ದ್ವೇಷವೆಂಬ ವೈರಸ್ ಪೀಡಿತರಿಗೆ ಹೈಕೋರ್ಟ್ ನೀಡಿದ ಲಸಿಕೆ

Update: 2020-08-26 04:55 GMT

ಕೊರೋನದಂತಹ ವೈರಸ್‌ಗೂ ಧರ್ಮದ ಬಣ್ಣ ನೀಡಿ ಅದನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡ ವಿಶ್ವದ ಏಕೈಕ ದೇಶ ಭಾರತ. ಸರಕಾರದ ವೈಫಲ್ಯದ ಕಾರಣದಿಂದಲೇ ಭಾರತಕ್ಕೆ ಕೊರೋನ ಕಾಲಿಟ್ಟಿತು. ಇಡೀ ವಿಶ್ವ ಕೊರೋನ ವಿರುದ್ಧ ಜಾಗೃತಗೊಂಡು ತಮ್ಮ ತಮ್ಮ ದೇಶಗಳಲ್ಲಿ ಬಂದೋಬಸ್ತ್ ಮಾಡುತ್ತಿದ್ದರೆ, ಭಾರತ ಸರಕಾರ ಮಾತ್ರ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದ ಸಂಭ್ರಮದಲ್ಲಿತ್ತು. ಫೆಬ್ರವರಿಯಲ್ಲೇ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ಮಾಡಿದ್ದಿದ್ದರೆ, ವಿದೇಶದಿಂದ ಆಗಮಿಸುವ ವಿಮಾನಗಳನ್ನು ನಿಯಂತ್ರಿಸಿದ್ದರೆ, ಇಡೀ ಭಾರತ ಲಾಕ್‌ಡೌನ್ ಆಗುವ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ. ಗುಜರಾತ್‌ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕಾಗಿ ಕೊರೋನ ಕುರಿತ ಎಚ್ಚರಿಕೆಯನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿತು. ಅಷ್ಟೇ ಅಲ್ಲ, ಟ್ರಂಪ್ ಕಾರ್ಯಕ್ರಮ ಮುಗಿದ ಬೆನ್ನಿಗೇ ಸಿಎಎ ವಿರುದ್ಧದ ಪ್ರತಿಭಟನೆಯನ್ನು ದಮನಿಸಲು ದಿಲ್ಲಿಯಲ್ಲಿ ಸರಕಾರಿ ಪ್ರಾಯೋಜಿತ ಗಲಭೆಯೊಂದು ಯಶಸ್ವಿಯಾಗಿ ನಡೆಯಿತು. ಕೊರೋನ ಈ ದೇಶವನ್ನು ಸಂಪೂರ್ಣ ಆವರಿಸಿಕೊಂಡ ಬಳಿಕವೇ ಸರಕಾರ ದಿಡ್ಡಿ ಬಾಗಿಲನ್ನು ಹಾಕಿತು. ಸರಕಾರದ ಬೇಜವಾಬ್ದಾರಿಯಿಂದಲೇ ದೇಶ ಎರಡು ತಿಂಗಳು ಅನಿವಾರ್ಯವಾಗಿ ಲಾಕ್‌ಡೌನ್ ಶಿಕ್ಷೆಯನ್ನು ಅನುಭವಿಸಿತು. ಒಂದೆಡೆ ಕೊರೋನ ಕುರಿತ ಆತಂಕ, ಇನ್ನೊಂದೆಡೆ ಆರ್ಥಿಕತೆಯ ಸರ್ವನಾಶ, ಮಗದೊಂದೆಡೆ ಕಾರ್ಮಿಕರ ಮಾರಣ ಹೋಮ ಇವೆಲ್ಲವನ್ನು ಮುಚ್ಚಿಹಾಕುವುದಕ್ಕಾಗಿ ಸರಕಾರ ಕೊರೋನವನ್ನು ಒಂದು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟಲು ಯತ್ನಿಸಿತು. ಅದರಲ್ಲಿ ಭಾಗಶಃ ಯಶಸ್ವಿಯಾಯಿತು ಕೂಡ. ಲಾಕ್‌ಡೌನ್ ಘೋಷಣೆಯಾಗುವ ಮೊದಲೇ, ಸರಕಾರದ ಅನುಮತಿಯಿಂದಲೇ ನಡೆದ ‘ತಬ್ಬೀಗಿ ಸಮಾವೇಶ’ದಿಂದ ಈ ದೇಶದಲ್ಲಿ ಕೊರೋನ ಹರಡಿತು ಎನ್ನುವುದನ್ನು ಮಾಧ್ಯಮಗಳು ಹರಡತೊಡಗಿದವು. ‘ತಬ್ಬೀಗಿ ಕೊರೋನ’ ಎಂಬ ತಲೆಬರಹಗಳ ಮೂಲಕ, ಕೊರೋನದ ಹೆಸರಲ್ಲಿ ಸಮಾಜವನ್ನು ಒಡೆಯಲು ಗರಿಷ್ಠ ಪ್ರಯತ್ನ ನಡೆದವು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕೊರೋನವನ್ನು ನಿಯಂತ್ರಿಸಲು ಅಲ್ಲಿನ ಸರಕಾರಗಳು ವಿಫಲವಾದಾಗ, ಅಲ್ಲಿನ ಮುಖ್ಯಮಂತ್ರಿಗಳು ಬಹಿರಂಗವಾಗಿಯೇ ‘ಕೊರೋನ ಹರಡಲು ತಬ್ಲೀಗಿಗಳು ಕಾರಣ’ ಎಂದರು. ಮುಸ್ಲಿಂ ಸಮುದಾಯಕ್ಕೆ ಸೇರಿದ ಈ ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿ ಪ್ರತಿದಿನ ವರದಿಗಳು ಪ್ರಕಟವಾಗತೊಡಗಿದವು. ಜೊತೆಗೆ ವಿದೇಶಗಳಿಂದ ಬಂದ ನೂರಾರು ತಬ್ಲೀಗಿಗಳ ಮೇಲೆ ಪೊಲೀಸರು ಯಾವ ದಾಖಲೆಗಳೂ ಇಲ್ಲದೆ ಪ್ರಕರಣ ದಾಖಲಿಸಿದರು. ಈ ಮೂಲಕ, ಕೊರೋನ ನಿಯಂತ್ರಣದ ಸರಕಾರಿ ವೈಫಲ್ಯಗಳನ್ನು ಮಾಧ್ಯಮಗಳು ಮುಚ್ಚಿ ಹಾಕುವಲ್ಲಿ ಯಶಸ್ವಿಯಾದವು. ಜೊತೆಗೆ ಸಿಎಎ ಕಾಯ್ದೆಯ ಮೂಲಕ ಜನರ ಮನಸ್ಸಲ್ಲಿ ಒಡಕನ್ನು ಬಿತ್ತಿದ್ದ ಸರಕಾರ ಕೊರೋನದ ಹೆಸರಲ್ಲಿ ಮತ್ತೊಮ್ಮೆ ಜನರನ್ನು ಒಡೆಯಲು ನೋಡಿತು. ದೇಶದ ಹಲವೆಡೆ ಅಲ್ಪಸಂಖ್ಯಾತ ಸಮುದಾಯದ ಜನರ ಮೇಲೆ ಹಲ್ಲೆಗಳು ನಡೆದವು. ಅವರನ್ನು ಪೂರ್ವಾಗ್ರಹ ಪೀಡಿತವಾಗಿ ನೋಡಲು ತೊಡಗಿದರು. ವ್ಯಾಪಾರಿಗಳನ್ನು ವ್ಯಾಪಾರ ಮಾಡದಂತೆ ರಾಜಕೀಯ ಶಕ್ತಿಗಳು ತಡೆದವು. ‘ಮುಸ್ಲಿಮ್ ವ್ಯಾಪಾರಿಗಳಿಗೆ ಪ್ರವೇಶವಿಲ್ಲ’ ಎಂಬ ಬ್ಯಾನರ್‌ಗಳನ್ನು ಸಾರ್ವಜನಿಕವಾಗಿ ಹಾಕತೊಡಗಿದರು. ಹೀಗೆ, ಭಾರತದಲ್ಲಿ ಕೊರೋನ ಉಳಿದೆಲ್ಲ ದೇಶಗಳಿಗಿಂತ ಹೆಚ್ಚು ವಿಷಕಾರಿಯಾಯಿತು. ವಿದೇಶಗಳಲ್ಲಿ ಕೊರೋನ ‘ಶ್ವಾಸಕೋಶ’ಕ್ಕಷ್ಟೇ ಹಾನಿ ಮಾಡಿದರೆ, ಭಾರತದಲ್ಲಿ ಇದು ಜನರ ಮೆದುಳಿಗೇ ಹಾನಿ ಮಾಡುವಂತೆ ಕೊರೋನವನ್ನು ಕೋಮು ವೈರಸ್ ಜೊತೆಗೆ ಕಸಿ ಮಾಡಿ ವಿತರಿಸಲಾಯಿತು. ಆದರೆ ಇದೀಗ ಭಾರತದ ಕೊರೋನದ ಹಿಂದಿರುವ ಸತ್ಯಗಳು ಒಂದೊಂದಾಗಿ ಬಹಿರಂಗವಾಗತೊಡಗಿವೆ.

