ಹವಾಮಾನ ವಿಕೋಪಕ್ಕೆ ತತ್ತರಿಸಿರುವ ಭಾರತದ ಆರೋಗ್ಯ

Update: 2020-08-21 05:43 GMT

ಭಾರತ ಒಮ್ಮೆ ನೆರೆಯಿಂದ ತತ್ತರಿಸಿದರೆ, ಮಗದೊಮ್ಮೆ ಬರಗಾಲದಿಂದ ಕಂಗೆಡುತ್ತದೆ. ಪ್ರತಿಕೂಲವಾದ ಹವಾಮಾನಗಳಿಂದ ತಕ್ಷಣದ ನಾಶ, ನಷ್ಟಗಳು ಸುದ್ದಿಯಾದಂತೆ ಅದರ ದೂರದ ಪರಿಣಾಮಗಳು ಸುದ್ದಿಯಾಗುವುದಿಲ್ಲ. ಹಲವು ವರ್ಷಗಳ ಹಿಂದೆ ಮುಂಬೈ ಮಳೆಯಿಂದ ಭಾಗಶಃ ಮುಳುಗಿ ಹೋಯಿತು. ಜನಜೀವನ ಅಸ್ತವ್ಯಸ್ತಗೊಂಡಿತು. ನೀರಿಳಿದ ಬಳಿಕವೂ ಮುಂಬೈಯ ಸಮಸ್ಯೆ ಮುಗಿಯಲಿಲ್ಲ. ಆ ಬಳಿಕ ಸಾಂಕ್ರಾಮಿಕ ರೋಗಗಳಿಂದ ಇಡೀ ಶಹರ ತತ್ತರಿಸಿತು. ಇಂತಹ ಹವಾಮಾನ ವಿಕೋಪಗಳಿಗೆ ಸಂಬಂಧಿಸಿದ ಅಪಾಯ ಸೂಚ್ಯಂಕದಲ್ಲಿ ಭಾರತವು 5ನೇ ಸ್ಥಾನದಲ್ಲಿದೆ. ಅಪೌಷ್ಟಿಕತೆ, ಸಾಂಕ್ರಾಮಿಕ ರೋಗಗಳು ಸೇರಿದಂತೆ ಹಲವು ಅನಾಹುತಗಳಿಗೆ ದೇಶ ಪ್ರತಿ ವರ್ಷ ಬಲಿಯಾಗುತ್ತಲೇ ಇದೆ. ಭಾರತದ ಆರೋಗ್ಯ ಪಾಲನಾ ವ್ಯವಸ್ಥೆಯ ಕಳಪೆ ಸ್ಥಿತಿಯನ್ನು ಈಗಾಗಲೇ ಕೋವಿಡ್-19 ಬಿಕ್ಕಟ್ಟು ಬಯಲುಗೊಳಿಸಿದೆ. ಇದರ ನಡುವೆ ಜಾಗತಿಕ ಮಟ್ಟದಲ್ಲಿ ಉಲ್ಬಣಿಸುತ್ತಿರುವ ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ಎದುರಿಸುವಲ್ಲಿಯೂ ಭಾರತ ಸನ್ನದ್ಧವಾಗಿಲ್ಲವೆಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಹವಾಮಾನ ವಿಕೋಪದಿಂದಾಗಿ ಜನತೆಯ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಎದುರಿಸಲು, ಭಾರತವು ಆರೋಗ್ಯ ಕ್ಷೇತ್ರಕ್ಕಾಗಿ ಮಾಡುವ ವೆಚ್ಚವನ್ನು ತನ್ನ ಒಟ್ಟು ಆಂತರಿಕ ಉತ್ಪನ್ನದ ಶೇ.2.5ರಷ್ಟು ಹೆಚ್ಚಿಸಬೇಕೆಂದು ತಜ್ಞರು ಈಗಾಗಲೇ ಸಲಹೆ ನೀಡಿದ್ದಾರೆ. ವಿಪರ್ಯಾಸವೆಂದರೆ, ಕಳೆದ 15 ವರ್ಷಗಳಿಂದಲೂ ಭಾರತ ಸರಕಾರವು ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ.1ರಷ್ಟನ್ನು ಮಾತ್ರವೇ ಆರೋಗ್ಯ ಕ್ಷೇತ್ರಕ್ಕಾಗಿ ವೆಚ್ಚ ಮಾಡುತ್ತಿದೆ. 2017-18ರ ಸಾಲಿನಲ್ಲಿ ಭಾರತವು ದೇಶದ ಪ್ರತಿಯೊಬ್ಬ ಪ್ರಜೆಗೆ ತಲಾ 1,657 ರೂ.ನಂತೆ ವೆಚ್ಚ ಮಾಡಿದೆ.ಆದರೆ ತಜ್ಞರ ಪ್ರಕಾರ ಹವಾಮಾನ ವಿಕೋಪದಿಂದಾಗಿ ಭಾರತದ ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತಿದ್ದು , ಇದಕ್ಕಾಗಿ ಭಾರತವು ಪ್ರತಿಯೊಬ್ಬ ಪ್ರಜೆಗೂ ತಲಾ 4 ಸಾವಿರ ರೂ. ಖರ್ಚು ಮಾಡಬೇಕಿದೆ. ಇದರ ಜೊತೆ ನಮ್ಮ ದೇಶವು ವೈದ್ಯರುಗಳ ತೀವ್ರ ಅಭಾವವನ್ನು ಕೂಡಾ ಎದುರಿಸುತ್ತಿದೆ.ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ವಾಸ್ತವಿಕವಾಗಿ 10 ವೈದ್ಯರಿರಬೇಕಿತ್ತಾದರೂ, ಪ್ರಸಕ್ತ 7ರಷ್ಟು ವೈದ್ಯರು ಮಾತ್ರವೇ ಇದ್ದಾರೆ. ಪ್ರವಾಹ, ಚಂಡಮಾರುತದಿಂದಾಗಿ ವಾತಾವರಣದಲ್ಲಿ ಉಂಟಾಗುವ ವ್ಯತ್ಯಯವು ಸಾಂಕ್ರಾಮಿಕ ರೋಗಗಳನ್ನು ವೇಗವಾಗಿ ಹರಡುತ್ತದೆ. ಅತಿಸಾರ (ಡಯೋರಿಯಾ), ಮಲೇರಿಯಾ, ಚಿಕುನ್‌ಗುನ್ಯ ಮತ್ತಿತರ ಸೋಂಕುರೋಗಗಳು ತಾಂಡವವಾಡಲು ಕಾರಣವಾಗುತ್ತದೆ. ಆದರೆ ಇಂತಹ ಸಾಂಕ್ರಾಮಿಕ ಕಾಯಿಲೆಗಳ ಹಾವಳಿಯ ಜಾಡನ್ನು ಮುಂಚಿತವಾಗಿಯೇ ಪತ್ತೆಹಚ್ಚಲು ಅಥವಾ ಅಧ್ಯಯನ ಮಾಡಲು ಭಾರತದಲ್ಲಿ ಇನ್ನೂ ಕೂಡಾ ಸೂಕ್ತ ವ್ಯವಸ್ಥೆಯಿಲ್ಲದಿರುವುದು ದುರದೃಷ್ಟಕರ. ಈ ರೀತಿಯ ಸೋಂಕುರೋಗಗಳು ಈಗಾಗಲೇ ಸಂಪನ್ಮೂಲಗಳು, ಔಷಧಿ ಹಾಗೂ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಬಾಧಿತವಾಗಿರುವ ಭಾರತದ ಪ್ರಾಥಮಿಕ ಆರೋಗ್ಯ ಪಾಲನಾ ವ್ಯವಸ್ಥೆಯು ಇನ್ನಷ್ಟು ಬಸವಳಿಯುವಂತೆ ಮಾಡಿವೆೆ.

