'ಕಸ ಗುಡಿಸಲಿ' ಎಂದ ಝಮೀರ್ ಅಹ್ಮದ್ ಮಾತಿಗೆ 'ವಾಚ್‍ಮ್ಯಾನ್' ಹೇಳಿಕೆ ನೆನಪಿಸಿದ ರೋಷನ್ ಬೇಗ್

Update: 2020-08-18 13:50 GMT

ಬೆಂಗಳೂರು, ಆ.18: ಕಾವಲ್ ಭೈರಸಂದ್ರ ಗಲಾಟೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಎಂದು ಮಾಜಿ ಸಚಿವ ರೋಷನ್ ಬೇಗ್ ದೂರಿದರು.

ಮಂಗಳವಾರ ಇಲ್ಲಿನ ಆರ್ ಟಿನಗರದ ಸ್ವಗೃಹದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಲಾಟೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ. ಅಲ್ಲದೆ, ಕೆಲ ಮೌಲಾನಗಳು ಗೋರಿಪಾಳ್ಯ, ಟಿಪ್ಪು ನಗರ, ಕಲಾಸಿಪಾಳ್ಯ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಏಕೆ ಡಿ.ಜೆ ಹಳ್ಳಿಗೆ ಬರಬೇಕಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಗಲಾಟೆಯಲ್ಲಿ ಕೆಲ ಅಮಾಯಕರನ್ನು ಬಂಧಿಸಲಾಗಿದೆ. ಅವರನ್ನು ಮನೆಗೆ ವಾಪಸ್ಸು ಕಳುಹಿಸಬೇಕೆನ್ನುವುದು ನಮ್ಮ ಮನವಿ ಎಂದ ಅವರು, ಯಾರೇ ಆಗಲಿ, ಗಲಭೆಯಲ್ಲಿ ಭಾಗಿಯಾಗಿದ್ದರೆ ಅಂತಹ ವ್ಯಕ್ತಿಗಳನ್ನು ಶಿಕ್ಷಿಸಲಿ. ಆದರೆ, ಬಡವರನ್ನು ಸಿಲುಕಿಸುವ ತಂತ್ರ ಬೇಡವೆಂದು ಅವರು ನುಡಿದರು.

ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ ಏನೇ ಮಾತನಾಡಲಿ, ನಾನು ವಿದ್ಯಾರ್ಥಿ ಚಳುವಳಿ ಮೂಲಕ ರಾಜಕೀಯಕ್ಕೆ ಬಂದವನು. ಹಿರಿತನ ಹೊಂದಿದ್ದೇನೆ. ಬೇರೆ ಯಾರಾದರೂ ಹಿರಿಯರು ನನ್ನ ವಿರುದ್ಧ ಮಾತಾಡಿದರೆ ಉತ್ತರ ಕೊಡುತ್ತಿದ್ದೆ. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ವಾಚ್‍ಮ್ಯಾನ್ ಆಗುತ್ತೇನೆ ಎಂದು ಝಮೀರ್ ಹೇಳಿದ್ದರು. ಹೀಗಾಗಿ, ಆತ ಮೊದಲು ಯಡಿಯೂರಪ್ಪ ಮನೆ ಹತ್ತಿರ ಹೋಗಿ ವಾಚ್‍ಮ್ಯಾನ್ ಆಗಲಿ ಎಂದು ರೋಷನ್ ಬೇಗ್, 'ಬಿಜೆಪಿ ಕಚೇರಿಯ ಕಸ ಗುಡಿಸಲಿ' ಎಂಬ ಝಮೀರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

ಈ ಹಿಂದೆಯೂ ಇದೇ ಮಾದರಿಯಲ್ಲಿ ಗಲಾಟೆ ಆದಾಗ ನನ್ನ ಜೀವ ಉಳಿಸಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸುದರ್ಶನ್ ಅವರೇ ಹೊರತು, ಝಮೀರ್ ಅಲ್ಲ. ಇಂಥ ವ್ಯಕ್ತಿಗಳು ಎಲ್ಲಿಯೂ ನನ್ನ ಸಹಾಯಕ್ಕೆ ಬಂದಿಲ್ಲ. ಅಲ್ಲದೆ, ಎಸ್‍ಡಿಪಿಐ ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮುಹಮ್ಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News