ಗಲಭೆ ನಷ್ಟ ವಸೂಲಿ; ಪೂರ್ವಾನ್ವಯವಾಗಿರಲಿ

Update: 2020-08-19 05:17 GMT

ಗಲಭೆ, ಹಿಂಸಾಚಾರದ ವೇಳೆ ಸಾರ್ವಜನಿಕ ಆಸ್ತಿಗೆ ನಷ್ಟವುಂಟಾದರೆ ಗಲಭೆಕೋರರಿಂದಲೇ ನಷ್ಟ ವಸೂಲಿ ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಈ ಕುರಿತು ಕ್ಲೇಮ್ ಕಮಿಷನರ್‌ರನ್ನು ನೇಮಿಸುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರ ಇದೇ ರೀತಿ ಗಲಭೆಕೋರರಿಂದ ನಷ್ಟ ವಸೂಲಿಗೆ ಕ್ರಮ ಕೈಗೊಂಡಿದೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಅಂಥದ್ದೇ ಕ್ರಮಕ್ಕೆ ಸರಕಾರ ಮುಂದಾಗಿದೆ. ಮೇಲ್ನೋಟಕ್ಕೆ ಸರಕಾರದ ಕ್ರಮ ಶ್ಲಾಘನೀಯವೆನಿಸಿದರೂ ಅದು ನಿಷ್ಪಕ್ಷಪಾತವಾಗಿದ್ದರೆ ಹೆಚ್ಚು ವಿಶ್ವಾಸಾರ್ಹವಾಗುತ್ತದೆ. ಬೆಂಗಳೂರಿನ ದೇವರ ಜೀವನಹಳ್ಳಿಯ ಇತ್ತೀಚಿನ ಗಲಭೆಯ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆಯ ಹಿತದೃಷ್ಟಿಯಿಂದ ಈ ಕ್ರಮ ಸೂಕ್ತವೆನಿಸಿದರೂ ಇದರ ಪಾರದರ್ಶಕತೆ ಬಗ್ಗೆ ಸಹಜವಾಗಿ ಕೆಲ ಪ್ರಶ್ನೆಗಳು ಉದ್ಭವವಾಗುತ್ತವೆ. ಇಂತಹ ಗಲಭೆ ನಡೆದಿರುವುದು ಇದೇ ಮೊದಲನೆಯದಲ್ಲ, ಈ ತರಹದ ಅನೇಕ ಗಲಭೆ, ಹಿಂಸಾಚಾರಗಳನ್ನು ಈ ದೇಶ ಮತ್ತು ರಾಜ್ಯಗಳು ಕಂಡಿವೆ. ಹಿಂದಿನ ಗಲಭೆಗಳಲ್ಲಿ ಸಾವಿಗೀಡಾದವರ ಮನೆಗಳು, ಮನೆಯವರು ಬೀದಿ ಪಾಲಾಗಿದ್ದಾರೆ. ಕೋಟ್ಯಂತರ ರೂ. ಆಸ್ತಿ ನಷ್ಟ ಉಂಟಾಗಿದೆ. ಈ ಕಾರಣ ಗಲಭೆಕೋರರಿಂದ ನಷ್ಟದ ದಂಡವನ್ನೂ ವಸೂಲಿ ಮಾಡುವ ಕ್ರಮ ಪೂರ್ವಾನ್ವಯವಾಗಿರಲಿ. ಕನಿಷ್ಠ ಕಳೆದ ಮೂರು ದಶಕದ ಕಾಲಾವಧಿಯಲ್ಲಿ ಈ ರಾಜ್ಯದಲ್ಲಿ ನಡೆದ ಗಲಭೆಗಳಿಗೆ ಕಾರಣರಾದವರು ಯಾರೇ ಆಗಿರಲಿ ಅವರಿಂದ ನಷ್ಟವನ್ನು ವಸೂಲಿ ಮಾಡಲಿ. ಹಿಂದಿನದನ್ನು ಬಿಟ್ಟು ಈಗಿನ ಒಂದು ಗಲಭೆಯ ನಷ್ಟಕ್ಕೆ ದಂಡ ವಿಧಿಸಲು ಹೊರಟರೆ ಜನರಿಗೆ ತಪ್ಪುಸಂದೇಶ ಹೋಗುತ್ತದೆ. ಇಂಥ ಕ್ರಮಗಳು ಪಕ್ಷಾತೀತವಾಗಿ, ಮತಾತೀತವಾಗಿರಬೇಕು. ಆಗ ಮಾತ್ರ ವಿಶ್ವಾಸಾರ್ಹವೆನಿಸಿಕೊಳ್ಳುತ್ತವೆ.