ವಿಚಿತ್ರವೆಂದರೆ ಭಾರತದಾದ್ಯಂತ ಸಾರ್ವಜನಿಕರಿಗೆ ಬಹುತೇಕ ಮೂಲಭೂತ ಆರೋಗ್ಯಪಾಲನಾ ಸೌಲಭ್ಯಗಳನ್ನು ಒದಗಿಸುವಂತಹ 1,56,231 ಉಪಕೇಂದ್ರಗಳಿವೆ. ಅವುಗಳ ಪೈಕಿ 78,569 ಆರೋಗ್ಯ ಕೇಂದ್ರಗಳಲ್ಲಿ ಪುರುಷ ಆರೋಗ್ಯ ಸಿಬ್ಬಂದಿಗಳೇ ಇಲ್ಲ. ಇನ್ನು 6,371 ಆರೋಗ್ಯ ಕೇಂದ್ರಗಳಲ್ಲಿ ಸಹಾಯಕ ನರ್ಸ್, ಮಿಡ್‌ವೈವ್ಸ್‌ಗಳಿಲ್ಲಹಾಗೂ 4,243ರಲ್ಲಿ ಇವರ್ಯಾರೂ ಇಲ್ಲವೆಂದು 2017ರ ಗ್ರಾಮೀಣ ಆರೋಗ್ಯ ಅಂಕಿಅಂಶಗಳು ಬಹಿರಂಗಪಡಿಸಿವೆ.

