ಪತಿ ಜಗಳವಾಡುತ್ತಿಲ್ಲ, ಅತಿಯಾಗಿ ಪ್ರೀತಿಸುತ್ತಿದ್ದಾನೆ ಎಂದು ವಿಚ್ಛೇದನ ಕೇಳಿದ ಪತ್ನಿ!

Update: 2020-08-22 11:39 GMT

ಲಕ್ನೋ: ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಮಹಿಳೆಯೊಬ್ಬಳು ವಿವಾಹವಾದ 18 ತಿಂಗಳುಗಳಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಅದಕ್ಕೆ ಆಕೆ ನೀಡಿರುವ ಕಾರಣ ನ್ಯಾಯಾಲಯವನ್ನೇ ತಬ್ಬಿಬ್ಬುಗೊಳಿಸಿದೆ. ತನ್ನ ಗಂಡ ತನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾನೆ ಹಾಗೂ ಜಗಳವೇ ಆಡುವುದಿಲ್ಲ ಎಂಬ ಕಾರಣಕ್ಕೆ ಆಕೆ ವಿಚ್ಛೇದನ ಕೋರಿದ್ದಾಳೆ.

ತನ್ನ ಪತಿಯ ‘ವಿಪರೀತ ಪ್ರೀತಿ’ಯನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಕಳೆದ 18 ತಿಂಗಳುಗಳಲ್ಲಿ ಒಮ್ಮೆಯೂ ಆತನ ಜತೆ ಜಗಳವಾಗಿಲ್ಲ, ಇದರಿಂದ ಬೇಸತ್ತು ಹೋಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ತನ್ನ ಪತಿ ಮನೆಗೆಲಸದಲ್ಲಿ ಸಹಾಯ ಮಾಡುತ್ತಾರೆ, ಯಾವತ್ತೂ ತನ್ನ ಮೇಲೆ ರೇಗುವುದಿಲ್ಲ, ತಪ್ಪು ಮಾಡಿದರೂ ಕ್ಷಮಿಸಿ ಬಿಡುತ್ತಾರೆ, “ನನಗೆ ಅವರ ಜತೆ ಜಗಳವಾಡಬೇಕಿದೆ, ಎಲ್ಲದ್ದಕ್ಕೂ ತಲೆ ಅಲ್ಲಾಡಿಸುವ ಪತಿ ನನಗೆ ಬೇಡ” ಎಂದೂ ಆಕೆ ಹೇಳಿದ್ದಾಳೆ.

ಆಕೆ ವಿಚ್ಛೇದನಕ್ಕೆ ನೀಡಿರುವ ಕಾರಣಗಳಿಂದ ನ್ಯಾಯಾಲಯಕ್ಕೆ ಅಚ್ಚರಿಯಾಗಿದ್ದು ಆಕೆಯ ಅಪೀಲನ್ನು ಅದು ಕ್ಷುಲ್ಲಕ ಎಂದು ತಿರಸ್ಕರಿಸಿದೆ. ವಿಚ್ಛೇದನ ಕೋರಿರುವುದಕ್ಕೆ ಬೇರೆ  ಯಾವುದೇ ಕಾರಣವಿದೆಯೇ ಎಂದು ಕೇಳಿದಾಗ ಆಕೆ ಇಲ್ಲವೆಂದಿದ್ದಾಳೆ.

ಆದರೆ ಆಕೆಯ ಪತಿ ಮಾತ್ರ ತಾನೇನೂ ತಪ್ಪು ಮಾಡಿಲ್ಲ, ಬದಲಾಗಿ ಪರಿಪೂರ್ಣ ಪತಿಯಾಗಿರಬೇಕೆಂದು ಬಯಸಿದ್ದಾಗಿ ಹೇಳಿದ್ದಾನಲ್ಲದೆ, ಆತನ ಅಪೀಲಿನ ಮೇರೆಗೆ ನ್ಯಾಯಾಲಯ ಆಕೆಯ ಅಪೀಲನ್ನು ತಿರಸ್ಕರಿಸಿದೆ. ಇಬ್ಬರೂ  ತಮ್ಮ ನಡುವಿನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News