ಬಯಲಾದ ಮುಖಪುಟದ ‘ಮುಖವಾಡ’

Update: 2020-08-20 05:01 GMT

ಫೇಸ್‌ಬುಕ್‌ಗಳಲ್ಲಿ ಈವರೆಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದವು. ಇದೀಗ ಸ್ವತಃ ಫೇಸ್‌ಬುಕ್ ಚರ್ಚೆಗೊಳಗಾಗಿದೆ. ಈವರೆಗೆ ಜನರು ‘ತಾವು ಫೇಸ್‌ಬುಕ್‌ನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದು ಭಾವಿಸಿದ್ದರು. ಇದೀಗ ನೋಡಿದರೆ, ಜನರನ್ನು ಫೇಸ್‌ಬುಕ್ ಬಳಸುತ್ತಿರುವುದು ಸುದ್ದಿಯಾಗುತ್ತಿದೆ. ಫೇಸ್‌ಬುಕ್ ಉದ್ದೇಶಪೂರ್ವಕವಾಗಿ ಸಂಘಪರಿವಾರ ನಾಯಕರ ದ್ವೇಷ ಭಾಷಣಗಳನ್ನು ಹರಡುತ್ತಿದೆ ಮತ್ತು ಫೇಸ್‌ಬುಕ್‌ನ ನಿಯಮಗಳನ್ನು ಈ ದ್ವೇಷ ಭಾಷಣಗಳಿಗೆ ಅನ್ವಯಿಸಲು ಹಿಂದೇಟು ಹಾಕುತ್ತಿದೆ ಎನ್ನುವುದನ್ನು ಅಮೆರಿಕದ ‘ದಿ ವಾಲ್‌ಸ್ಟ್ರೀಟ್ ಜರ್ನಲ್’ ಪತ್ರಿಕೆ ಉಲ್ಲೇಖ ಮಾಡಿದ ಬೆನ್ನಿಗೇ ಫೇಸ್‌ಬುಕ್‌ನ ವಿಶ್ವಾಸಾರ್ಹತೆ ಬೀದಿಗೆ ಬಿದ್ದಿದೆ. ಒಂದು ವೇಳೆ, ಫೇಸ್‌ಬುಕ್‌ನ ಕುರಿತ ಈ ಆರೋಪದಲ್ಲಿ ನಿಜವಿದೆಯಾದರೆ, ಇದು ಕೇವಲ ಫೇಸ್‌ಬುಕ್‌ನ ವಿಶ್ವಾಸಾರ್ಹತೆಗೆ ಸಂಬಂಧಿಸಿದ ವಿಷಯವಾಗಿ ಮಾತ್ರ ಉಳಿಯುವುದಿಲ್ಲ.

ಭಾರತದ ಆಂತರಿಕ ಭದ್ರತೆಯನ್ನು ದುರ್ಬಲಗೊಳಿಸುವುದಕ್ಕೆ ಫೇಸ್‌ಬುಕ್ ಪರೋಕ್ಷವಾಗಿ ಭಾಗಿಯಾಗಿದೆ ಎಂದು ಭಾವಿಸಬೇಕಾಗುತ್ತದೆ. ಇಂದು ಫೇಸ್‌ಬುಕ್ ಸಹಿತ ಜಾಲತಾಣಗಳು ಯಾವುದೇ ಮುದ್ರಣ ಮಾಧ್ಯಮ ಅಥವಾ ಟಿವಿ ಮಾಧ್ಯಮಗಳಿಗಿಂತ ವೇಗವಾಗಿವೆ. ಯಾರು ಏನು ಬೇಕಾದರೂ ಬರೆಯುವ ಅವಕಾಶವಿರುವುದರಿಂದ, ಈ ಮಾಧ್ಯಮವನ್ನು ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಪರ್ಯಾಯವಾಗಿ ಈವರೆಗೆ ಗುರುತಿಸಲಾಗುತ್ತಿತ್ತು. ಅಂದರೆ, ಪತ್ರಿಕೆ, ಟಿವಿ ಚಾನೆಲ್‌ಗಳ ನಿಯಂತ್ರಣ ಅದರ ಒಡೆಯರ ಕೈಯಲ್ಲಿರುತ್ತದೆ. ಯಾವ ಸುದ್ದಿಗಳಿಗೆ ಆದ್ಯತೆ ನೀಡಬೇಕು, ನೀಡಬಾರದು ಎನ್ನುವುದನ್ನು ಅದರ ಮಾಲಕರೇ ನಿರ್ಧರಿಸುತ್ತಾರೆ. ಹಾಗೆಯೇ ಸುಳ್ಳು ಸುದ್ದಿಗಳನ್ನೇ ನಿಜ ಸುದ್ದಿಗಳೆಂದು ಹರಡುವುದಕ್ಕೂ ಅವರು ಹೇಸುವುದಿಲ್ಲ. ಇಂತಹ ಸಂದರ್ಭದಲ್ಲಿ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಅವುಗಳಿಗೆ ಪರ್ಯಾಯವಾಗಿ ಕೆಲಸ ಮಾಡುತ್ತಿದ್ದವು. ಮುದ್ರಣ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳು ಹರಡಿದರೆ ಸತ್ಯಾಸತ್ಯತೆ ಏನು ಎನ್ನುವುದನ್ನು ಜಾಗೃತ ಜನರು ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ಗಳ ಮೂಲಕ ತಲುಪಿಸುವ ಪ್ರಯತ್ನ ನಡೆಸುತ್ತಿದ್ದರು. ಆದರೆ ದುರಂತವೆಂದರೆ, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳನ್ನೂ ದುಷ್ಕರ್ಮಿಗಳು ಹೈಜಾಕ್ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬರುತ್ತಿವೆ. ಇದು ನಿಜಕ್ಕೂ ಅಪಾಯಕಾರಿಯಾದ ಬೆಳವಣಿಗೆ.