    ರಾಜ್ಯಗಳು ತಮ್ಮ ಬಜೆಟ್‌ನ ಕನಿಷ್ಠ ಶೇ.8ರಷ್ಟನ್ನಾದರೂ ಆರೋಗ್ಯಪಾಲನಾ ಕ್ಷೇತ್ರದ ಮೇಲೆ ವ್ಯಯಿಸಬೇಕು. ಇದರಿಂದಾಗಿ ಸಾರ್ವಜನಿಕ ಆರೋಗ್ಯ ಪಾಲನಾ ವೆಚ್ಚದ ಮೇಲಿನ ಶೇ.60ರಷ್ಟನ್ನು ಭರಿಸಿದಂತಾಗುತ್ತದೆ. ಉಳಿದ ಶೇ.40ರಷ್ಟನ್ನು ಕೇಂದ್ರ ಸರಕಾರ ಒದಗಿಸುವುದು ಅತ್ಯಗತ್ಯವಾಗಿದೆ. ಭಾರತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಮೂಲಭೂತ ಆರೋಗ್ಯ ಸೇವೆಯನ್ನು ಒದಗಿಸಲು ಕನಿಷ್ಠ 25,650 ವೈದ್ಯರ ಅಗತ್ಯವಿದೆ. ಹೀಗಾದಲ್ಲಿ ಪ್ರತಿ ವೈದ್ಯರು ಕನಿಷ್ಠ 40 ಹೊರರೋಗಿಗಳಿಗೆ ಚಿಕಿತ್ಸೆ, ಸಲಹೆ ನೀಡಲು ಸಾಧ್ಯವಾಗಲಿದೆ.

ಪ್ರಕೃತಿ ವಿಕೋಪಗಳ ದುಷ್ಪರಿಣಾಮಗಳಿಂದ ಅತಿ ಹೆಚ್ಚು ಬಾಧಿತವಾಗುವುದು ಗ್ರಾಮೀಣ ಪ್ರದೇಶಗಳಲ್ಲಿರುವ ಬಡ ಸಮುದಾಯ. ಆದುದರಿಂದ ಭಾರತದಲ್ಲಿ ಬಲಿಷ್ಠವಾದ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಅಗತ್ಯವಿದೆ. ಆದರೆ 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತ ಮಾತ್ರ ಇನ್ನೂ ಕೂಡಾ ಆರೋಗ್ಯದ ಮೇಲಿನ ವೆಚ್ಚವನ್ನು ಹೆಚ್ಚಿಸಲು ಹಿಂದೆ ಮುಂದೆ ನೋಡುತ್ತಿದೆ. ಆದಾಗ್ಯೂಕೆಲವು ಸಣ್ಣ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರಾಥಮಿಕ ಆರೋಗ್ಯದ ಮೇಲಿನ ತಮ್ಮ ಹೂಡಿಕೆಯನ್ನು ತುಸು ಅಧಿಕಗೊಳಿಸಿರುವುದು ಕಂಡುಬರುತ್ತದೆ. ಮಿರೆರಾಂ, ಸಿಕ್ಕಿಂ , ಪುದುಚೇರಿ, ಗೋವಾ, ಅಂಡಮಾನ್ ನಿಕೋಬಾರ್, ಹಿಮಾಚಲಪ್ರದೇಶ ಪ್ರತಿ ವ್ಯಕ್ತಿಯ ಆರೋಗ್ಯದ ಮೇಲೆ ಸರಾಸರಿ ತಲಾ ನಾಲ್ಕು ಸಾವಿರ ರೂ. ವ್ಯಯಿಸುತ್ತಿವೆ.

ಈ ಸಲದ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹವಾಮಾನ ಬದಲಾವಣೆಯಿಂದ ಉಂಟಾಗುವ ಪ್ರಾಕೃತಿಕ ದುಷ್ಪರಿಣಾಮಗಳನ್ನು ಎದುರಿಸಲು ದೇಶವು ಮಾಡಿಕೊಂಡಿರುವ ಸಿದ್ಧತೆಗಳನ್ನು ಪ್ರಸ್ತಾವಿಸಿದ್ದರು. ಆದರೆ ಹವಾಮಾನ ಬದಲಾವಣೆಯಿಂದ ಆರೋಗ್ಯ ಪಾಲನಾ ವ್ಯವಸ್ಥೆಯ ಮೇಲೆ ಉಂಟಾಗುವ ಒತ್ತಡದ ಬಗ್ಗೆ ಯಾವುದೇ ಉಲ್ಲೇಖ ಮಾಡಲಿಲ್ಲ. ಕಾಲ ಇನ್ನೂ ಮಿಂಚಿಲ್ಲ, ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಈ ನಿಟ್ಟಿನಲ್ಲಿ ಸಮನ್ವಯದಿಂದ ದುಡಿದಲ್ಲಿ ಖಂಡಿತವಾಗಿ ಆರೋಗ್ಯಕ್ಕೆ ಸಂಬಂಧಿಸಿ ಅಪಾಯದಲ್ಲಿರುವ ದೇಶದ ಕೋಟ್ಯಂತರ ಜನತೆಯನ್ನು ರಕ್ಷಿಸಲು ಸಾಧ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News