ಕೇಂದ್ರ ವಿವಿಗಳಲ್ಲಿ ಒಬಿಸಿ ವರ್ಗಕ್ಕೆ ಮೀಸಲಿಟ್ಟ 313 ಹುದ್ದೆಗಳಲ್ಲಿ 9 ಮಾತ್ರ ಭರ್ತಿ: ಯುಜಿಸಿ ಅಂಕಿಅಂಶಗಳಿಂದ ಬಹಿರಂಗ

Update: 2020-08-24 16:18 GMT

ಹೊಸದಿಲ್ಲಿ, ಆ.24: ದೇಶದಾದ್ಯಂತದ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ 2020ರ ಆಗಸ್ಟ್‌ವರೆಗೆ ಇತರ ಹಿಂದುಳಿದ ವರ್ಗ(ಒಬಿಸಿ)ದ ಅಭ್ಯರ್ಥಿಗಳಿಗೆ ಮೀಸಲಾದ 313 ಪ್ರೊಫೆಸರ್ ಮಟ್ಟದ ಹುದ್ದೆಗಳು ಮಂಜೂರಾಗಿದ್ದರೂ , ಕೇವಲ 9 ಹುದ್ದೆಗಳಿಗೆ ನೇಮಕಾತಿ ನಡೆದಿದೆ ಎಂದು ಯುಜಿಸಿ ಅಂಕಿಅಂಶದಿಂದ ತಿಳಿದು ಬಂದಿರುವುದಾಗಿ ‘Theprint.in’ ವರದಿ ಮಾಡಿದೆ.

ಜೆಎನ್‌ಯು, ದಿಲ್ಲಿ ವಿವಿ, ಬನಾರಸ್ ಹಿಂದು ವಿವಿ, ಅಲಹಾಬಾದ್ ವಿವಿ ಸಹಿತ ಹಲವು ವಿವಿಗಳು ಜನವರಿವರೆಗೆ ಒಬಿಸಿ ವಿಭಾಗದ ಮೀಸಲಾತಿಯ ಒಂದೂ ಪ್ರೊಫೆಸರ್ ಸ್ಥಾನವನ್ನು ಭರ್ತಿ ಮಾಡಿಕೊಂಡಿಲ್ಲ. ಆದರೆ ಸಹಾಯಕ ಪ್ರಾಧ್ಯಾಪಕ(ಅಸೋಸಿಯೇಟ್ ಪ್ರೊಫೆಸರ್)ರ ಹುದ್ದೆಗೆ ಸಂಬಂಧಿಸಿದ ಅಂಕಿ ಅಂಶದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದು ಇಲ್ಲಿ ಮಂಜೂರಾದ ಒಬಿಸಿ ಹುದ್ದೆಗಳಲ್ಲಿ 5.17% ಭರ್ತಿಯಾಗಿದೆ. ಈ ವಿಭಾಗದಲ್ಲಿ 735 ಒಬಿಸಿ ಹುದ್ದೆಗಳು ಮಂಜೂರಾಗಿದ್ದರೆ 38 ಭರ್ತಿಯಾಗಿದೆ. ಅಸಿಸ್ಟೆಂಟ್ ಪ್ರೊಫೆಸರ್ ಮಟ್ಟದ ಹುದ್ದೆಗಳನ್ನು ಗಮನಿಸಿದರೆ, 2232 ಹುದ್ದೆ ಮಂಜೂರಾಗಿದ್ದರೆ 1,327 ಹುದ್ದೆ ಭರ್ತಿಯಾಗಿದೆ.

