ನಿಷೇಧಿತ ಉಗ್ರ ಸಂಘಟನೆಯೊಂದಿಗೆ ನಂಟು ಆರೋಪ: ಬೆಂಗಳೂರಿನ ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಿದ ಎನ್‍ಐಎ

Update: 2020-08-18 14:42 GMT
Photo Credit: NIA

ಬೆಂಗಳೂರು, ಆ.18: ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಹಾಗೂ ಎಂ.ಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊರ್ವನನ್ನು ನಿಷೇಧಿತ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಬಂಧಿಸಿದೆ.

28 ವರ್ಷದ ಡಾ.ಎ.ರೆಹ್ಮಾನ್ ಬಂಧಿತ ವಿದ್ಯಾರ್ಥಿಯಾಗಿದ್ದು, ಈತ ಬಸವನಗುಡಿಯಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದೆ.

ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್‍ಕೆಪಿ) ಸಂಘಟನೆ ಸದಸ್ಯರೊಂದಿಗೆ ನಂಟು ಹೊಂದಿದ್ದ ರೆಹ್ಮಾನ್, ಸಂಘಟನೆಯ ಇತರೆ ಸದಸ್ಯರ ಜೊತೆಯೂ ಸಂಪರ್ಕ ಸಾಧಿಸುತ್ತಿದ್ದ ಎನ್ನಲಾಗಿದೆ.

ದೇಶದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಐಎಸ್‍ಕೆಪಿ ಸಂಚು ರೂಪಿಸಿತ್ತು. ಅದನ್ನು ಪತ್ತೆ ಹಚ್ಚಿದ್ದ ಎನ್‍ಐಎ ಅಧಿಕಾರಿಗಳು, ಪುಣೆಯ ಸಾದಿಯಾ ಅನ್ವರ್ ಹಾಗೂ ನಬೀಲ್ ಸಿದ್ದಿಖಿ ಖತ್ರಿ ಸೇರಿದಂತೆ ಐವರು ಶಂಕಿತರನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳ ಜೊತೆಯೇ ಡಾ.ಎ.ರೆಹ್ಮಾನ್ ನಂಟು ಹೊಂದಿದ್ದು, ಬಂಧಿತರ ಮಾಹಿತಿಯಂತೆ ಎನ್‍ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಈತನನ್ನು ಸೆರೆ ಹಿಡಿದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.

'ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ 2014ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ ಡಾ.ಎ.ರೆಹ್ಮಾನ್, 2017ರಲ್ಲಿ ಸರಕಾರಿ ಕೋಟಾದಡಿ ಎಂ.ಎಸ್ ವ್ಯಾಸಂಗಕ್ಕಾಗಿ ಅದೇ ಕಾಲೇಜಿಗೆ ಸೇರಿದ್ದ. ಇದೇ ಜುಲೈನಲ್ಲಿ ಅಂತಿಮ ಪರೀಕ್ಷೆಯನ್ನೂ ಬರೆದಿದ್ದ. ಕಾಲೇಜಿನ ಹೊರಗೆ ಆತ ಮಾಡುತ್ತಿದ್ದ ಕೆಲಸದ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News