​ಕೊರೋನ ಸೋಂಕಿತ ಚುನಾವಣಾ ಮಾರ್ಗಸೂಚಿ

Update: 2020-08-25 05:27 GMT

ಇವಿಎಂ ಕುರಿತಂತೆ ಇಂದಿಗೂ ಕೆಲವು ರಾಜಕೀಯ ಪಕ್ಷಗಳು ತಮ್ಮ ಅಸಮಾಧಾನಗಳನ್ನು ವ್ಯಕ್ತಪಡಿಸುತ್ತಲೇ ಇವೆ. ನರೇಂದ್ರ ಮೋದಿಯವರನ್ನು ಎರಡು ಬಾರಿ ಭರ್ಜರಿ ಮತಗಳೊಂದಿಗೆ ಪ್ರಧಾನಿಯಾಗಿಸುವಲ್ಲಿ ಇವಿಎಂ ತಿರುಚುವಿಕೆಯ ಪಾತ್ರವಿದೆ ಎನ್ನುವ ಆರೋಪಗಳನ್ನು ಹಲವರು ಮಾಡಿದ್ದಾರೆ. ಇಂದಿಗೂ ಇವಿಎಂ ಸಂಪೂರ್ಣ ವಿಶ್ವಾಸಾರ್ಹತೆಯನ್ನು ತನ್ನದಾಗಿಸಿಕೊಂಡಿಲ್ಲ. ಇವಿಎಂ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತು ಮಾಡುವವರೆಗೆ ಪ್ರಜಾಸತ್ತೆ ಅಪಾಯದಲ್ಲಿದೆಯೆಂದೇ ಅರ್ಥ. ವಿವಿಧ ರಾಜಕೀಯ ಪಕ್ಷಗಳ ಅನುಮಾನಗಳನ್ನು ಪರಿಹರಿಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕೆ ಸೇರಿದೆಯಾದರೂ, ಅದು ಆರೋಪಗಳನ್ನ್ನು ಸಾರಾಸಗಟಾಗಿ ತಳ್ಳಿ ಹಾಕಿ ಇವಿಎಂ ಬೆನ್ನಿಗೆ ಬಲವಾಗಿ ನಿಂತಿದೆ. ಹಲವೆಡೆ ಇವಿಎಂ ದುರ್ಬಳಕೆಯಾದ ಕುರಿತಂತೆಯೂ ಆಯೋಗ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಇದೀಗ ‘ದಿ ಕ್ವಿಂಟ್’ ಸಂಶೋಧನಾ ವರದಿಯೊಂದು, 2019 ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಇವಿಎಂಗಳ ತಪಾಸಣೆ ಸರಿಯಾಗಿರಲಿಲ್ಲ ಎನ್ನುವುದನ್ನು ಬಹಿರಂಗಪಡಿಸಿದೆ. ಸ್ವತಃ ಇಂಜಿನಿಯರ್‌ಗಳೇ ಈ ಕುರಿತಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಖಾಸಗಿ ಇಂಜಿನಿಯರ್‌ಗಳನ್ನು ಇವಿಎಂ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ವರದಿ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳು ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರಗಳ ವಿನ್ಯಾಸ ಕುರಿತು ಮಾಹಿತಿಗಳನ್ನು ಸೋರಿಕೆ ಮಾಡಲು ಸಾಧ್ಯವಿದೆ. ಅವರು ಚುನಾವಣಾ ಯೋಜನೆ ಮತ್ತು ಅದನ್ನು ನಡೆಸುವುದರ ಕುರಿತೂ ಮಾಹಿತಿಗಳನ್ನು ಸೋರಿಕೆ ಮಾಡಬಲ್ಲರು ಎನ್ನುವುದನ್ನೂ ವರದಿ ಹೇಳುತ್ತದೆ. ಇಷ್ಟಿದ್ದರೂ, ಈ ಕುರಿತಂತೆ ಚುನಾವಣಾ ಆಯೋಗ ಯಾವುದೇ ಆತಂಕವನ್ನು ವ್ಯಕ್ತಪಡಿಸದೇ ಇರುವುದು, ಕನಿಷ್ಠ ಎಲ್ಲ ಪಕ್ಷಗಳನ್ನು ಇವಿಎಂ ವಿಷಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಅನುಮಾನಗಳಿಗೆ ಇನ್ನಷ್ಟು ಪುಷ್ಟ್ನಿ ನೀಡುತ್ತಿದೆ. ಮೋದಿ ನೇತೃತ್ವದ ಸರಕಾರ ಸರ್ವಾಧಿಕಾರಿ ರೂಪದಲ್ಲಿ ಕೆಲಸ ನಿರ್ವಹಿಸುತ್ತಿದೆ. ಸರಕಾರದ ನೀತಿಗಳಿಂದಾಗಿ ಭಾರತದ ಆರ್ಥಿಕತೆ ಸಂಪೂರ್ಣ ದಿವಾಳಿಯಾಗಿದೆ. ವಿಶ್ವಾಸಾರ್ಹತೆಯನ್ನು ಕಳೆದುಕೊಂಡ ಇವಿಎಂನಿಂದ ಆಯ್ಕೆಯಾದ ಸರಕಾರ, ಭವಿಷ್ಯದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಹಾಳುಗೆಡಹುವ ಸೂಚನೆಗಳು ಕಾಣಿಸುತ್ತಿವೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಮತ್ತು ನ್ಯಾಯಾಂಗ ಎರಡು ಜಾಗೃತವಾಗಬೇಕಾಗಿ ಪ್ರಜಾಸತ್ತೆಯ ರಕ್ಷಣೆಗೆ ಮುಂದೆ ಬರಬೇಕಾಗಿತ್ತು. ದುರದೃಷ್ಟವಶಾತ್ ಈ ಎರಡೂ ಸಂಸ್ಥೆಗಳನ್ನು ದುರ್ಬಳಕೆಗೊಳಿಸಿಯೇ ಸರಕಾರ ತನ್ನ ದುರುದ್ದೇಶಗಳನ್ನು ಸಾಧಿಸಿಕೊಳ್ಳುತ್ತಿದೆ.

ಗಾಯದ ಮೇಲೆ ಬರೆ ಎಳೆದಂತೆ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗ ನೂತನ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಯ ಪ್ರಕಾರ ಕೊರೋನ ಸೋಂಕಿತರು ಮತ್ತು 80 ವರ್ಷಕ್ಕೆ ಮೇಲ್ಪಟ್ಟವರು ಅಂಚೆಯ ಮೂಲಕ ಮತದಾನ ಮಾಡಬಹುದಾಗಿದೆ. ಈ ಮಾರ್ಗಸೂಚಿ ಚುನಾವಣೆಯ ಫಲಿತಾಂಶಗಳ ಮೇಲೆ ಇನ್ನಷ್ಟು ದುಷ್ಪರಿಣಾಮಗಳನ್ನು ಬೀರುವುದರಲ್ಲಿ ಅನುಮಾನವಿಲ್ಲ. ಕೊರೋನ ವೈರಸ್‌ನ್ನು ಮುಂದಿಟ್ಟು ದೇಶದ ಆರ್ಥಿಕತೆಯನ್ನು ಈಗಾಗಲೇ ಸರ್ವನಾಶ ಮಾಡಲಾಗಿದೆ. ಇದೀಗ ಚುನಾವಣಾ ವ್ಯವಸ್ಥೆಯನ್ನ್ನು ಇನ್ನಷ್ಟು ಹದಗೆಡಿಸುವುದಕ್ಕೂ ಕೊರೋನವನ್ನು ಬಳಸಲು ಸರಕಾರ ಮುಂದಾಗಿದೆ. ದೇಶದಲ್ಲಿ ಪ್ರತಿ ದಿನ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆೆ. ಯಾರು ಕೊರೋನ ಸೋಂಕಿತರು? ಯಾರು ಅಲ್ಲ? ಎನ್ನುವುದರ ಕುರಿತಂತೆಯೂ ಜನರ ನಡುವೆ ಗೊಂದಲಗಳಿವೆ. ರೋಗ ಲಕ್ಷಣಗಳಿಲ್ಲದ ಕೊರೋನ ಸೋಂಕಿತರು, ಇದೇ ಸಂದರ್ಭದಲ್ಲಿ ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೆ ಮನೆಯಲ್ಲಿರುವ ಸೋಂಕಿತರು, ವೈದ್ಯಕೀಯ ಲಾಬಿಗಳಿಗೆ ಬಲಿಯಾಗಿ ಸೋಂಕಿಲ್ಲದೆಯೇ ಪಾಸಿಟಿವ್ ಎಂದು ಗುರುತಿಸಲ್ಪಟ್ಟ ಸೋಂಕಿತರು...ಹೀಗೆ ಹತ್ತು ಹಲವು ಬಗೆಯ ಸೋಂಕಿತರು ನಮ್ಮ ನಡುವೆ ಇದ್ದಾರೆ. ಮತದಾರರಲ್ಲಿ ಯಾರು ಕೊರೋನ ಸೋಂಕಿತರು ಎಂದು ಗುರುತಿಸುವುದೂ ಅಷ್ಟು ಸುಲಭವಿಲ್ಲ. ಹಾಗೆಯೇ ಸೋಂಕಿತರಿಗೆ ಅಂಚೆ ಮತದಾನ ಕಡ್ಡಾಯ ಮಾಡುವುದು, ಗುಪ್ತ ಮತದಾನದ ಉದ್ದೇಶವನ್ನೇ ಹಾಳುಗೆಡಹುತ್ತದೆ.