ಒಬಿಸಿ ಮೀಸಲಾತಿಯ ನಿಟ್ಟಿನಲ್ಲಿ ‘ಕೆನೆಪದರ ವಲಯ’ದ ವ್ಯಾಖ್ಯಾನವನ್ನು ಬದಲಾಯಿಸಿ, ಆದಾಯ ಮಿತಿಯನ್ನು ನಿರ್ಧರಿಸುವ ಮಾನದಂಡದಲ್ಲಿ ವೇತನವನ್ನೂ ಸೇರಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿರುವ ಈ ಸಂದರ್ಭದಲ್ಲಿ ಕೇಂದ್ರ ವಿವಿಗಳಲ್ಲಿರುವ ಪರಿಸ್ಥಿತಿಯ ಬಗ್ಗೆ ವರದಿ ಬೆಳಕು ಚೆಲ್ಲಿದೆ. ಆದರೆ ಕೆನೆಪದರದ ವ್ಯಾಖ್ಯಾನವನ್ನು ತಿರುಚುವುದರಿಂದ , ಸರಕಾರಿ ಸಂಸ್ಥೆಗಳಲ್ಲಿ ಈಗ ಒಬಿಸಿ ವರ್ಗ ಹೊಂದಿರುವ ಅಲ್ಪಪ್ರಾತಿನಿಧ್ಯದ ಮೇಲೂ ಪರಿಣಾಮ ಬೀರಬಹುದು ಎಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ(ಎನ್‌ಸಿಬಿಸಿ), ಮತ್ತು ಬಿಜೆಪಿಯ ಸಹಿತ ಹಲವು ಒಬಿಸಿ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರಿ ಸಂಸ್ಥೆ ಹಾಗೂ ಇಲಾಖೆಗಳಲ್ಲಿ ಒಬಿಸಿ ಪ್ರತಿನಿಧಿಗಳ ದತ್ತಾಂಶವನ್ನು ಸರಿ ಹೊಂದಿಸುವಂತೆ ಕಳೆದ ವಾರ ನಡೆದಿದ್ದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಎನ್‌ಸಿಬಿಸಿಗೆ ಸೂಚಿಸಿದ್ದರು. ಇದರಂತೆ ಮಾಹಿತಿ ಸಂಗ್ರಹಿಸಿದಾಗ ಕೇಂದ್ರ ವಿವಿಗಳಲ್ಲಿ ಒಬಿಸಿ ಮೀಸಲಾತಿಯ ಹುದ್ದೆಗೆ ಕಡಿಮೆ ನೇಮಕಾತಿ ನಡೆದಿರುವ ಮಾಹಿತಿ ಲಭಿಸಿದೆ ಎಂದು ಎನ್‌ಸಿಬಿಸಿ ಅಧಿಕಾರಿ ಹೇಳಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಕ ಹುದ್ದೆಗಳಿಗೆ ನೇಮಕಾತಿಯ ಸಂದರ್ಭ ಒಬಿಸಿಗೆ ಇದ್ದ ಮೀಸಲಾತಿ ನಿಯಮವನ್ನು ಯುಜಿಸಿ ರದ್ದುಗೊಳಿಸಿದ್ದರೂ, 2019ರಲ್ಲಿ ಕೇಂದ್ರ ಸರಕಾರ ಕೇಂದ್ರ ಶಿಕ್ಷಣ ಸಂಸ್ಥೆಗಳ ಅಧಿಸೂಚನೆಯ ಮೂಲಕ , ಒಬಿಸಿ ಮೀಸಲಾತಿಯನ್ನು ಮರುಸ್ಥಾಪಿಸಿದೆ. ಆದರೆ ಈ ಅಧಿಸೂಚನೆ ಜಾರಿಯಾದ ಒಂದು ವರ್ಷದ ಬಳಿಕವೂ ಹೆಚ್ಚಿನ ಬದಲಾವಣೆಯಾಗಿಲ್ಲ. ಸಮರ್ಥ ಅಭ್ಯರ್ಥಿ ಲಭ್ಯವಾಗಿಲ್ಲ ಎಂದು ಹೆಚ್ಚಿನ ಸಂದರ್ಭ ಕೇಂದ್ರ ವಿವಿಗಳು ಕಾರಣ ನೀಡುತ್ತವೆ. ಆದರೆ ದೇಶದಾದ್ಯಂತದ ಹಲವು ವಿವಿಗಳಿಗೆ ಒಬ್ಬ ಸಮರ್ಥ , ಉನ್ನತ ಶಿಕ್ಷಣ ಪಡೆದ ಒಬಿಸಿ ಅಭ್ಯರ್ಥಿ ದೊರಕದಿರಲು ಸಾಧ್ಯವೇ ಎಂದು ಆ ಅಧಿಕಾರಿ ಪ್ರಶ್ನಿಸಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಬಿಸಿ ವರ್ಗದ ಅಭ್ಯರ್ಥಿಗಳನ್ನು ಪ್ರೊಫೆಸರ್ ಹುದ್ದೆಗೆ ಆಯ್ಕೆ ಮಾಡಲು ಮನಸಿಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎಂದು ದಿಲ್ಲಿ ವಿವಿಯ ಮಹಾರಾಜ ಅಗ್ರಸೇನ್ ಕಾಲೇಜಿನ ಅಧ್ಯಾಪಕ ಸುಬೋಧ್ ಕುಮಾರ್ ಹೇಳಿದ್ದಾರೆ.