ಫೇಸ್‌ಬುಕ್‌ನ್ನು ತೆರೆದು ನೋಡಿದರೆ, ದ್ವೇಷ, ನಿಂದನೆಗಳನ್ನು ಹರಡುವುದಕ್ಕಾಗಿಯೇ ನೂರಾರು ‘ಪೇಜ್’ಗಳಿರುವುದು ಗಮನಕ್ಕೆ ಬರುತ್ತವೆ. ಜನರ ನಡುವೆ ಬಿರುಕು ತಂದಿಡುವ, ಒಂದು ನಿರ್ದಿಷ್ಟ ಸಮುದಾಯದ ನಡುವೆ ಪೂರ್ವಾಗ್ರಹಗಳನ್ನು ಬಿತ್ತುವುದಕ್ಕಾಗಿಯೇ ಹತ್ತು ಹಲವು ಪೇಜ್‌ಗಳಿವೆ. ಇದೇ ಸಂದರ್ಭದಲ್ಲಿ ನಕಲಿ ಖಾತೆಗಳ ಮೂಲಕ ದ್ವೇಷಗಳನ್ನು ಹಂಚುವವರ ಸಂಖ್ಯೆಯೂ ಕಡಿಮೆಯಿಲ್ಲ. ಸಂಬಂಧಿಸಿದ ವ್ಯವಸ್ಥಾಪಕರಿಗೆ ಇವುಗಳು ಯಾಕೆ ಗಮನಕ್ಕೆ ಬರುತ್ತಿಲ್ಲ? ಎನ್ನುವ ಪ್ರಶ್ನೆಗಳನ್ನು ಜನಪರ ಮನಸ್ಸುಗಳು ಕೇಳುತ್ತಲೇ ಬಂದಿವೆ. ಆದರೆ ಇದಕ್ಕೆ ಸಂಬಂಧಿಸಿ ಆಡಳಿತ ವರ್ಗ ಕಿವುಡಾಗಿತ್ತು. ಜೊತೆಗೆ ಸುಳ್ಳು ಸುದ್ದಿಗಳನ್ನು, ದ್ವೇಷ ಸುದ್ದಿಗಳನ್ನು ಹರಡುವ ಪ್ರೊಫೈಲ್‌ಗಳನ್ನು ಮಡಿಲಲ್ಲಿಟ್ಟು ಸಾಕುತ್ತಲೇ ಫೇಸ್‌ಬುಕ್ ಇನ್ನೂ ಎರಡು ಹೆಜ್ಜೆ ಮುಂದೆ ಹೋಯಿತು. ದ್ವೇಷ ಹರಡುವವರ ಖಾತೆಗಳನ್ನು ತೆಗೆದು ಹಾಕುವುದು ಬಿಡಿ, ದ್ವೇಷದ ವಿರುದ್ಧ, ಜನವಿರೋಧಿ ನಿಲುವುಗಳ ವಿರುದ್ಧ ಹೋರಾಡುವ, ಮಾತನಾಡುವ ಜನರನ್ನೇ ಅದು ‘ಬ್ಲಾಕ್’ ಮಾಡ ತೊಡಗಿತು.