ಅಂಚೆ ಮತದಾನದಲ್ಲಿ ಮತದಾರ ತನ್ನ ಗೌಪ್ಯತೆಯನ್ನು ಕಾಪಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಮೊದಲೇ ಆತ ರೋಗಿಯಾಗಿರುತ್ತಾನೆ. ಅವನ ಮೇಲೆ ಕುಟುಂಬ ಸದಸ್ಯರು ಅಥವಾ ಸಮಾಜದ ಇತರರು ತಮ್ಮ ಒತ್ತಡಗಳನ್ನು ಹೇರುವ ಎಲ್ಲ ಅಪಾಯಗಳಿವೆ. ಇದೇ ಸಂದರ್ಭದಲ್ಲಿ ಸರಕಾರ ಅಂಚೆ ಇಲಾಖೆಯನ್ನು ದುರುಪಯೋಗ ಪಡಿಸಿ ಮತಗಳನ್ನು ತಿರುಚುವ ಸಾಧ್ಯತೆಗಳಿವೆ. ಜೊತೆಗೆ ಚುನಾವಣಾ ಅಧಿಕಾರಿಗಳೂ ಅಂಚೆ ಮತಗಳನ್ನು ದುರ್ಬಳಕೆ ಮಾಡಬಹುದು. ಒಟ್ಟಿನಲ್ಲಿ, ಒಬ್ಬ ಎಲ್ಲ ಹೊರಗಿನ ಒತ್ತಡಗಳನ್ನು ಮೀರಿ ತನ್ನ ಮತವನ್ನು ಚಲಾಯಿಸಿದರೂ, ಅದು ಅಂಚೆಯ ಮೂಲಕ ತಲುಪುವಷ್ಟರ ಹೊತ್ತಿಗೆ ಅದಲು ಬದಲಾಗಬಹುದು. ಈಗಾಗಲೇ ಇವಿಎಂನಿಂದ ಘಾಸಿಕೊಂಡ ಚುನಾವಣೆಯ ವಿಶ್ವಾಸಾರ್ಹತೆ ಅಂಚೆ ಮತದಾನದಿಂದ ಇನ್ನಷ್ಟು ಘಾಸಿಗೊಳಗಾಗಬಹುದು. ಇದೇ ಸಂದರ್ಭದಲ್ಲಿ ವೃದ್ಧರಿಗೂ ಕೊರೋನ ಮುಂಜಾಗೃತಿಯ ಹೆಸರಿನಲ್ಲಿ ಅಂಚೆ ಮತದಾನವನ್ನು ವ್ಯವಸ್ಥೆಗೊಳಿಸಿದೆ. 80 ವರ್ಷ ದಾಟಿದ ವೃದ್ಧರು ಬಹುತೇಕ ಕುಟುಂಬದಲ್ಲಿ ಇನ್ನೊಬ್ಬರ ಆಸರೆಯಲ್ಲಿರುತ್ತಾರೆ. ತಾನೇ ಮತ ಚಲಾಯಿಸಿ, ಅದನ್ನು ಅಂಚೆಯ ಮೂಲಕ ತಲುಪಿಸಲು ಅಸಾಧ್ಯ. ಅನಿವಾರ್ಯವಾಗಿ ಆತ ಕುಟುಂಬದ ಇನ್ನೊಬ್ಬರ ನೆರವನ್ನು ಪಡೆಯಲೇ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವೃದ್ಧರಿಗೆ ಒತ್ತಡಗಳನ್ನು ಹಾಕುವುದು ಅಥವಾ ಆತನ ಮತಗಳನ್ನು ಕುಟುಂಬಸ್ಥರೇ ಚಲಾಯಿಸುವ ಎಲ್ಲ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಈ ಬಾರಿ ಕೊರೋನದಿಂದಾಗಿ ಲಕ್ಷಾಂತರ ಮತಗಳು ಗೌಪ್ಯತೆಗಳನ್ನು