ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಗೆ ಕಾಂಗ್ರೆಸ್ ನೇರ ಕಾರಣ: ಸಚಿವ ಆರ್.ಅಶೋಕ್ ಆರೋಪ

Update: 2020-08-17 16:18 GMT

ಬೆಂಗಳೂರು, ಆ. 17: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ನೇರ ಕಾರಣ ಕಾಂಗ್ರೆಸ್ ಪಕ್ಷ ಎಂದು ಗಂಭೀರ ಆರೋಪ ಮಾಡಿರುವ ಕಂದಾಯ ಸಚಿವ ಆರ್.ಅಶೋಕ್, ಇನ್ನಾದರೂ ಹೊಸ ಹೊಸ ಕತೆಗಳನ್ನು ಹೇಳುವ ತನ್ನ ಹಳೆಯ ಚಾಳಿಯನ್ನು ಕಾಂಗ್ರೆಸ್ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊತ್ತಂಬರಿ, ಕರಿಬೇವಿನ ಸೊಪ್ಪು ತರಲು ಹೋದವರನ್ನು ಬಂಧಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆ ಕತೆಗಳು ನಮಗೂ ಗೊತ್ತು. ರಾತ್ರಿ ಹತ್ತು ಗಂಟೆಗೆ ಯಾವ ಕೊತ್ತಂಬರಿ, ಕರಿಬೇವು ಸಿಗುತ್ತದೆ ಎಂದು ಗೊತ್ತು. ಶಾಸಕರ ಮನೆಗೆ ಬೆಂಕಿ ಹಚ್ಚಿದ್ದು, ಅವರ ತಾಯಿಯ ತಾಳಿ ಸುಟ್ಟು ಹೋಗಿದೆ. ಅದನ್ನು ವಾಪಸ್ ಕೊಡಲಿಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು.

ವೈಯಕ್ತಿಕ ದ್ವೇಷ, ಕಾಂಗ್ರೆಸ್‍ನ ಒಳಜಗಳದಿಂದ ಕೆ.ಜಿ.ಹಳ್ಳಿ ಗಲಭೆ ನಡೆದಿದ್ದು, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿಗೆ ಕಳಂಕ ತಂದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತದೆ. ಕಾಂಗ್ರೆಸ್‍ನ ಅಂತರ್ಯುದ್ಧದಿಂದ ಬೆಂಗಳೂರಿಗೆ ಕಪ್ಪುಚುಕ್ಕೆ ತಂದಿದೆ ಎಂದು ಟೀಕಿಸಿದ ಅವರು, ಡಿ.ಜೆ.ಹಳ್ಳಿ ಗಲಭೆಯಲ್ಲಿ ಎಸ್‍ಡಿಪಿಐ ಭಾಗಿಯಾಗಿರುವ ಸುಳಿವು ಇದೆ. ಹೀಗಾಗಿ ಈ ಸಂಘಟನೆಯನ್ನು ನಿಷೇಧಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

20 ಕೊಲೆಯಲ್ಲಿ ಎಸ್‍ಡಿಪಿಐ ಕೈವಾಡ ಇರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಂಗೆಸ್ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖ ಎಂದು ಆರೋಪಿಸಿದ ಅವರು, ಎಸ್‍ಡಿಪಿಐ, ಶಾಸಕರು ಮತ್ತು ಪಾಲಿಕೆ ಸದಸ್ಯರ ನಡುವೆ ಜಗಳ ಆಗಿದ್ದು, ಇಡೀ ಘಟನೆ ಹೊಣೆಯನ್ನು ಕಾಂಗ್ರೆಸ್ ಹೊರಬೇಕು ಎಂದರು.

ಹಣ ಬಿಡುಗಡೆ: ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಸಂಬಂಧ 85.10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. 30 ಜಿಲ್ಲೆಗೆ ಹಣ ಬಿಡುಗಡೆ ಮಾಡಲಾಗಿದೆ. ರ‍್ಯಾಪಿಡ್ ಪರೀಕ್ಷೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನದ ಅಗತ್ಯ ಇರುತ್ತದೆ. ಇದನ್ನು ಮನಗಂಡು ರ್ಯಾಪಿಡ್ ಪರೀಕ್ಷೆ ಮತ್ತು ಸೋಂಕು ತಡೆಯಲು ಬಳಕೆ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News