‘ಒಬಿಸಿ ಹುದ್ದೆ ಭರ್ತಿಯಾಗದಿರಲು ಮೂರು ಕಾರಣಗಳಿವೆ. ಒಂದನೆಯದು, ನೇಮಕಾತಿ ಪ್ರಕ್ರಿಯೆ ಸುದೀರ್ಘಾವಧಿಯದ್ದಾಗಿರುತ್ತದೆ. ಎರಡನೆಯದು, ಒಬಿಸಿ ಮೀಸಲಾತಿಯ ವಿವರ ಸರಕಾರಿ ಸಂಸ್ಥೆಗಳಿಗೆ ವಿಳಂಬವಾಗಿ ಲಭಿಸುವ ಕಾರಣ ಇದನ್ನು ಜಾರಿಗೊಳಿಸಲು ಮತ್ತಷ್ಟು ವಿಳಂಬವಾಗುತ್ತದೆ. ಮೂರನೆಯದು, ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಹೊಂದಿಕೊಳ್ಳುವ ಅಭ್ಯರ್ಥಿಗೆ ಮಾತ್ರ ಮಣೆ ಹಾಕಬೇಕು ಎಂಬ , ಈಗ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭವಾಗಿರುವ ಹೊಸ ಪ್ರವೃತ್ತಿ ’ ಎಂದು ಜೆಎನ್‌ಯು ಪ್ರೊಫೆಸರ್ ನರೇಂದ್ರ ಕುಮಾರ್ ಹೇಳಿದ್ದಾರೆ.

ಒಬಿಸಿಗೆ 27% ಮೀಸಲಾತಿ ರದ್ದತಿ ಪ್ರಮುಖ ಕಾರಣ

ಉನ್ನತ ಹುದ್ದೆಗಳಿಗೆ ನೇಮಕಾತಿಯ ಸಂದರ್ಭದಲ್ಲಿ ಒಬಿಸಿ ವರ್ಗದವರಿಗೆ 27% ಮೀಸಲಾತಿಯನ್ನು 2016ರಲ್ಲಿ ವಿಶ್ವವಿದ್ಯಾನಿಲಯ ಅನುದಾನ ಆಯೋಗ(ಯುಜಿಸಿ) ರದ್ದುಗೊಳಿಸಿರುವುದು, ಉನ್ನತ ಶಿಕ್ಷಕ ಹುದ್ದೆಗಳಲ್ಲಿ ಒಬಿಸಿ ವರ್ಗದವರ ಪ್ರಾತಿನಿಧ್ಯ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಎನ್‌ಸಿಬಿಸಿ ಅಧಿಕಾರಿ ಹೇಳಿದ್ದಾರೆ. ಈ ಮೀಸಲಾತಿ ಅಸಿಸ್ಟೆಂಟ್ ಪ್ರೊಫೆಸರ್ ಮಟ್ಟದ ಹುದ್ದೆ ನೇಮಕಾತಿಗೆ ಮಾತ್ರ ಅನ್ವಯಿಸುತ್ತದೆ ಎಂದು ಯುಜಿಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News