ಯಾವುದಾದರೂ ಪೇಜ್‌ಗಳು ಅಥವಾ ಖಾತೆಗಳು ಪದೇ ಪದೇ ಆಡಳಿತ ವಿರೋಧಿ ನಿಲುವುಗಳನ್ನು ಹಂಚಿಕೊಳ್ಳುತ್ತಿದ್ದರೆ, ಕೋಮುವಾದಿ, ಜಾತಿವಾದಿ ನಿಲುವುಗಳನ್ನು ವಿರೋಧಿಸುತ್ತಾ ಇದ್ದರೆ ಅವರಿಗೆ ಎಚ್ಚರಿಕೆಯನ್ನು ಕಳುಹಿಸಿ, ಅವರನ್ನು ಬ್ಲಾಕ್ ಮಾಡುತ್ತಿತ್ತು. ಇದರ ವಿರುದ್ಧ ಜನರು ಒಂದಾಗಿ ಪ್ರತಿಭಟಿಸಿದಾಗಷ್ಟೇ ಅನಿವಾರ್ಯವೆಂಬ ಸ್ಥಿತಿಯಲ್ಲಿ ಅವರ ಬ್ಲಾಕ್‌ಗಳನ್ನು ಹಿಂದೆಗೆಯತೊಡಗಿತ್ತು. ಫೇಸ್‌ಬುಕ್‌ನ ಈ ನೀತಿಯ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವರು ಹೋರಾಟಗಳನ್ನು ನಡೆಸಿದ್ದಾರೆ. ಒಂದೆಡೆ ಫೇಸ್‌ಬುಕ್‌ನ ನಿಯಮಗಳು ದ್ವೇಷ ಭಾಷಣ, ಸ್ಟೇಟಸ್‌ಗಳಿಗೆ ಅನ್ವಯಿಸುತ್ತಿರಲಿಲ್ಲ ಮಾತ್ರವಲ್ಲ, ನಿಯಮಗಳನ್ನು ಮೀರದೇ ಇದ್ದರೂ ಜನಪರವಾದ, ಜೀವಪರವಾದ, ಪ್ರಭುತ್ವದ ವಿರುದ್ಧವಾದ ಧ್ವನಿಗಳಿಗೆ ಅನಗತ್ಯವಾಗಿ ನಿಯಂತ್ರಣಗಳನ್ನು ಹೇರುತ್ತಿತ್ತು. ಫೇಸ್‌ಬುಕ್ ಸಂಸ್ಥೆಯೇ ಇದರೊಳಗೆ ಶಾಮೀಲಾಗಿದೆಯೋ ಅಥವಾ ಫೇಸ್‌ಬುಕ್‌ನ ಭಾರತೀಯ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಷ್ಟೇ ಶಾಮೀಲಾಗಿದ್ದಾರೆಯೋ ಎನ್ನುವುದನ್ನು ತನಿಖೆಯಷ್ಟೇ ಬೆಳಕಿಗೆ ತರಬಹುದು.

