139 ಮಂದಿಯಿಂದ ಲೈಂಗಿಕ ದೌರ್ಜನ್ಯ, 5,000ಕ್ಕೂ ಹೆಚ್ಚು ಬಾರಿ ಅತ್ಯಾಚಾರ: ಯುವತಿಯ ಆರೋಪ

Update: 2020-08-22 11:35 GMT

ಹೈದರಾಬಾದ್: ಕಳೆದ 10 ವರ್ಷ ಅವಧಿಯಲ್ಲಿ ತನ್ನ ಮೇಲೆ 139 ಪುರುಷರು  5,000ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು 25 ವರ್ಷದ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ಎಫ್‍ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವರ ಪೈಕಿ ವಿದ್ಯಾರ್ಥಿ ಯೂನಿಯನ್ ನಾಯಕರು, ಚಿತ್ರರಂಗದವರು ಹಾಗೂ ಇತರರು ಸೇರಿದ್ದಾರೆಂದು ದೂರಲಾಗಿದೆ. ಕೆಲವರ ಹೆಸರುಗಳನ್ನು ಯುವತಿ ತನ್ನ ದೂರಿನಲ್ಲಿ  ಉಲ್ಲೇಖಿಸಿದ್ದಾಳೆ.

ಪದವಿ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದ ಯುವತಿ ಜೂನ್ 2009ರಲ್ಲಿ ವಿವಾಹವಾಗಿದ್ದಳು. ಆದರೆ ಮೂರು ತಿಂಗಳ ನಂತರ ಆಕೆಯ ಪತಿಯ ಕುಟುಂಬದ ಹಲವರು ಆಕೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದರು. ಒಂಬತ್ತು ತಿಂಗಳ ತನಕ ಈ ರೀತಿ ಹಿಂಸೆ ಅನುಭವಿಸಿದ್ದ ಆಕೆ ಡಿಸೆಂಬರ್ 2010ರಲ್ಲಿ ತನ್ನ ತವರು ಮನೆಗೆ ವಾಪಸಾಗಿ ಗಂಡನಿಂದ ವಿಚ್ಛೇದನ ಪಡೆದು ಶಿಕ್ಷಣ ಮುಂದುವರಿಸಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಕೂಡ ಹಲವರು ತನ್ನ ಮೇಲೆ ದೌರ್ಜನ್ಯವೆಸಗಿದ್ದು ತನ್ನ  ಹಲವು ಖಾಸಗಿ ಚಿತ್ರ ಮತ್ತು ವೀಡಿಯೋಗಳನ್ನು ತೆಗೆದಿದ್ದೇ ಅಲ್ಲದೆ ಹಲವಾರು ಬಾರಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಗರ್ಭಪಾತವನ್ನೂ ಮಾಡಿಸಲಾಗಿದೆ. ತನಗೆ ಅಮಲು ಪದಾರ್ಥ ತಿನಿಸಿ, ನಗ್ನವಾಗಿ ನರ್ತಿಸುವಂತೆ ಮಾಡಲಾಗಿದೆ ಹಾಗೂ ಉರಿಯುವ ಸಿಗರೇಟಿನ ತುಂಡಿನಿಂದ ಚುಚ್ಚಲಾಗಿದೆ. ಸಹಕರಿಸದೇ ಇದ್ದರೆ ಕೊಲ್ಲುವ ಬೆದರಿಕೆಯನ್ನೂ ಒಡ್ಡಲಾಗಿತ್ತು ಎಂದು ಆಕೆ ದೂರಿದ್ದಾಳೆ. ನಂತರ ಎನ್‍ಜಿಒ ಒಂದರ ಬೆಂಬಲ ಪಡೆದು ದೂರು ನೀಡಿದ್ದಾಗಿ ಆಕೆ ಹೇಳಿದ್ದಾಳೆ.

ಯುವತಿಗೆ ಬೆದರಿಕೆಯೊಡ್ಡಿ ಲೈಂಗಿಕ ಕಿರುಕುಳ ನೀಡಿರುವ ಶಂಕೆಯಿದೆ ಎಂದು ಹೇಳಿರುವ ಪೊಲೀಸರು ತನಿಖೆ ಆರಂಭಿಕ ಹಂತದಲ್ಲಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News