ಲದೆ, ಕೃತ್ಯದಲ್ಲಿ ಪಾಲ್ಗೊಂಡಿದ್ದ ಅಪರಾಧಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ರೂ ಶಿಕ್ಷೆ ಆಗಲೇಬೇಕು. ಯಾರೇ ಆಗಿದ್ದರೂ ತಪ್ಪಿತಸ್ಥರನ್ನು ಬಂಧಿಸಲು ಮನವಿ ಮಾಡಿದ್ದೇನೆ'' ಎಂದು ಅವರು ತಿಳಿಸಿದರು.

ಭೋವಿ ಸಮಾಜದ ಮುಖಂಡರು, ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್ಪಿ ಮುಖಂಡರು ನನ್ನನ್ನು ಭೇಟಿ ಮಾಡಿದ್ದು ಸಮಾಲೋಚನೆ ನಡೆಸಿದ್ದಾರೆ. ನನ್ನ ಮನವಿಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಗಲಭೆ ಪ್ರಕರಣ ಸಂಬಂಧ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅಖಂಡ ಶ್ರೀನಿವಾಸಮೂರ್ತಿ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News