ಒಂದನ್ನು ನಾವು ತಿಳಿದುಕೊಳ್ಳಬೇಕು. ಎಲ್ಲ ಮಾಧ್ಯಮಗಳಂತೆ ಫೇಸ್‌ಬುಕ್ ಕೂಡ ಒಂದು ಮಾಧ್ಯಮ. ಫೇಸ್‌ಬುಕ್‌ನ ಒಂದು ವಿಶೇಷವೆಂದರೆ, ಇಲ್ಲಿ ಯಾರೂ ಬರೆಯಬಹುದು. ಆದರೆ ಅವರನ್ನು ನಿಯಂತ್ರಿಸುವ ಹೊಣೆ ಮತ್ತೆ ಫೇಸ್‌ಬುಕ್‌ನೊಳಗಿರುವ ಸಿಬ್ಬಂದಿಯ ಮೇಲೆಯೇ ಇರುತ್ತದೆ. ಆದುದರಿಂದ, ಆ ಸಿಬ್ಬಂದಿಯ ಜಾತಿ, ಧರ್ಮ, ಪಕ್ಷ ಇತ್ಯಾದಿಗಳ ಹಿನ್ನೆಲೆ ಬಹಳ ಮುಖ್ಯವಾಗುತ್ತದೆ. ಒಂದು ಪತ್ರಿಕೆಗೆ ಹಣ ಹೂಡಿದಾತ ಜಾತ್ಯತೀತನೇ ಆಗಿರಬಹುದು, ಆದರೆ ಸಂಪಾದಕೀಯ ಬಳಗದಲ್ಲಿ ಮೇಲ್ಜಾತಿಯ ಪ್ರಾಬಲ್ಯವಿದ್ದರೆ, ಸುದ್ದಿಗಳು ಮೇಲ್ಜಾತಿಗಳ ಪರವಾಗಿಯೇ ಇರುತ್ತದೆ. ಕೆಳವರ್ಗದ, ದಮನಿತರ ಸುದ್ದಿಗಳು ಮುಖಪುಟದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಇಂದು ಭಾರತದ ಟಿವಿ ಮಾಧ್ಯಮಗಳು ಮತ್ತು ಪತ್ರಿಕೆಗಳು ಯಾಕೆ ಮೇಲ್ಜಾತಿಯ ಪರವಾಗಿವೆೆ ಎನ್ನುವುದಕ್ಕೆ ಕಾರಣ ಇದರಲ್ಲಿದೆ. ಭಾರತದ ಎಲ್ಲ ಮಾಧ್ಯಮಗಳೊಳಗೆ ನುಸುಳಿಕೊಂಡ ಬಹುತೇಕ ಪತ್ರಕರ್ತರು ಮೇಲ್ಜಾತಿಯನ್ನು ಪ್ರತಿನಿಧಿಸುವವರು. ಫೇಸ್‌ಬುಕ್‌ನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಭಾರತದೊಳಗಿರುವ ಫೇಸ್‌ಬುಕ್ ಸಿಬ್ಬಂದಿಯ ವರ್ಗ, ಜಾತಿ, ಧರ್ಮದ ಹಿನ್ನೆಲೆಯನ್ನು ಪರಿಶೀಲಿಸಿದರೆ, ಫೇಸ್‌ಬುಕ್ ಯಾಕೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆೆ ಎನ್ನುವುದನ್ನು ಸುಲಭದಲ್ಲಿ ಊಹಿಸಬಹುದು. ಆದುದರಿಂದ, ಎಲ್ಲಿಯವರೆಗೆ ಫೇಸ್‌ಬುಕ್ ಖಾತೆಗಳನ್ನು ನಿಯಂತ್ರಿಸುವ ಸಿಬ್ಬಂದಿಯ ಮನಸ್ಥಿತಿಯಲ್ಲಿ ಸುಧಾರಣೆಯಾಗುವುದಿಲ್ಲವೋ ಅಲ್ಲಿಯವರೆಗೆ ಫೇಸ್‌ಬುಕ್‌ನಲ್ಲೂ ವಿಶೇಷವಾದುದು ಸಂಭವಿಸುತ್ತದೆ ಎನ್ನುವುದನ್ನು ನಿರೀಕ್ಷಿಸಲಾಗುವುದಿಲ್ಲ.

ಭಾರತದ ಉಳಿದೆಲ್ಲ ಮಾಧ್ಯಮಗಳ ಇಂದಿನ ಸ್ಥಿತಿಗೆ ಕಾರಣವಾದ ಅಂಶಗಳೇ ಫೇಸ್‌ಬುಕ್‌ನೊಳಗೂ ನುಸುಳಿಕೊಂಡಿರುವುದರಿಂದ ಫೇಸ್‌ಬುಕ್ ಅದೇನು ಭರವಸೆಕೊಟ್ಟರೂ ಸ್ಥಿತಿ ಸುಧಾರಣೆಯಾಗುವುದು ಕಷ್ಟ. ಫೇಸ್‌ಬುಕ್‌ನಲ್ಲಿ ತಾರತಮ್ಯ ಇಲ್ಲವಾಗಬೇಕಾದರೆ, ತಳಸ್ತರವನ್ನು ಪ್ರತಿನಿಧಿಸುವ ಮನಸ್ಸುಗಳಿಗೆ ಆದ್ಯತೆಯನ್ನು ನೀಡಬೇಕು. ಹಾಗೆಯೇ ದ್ವೇಷ ಭಾಷಣಗಳನ್ನು ಪೋಷಿಸುವ, ವದಂತಿಗಳನ್ನು ಹರಡುವುದಕ್ಕೆ ಕುಮ್ಮಕ್ಕು ನೀಡುವ ಸಿಬ್ಬಂದಿಯ ವಿರುದ್ಧ ದೂರುಗಳು ಬಂದರೆ ಅದರ ಬಗ್ಗೆ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಬೇಕಾದ ಪ್ರತಿನಿಧಿಗಳ ತಂಡವೊಂದು ರೂಪುಗೊಳ್ಳಬೇಕು. ಈ ತಂಡದಲ್ಲಿ ಜನಪರ ಚಿಂತನೆಗಳುಳ್ಳ ಪ್ರಬುದ್ಧ ಮನಸ್ಸುಗಳಿರುವುದು ಅತ್ಯಗತ್ಯ. ಹಾಗಾದಾಗ ಮಾತ್ರ, ಫೇಸ್‌ಬುಕ್ ಉಳಿದೆಲ್ಲ ಮಾಧ್ಯಮಗಳಿಗೆ ಯಶಸ್ವಿ ಪರ್ಯಾಯ ಮಾಧ್ಯಮವಾಗಿ ಬೆಳೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News