ಈ ದೇಶ ಮತ್ತು ರಾಜ್ಯಗಳು ಕಳೆದ ಮೂರು ದಶಕಗಳಿಂದ ಹಲವಾರು ಗಲಭೆಗಳನ್ನು ಕಂಡಿವೆ. ಅಯೋಧ್ಯೆಯ ಮಂದಿರ-ಮಸೀದಿ ವಿವಾದ, ರಥಯಾತ್ರೆ, ಗುಜರಾತಿನಲ್ಲಿ 2002ರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಅಪಾರ ಪ್ರಮಾಣದ ಆಸ್ತಿ ನಷ್ಟಕ್ಕೆ ಕಾರಣವಾದ ಹತ್ಯಾಕಾಂಡಗಳನ್ನು ಈ ದೇಶ ಮರೆತಿಲ್ಲ. ಕರ್ನಾಟಕದ ವಿದ್ಯಮಾನಗಳನ್ನು ಗಮನಿಸಿದರೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿಸಿ ನಡೆದ ಗಲಭೆ, ಸಮಾಜೋತ್ಸವದ ಹೆಸರಿನಲ್ಲಿ ನಡೆದ ಹಿಂಸಾಚಾರ, ಗೋ ರಕ್ಷಣೆ ಹೆಸರಿನಲ್ಲಿ ನಡೆದ ಗಲಭೆ ಹಾಗೂ ಕರಾವಳಿಯಲ್ಲಿ ಸಣ್ಣಪುಟ್ಟ ಕಾರಣಗಳಿಗಾಗಿ ಆಗಾಗ ನಡೆಯುತ್ತಲೇ ಬಂದ ದೊಂಬಿ, ಹಿಂಸಾಚಾರ ಇವುಗಳನ್ನು ಗಮನದಲ್ಲಿಟ್ಟುಕೊಂಡು ಹಳೆಯ ಪ್ರಕರಣಗಳ ಫೈಲುಗಳನ್ನು ಮತ್ತೆ ತೆಗೆದು ಆಗಿನಿಂದ ಗಲಭೆ, ಹಿಂಸಾಚಾರಗಳಿಗೆ ಕಾರಣರಾದವರು ಯಾವುದೇ ಪಕ್ಷ ಅಥವಾ ಧರ್ಮಕ್ಕೆ ಸೇರಿರಲಿ ಅವರಿಂದ ನಷ್ಟದ ದಂಡ ವಸೂಲಿ ಮಾಡುವುದು ಸೂಕ್ತವಾಗಿದೆ. ಇಂತಹ ನಿಷ್ಪಕ್ಷಪಾತ ಕ್ರಮದಿಂದ ಮಾತ್ರ ಮುಂದೆ ಗಲಭೆ ಮುಂತಾದ ಅಹಿತಕರ ಘಟನೆಗಳು ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ.

ಗಲಭೆಕೋರರಿಂದ ಆಸ್ತಿ ನಷ್ಟಕ್ಕೆ ದಂಡ ವಸೂಲಿ ಮಾಡುವುದು ಸರಿಯಾದ ಕ್ರಮವಾದರೂ ಯಾವುದೇ ಗಲಭೆಯಲ್ಲಿ ಇಂತಹವರೇ ಗಲಭೆಗೆ ಕಾರಣವೆಂದು ಪತ್ತೆ ಹಚ್ಚುವುದು ಸುಲಭವಲ್ಲ. ದೇವರ ಜೀವನಹಳ್ಳಿ ಗಲಭೆಯ ಬಗ್ಗೆ ಸರಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದೆ. ಈ ತನಿಖೆ ಪೂರ್ತಿಯಾದ ನಂತರವೇ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಇಲ್ಲವೇ ಕೇಂದ್ರೀಯ ತನಿಖಾ ಸಂಸ್ಥೆಯಿಂದ ವಿಚಾರಣೆ ನಡೆದರೆ ಸತ್ಯ ಬೆಳಕಿಗೆ ಬರಲು ಸಾಧ್ಯವಾಗುತ್ತದೆ.

ಅದೇನೇ ಇರಲಿ, ಗಲಭೆಗೆ ಕಾರಣರಾದ ದುಷ್ಕರ್ಮಿಗಳಿಂದ ಆಸ್ತಿ ನಷ್ಟದ ವಸೂಲಿ ಮಾಡುವ ಕ್ರಮಕ್ಕೆ ಮುಂದಾಗುವ ಮುನ್ನ ಇದನ್ನು ಹಿಂದೆ ನಡೆದ ಗಲಭೆಗಳಿಗೂ ಪೂರ್ವಾನ್ವಯವಾಗುವಂತೆ ಮಾಡಬೇಕು. ಆಗ ಮಾತ್ರ ಸರಕಾರದ ನಡೆಯ ಬಗ್ಗೆ ಸಂದೇಹ ಉಂಟಾಗುವುದಿಲ್ಲ. ಇಲ್ಲವಾದರೆ ಯಾವುದೋ ಒಂದು ಗಲಭೆಗೆ ಸಂಬಂಧಿಸಿದಂತೆ ಕೈಗೊಳ್ಳುವ ಇಂತಹ ಕ್ರಮಗಳ ನಿಷ್ಪಕ್ಷಪಾತತನದ ಬಗ್ಗೆ ಜನರಲ್ಲಿ ಸಹಜವಾಗಿ ಸಂದೇಹ ಉಂಟಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರಕಾರದ ಬಗ್ಗೆ ಜನರಲ್ಲಿ ಸಂದೇಹ ಮೂಡುವುದು ಆರೋಗ್ಯಕರ ಬೆಳವಣಿಗೆಯೆನಿಸುವುದಿಲ್ಲ. ಇದೊಂದು ಕೆಟ್ಟ ಪರಿಪಾಠವಾಗುತ್ತದೆ. ಈ ರಿತಿಯ ಸಂದೇಹ ನಿವಾರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದಾಗಲಿ. ಅದರ ಮೊದಲ ಹೆಜ್ಜೆಯಾಗಿ ಗಲಭೆಗೆ ಕಾರಣರಾದ ದುಷ್ಕರ್ಮಿಗಳಿಂದ ದಂಡ ವಸೂಲಿ ಹಿಂದಿನ ಗಲಭೆಗಳಿಗೂ ಪೂರ್ವಾನ್ವಯಗೊಳ್ಳಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News