ಕಳೆದುಕೊಳ್ಳಲಿವೆ. ಅಂಚೆ ಮತಗಳಿಂದ ಆಯ್ಕೆಯಾಗುವ ಯಾವುದೇ ಅಭ್ಯರ್ಥಿಯ ಗೆಲುವು ಸಂವಿಧಾನದ ಆಶಯಕ್ಕೆ ಪೂರಕವಾಗಿರುವುದಿಲ್ಲ ಮತ್ತು ಆತ ಸಂವಿಧಾನಕ್ಕೆ ಬದ್ಧನಾಗಿ ಆಡಳಿತ ನಡೆಸುವುದು ಸಾಧ್ಯವಿಲ್ಲ. ಚುನಾವಣಾ ಆಯೋಗದ ಮಾರ್ಗಸೂಚಿಯ ವಿರುದ್ಧ ಕೆಲವು ಪಕ್ಷಗಳು ಧ್ವನಿಯೆತ್ತಿವೆಯಾದರೂ, ಅದು ಚುನಾವಣಾ ಆಯೋಗವನ್ನು ಎಚ್ಚರಿಸುವಷ್ಟು ಬಲವಾಗಿಲ್ಲ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಎಂದಿನಂತೆಯೇ ಈ ಮಾರ್ಗಸೂಚಿಯ ಅಪಾಯಗಳನ್ನು ನಿರ್ಲಕ್ಷಿಸಿವೆೆ. ಈ ಮಾರ್ಗಸೂಚಿಯ ಸಕಲ ಲಾಭವನ್ನು ಬಿಜೆಪಿ ತನ್ನದಾಗಿಸುವ ಸಾಧ್ಯತೆಗಳಿವೆ. ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ, ಇವಿಎಂ ಅಥವಾ ಇನ್ನಿತರ ವ್ಯವಸ್ಥೆಯ ಮೇಲೆ ಆರೋಪ ಹೊರಿಸುವುದಕ್ಕಿಂತ, ಚುನಾವಣೆ ನಡೆಯುವ ಮೊದಲೇ ಆ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸುವುದು ಜಾಣತನ. ಈ ನಿಟ್ಟಿನಲ್ಲಿ, ಚುನಾವಣಾ ಆಯೋಗದ ಅಂಚೆಮತದಾನವನ್ನು ಸರ್ವ ಪಕ್ಷಗಳು ಒಂದಾಗಿ ದೊಡ್ಡ ಧ್ವನಿಯಲ್ಲಿ ವಿರೋಧಿಸಬೇಕು. ಕೊರೋನ ಸೋಂಕಿತರಿಗಾಗಿ ಪ್ರತ್ಯೇಕ ಮತಗಟ್ಟೆಗಳನ್ನು ಮಾಡಲಿ. ಬೇಕಾದ ಮುಂಜಾಗ್ರತೆಗಳನ್ನು ಕೈಗೊಂಡು ಅವರಿಗೆ ಮತದಾನ ಮಾಡುವ ವ್ಯವಸ್ಥೆಯನ್ನು ಒದಗಿಸಿಕೊಡಲಿ. ಅದು ಬಿಟ್ಟು, ಗೌಪ್ಯತೆಯನ್ನು ಬಲಿಕೊಟ್ಟು ಚುನಾವಣೆ ನಡೆಸಿದರೆ, ಮತದಾನ ತನ್ನ ಉದ್ದೇಶವನ್ನೇ ಕಳೆದುಕೊಳ್ಳುತ್ತದೆ. ಯಾವ ಕಾರಣಕ್ಕೂ ಭಾರತದ ಚುನಾವಣೆ ಕೊರೋನಾ ಸೋಂಕಿಗೆ ಬಲಿಯಾಗಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News