ಕೊರೋನ ವೈರಸ್ ಎಲ್ಲ ರಾಜಕೀಯ ಮತ್ತು ಮಾಧ್ಯಮಗಳ ಪಿತೂರಿಗಳನ್ನು ಮೀರಿ, ಎಲ್ಲರನ್ನೂ ಸಮಾನವಾಗಿ ನೋಡಿತು. ಅದು ಕಾಂಗ್ರೆಸ್-ಬಿಜೆಪಿ ಎನ್ನುವ ವ್ಯತ್ಯಾಸವನ್ನೂ ಮಾಡಲಿಲ್ಲ. ಯಡಿಯೂರಪ್ಪರಿಗೆ ಪಾಸಿಟಿವ್ ಆದ ಎರಡು ದಿನಗಳಲ್ಲಿ ಸಿದ್ದರಾಮಯ್ಯರೂ ಪಾಸಿಟಿವ್ ಆಗಿ ಗುರುತಿಸಿಕೊಂಡರು. ಯಾವುದೇ ತಬ್ಲೀಗಿ ಸಮಾವೇಶದಲ್ಲಿ ಭಾಗವಹಿಸದ ಗೃಹ ಸಚಿವ ಅಮಿತ್ ಶಾ ಕೂಡ ಪಾಸಿಟಿವ್ ಆದರು. ಗುರುದ್ವಾರದಲ್ಲಿ ಕಾಣಿಸಿಕೊಂಡ ಕೊರೋನ, ತಿರುಪತಿಯಲ್ಲೂ ಕಾಣಿಸಿಕೊಂಡಿತು. ಎಲ್ಲಕ್ಕಿಂತ ಮುಖ್ಯವಾಗಿ, ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಅಲ್ಲೂ ಹಾಜರಿದ್ದು ನೆರೆದವರನ್ನು ಆಶೀರ್ವದಿಸಿತು. ಪ್ರಣಬ್ ಮುಖರ್ಜಿ, ಎಸ್.ಪಿ. ಬಾಲಸುಬ್ರಹ್ಮಣ್ಯಂರಂತಹ ಹಿರಿಯರಲ್ಲೂ ಅದು ತಾರತಮ್ಯವನ್ನು ಪ್ರದರ್ಶಿಸಲಿಲ್ಲ. ಮಾಧ್ಯಮಗಳ ‘ತಬ್ಲೀಗಿ ಕೊರೋನ’ವನ್ನು ಅಳಿಸಿ ‘ಈ ದೇಶದ ಜಾತ್ಯತೀತತೆಯ ಹಿರಿಮೆ’ಯನ್ನು ಕೊರೋನ ಎತ್ತಿ ಹಿಡಿಯಿತು. ರೋಗಕ್ಕೆ ಜಾತಿ, ಧರ್ಮವಿಲ್ಲ ಮತ್ತು ರೋಗದ ಹೆಸರಿನಿಂದ ಯಾವ ಕಾರಣಕ್ಕೂ ರಾಜಕೀಯ ಮಾಡಬಾರದು ಎನ್ನುವ ಬಹುದೊಡ್ಡ ಪಾಠವನ್ನು ಕೊರೋನ ಈ ದೇಶಕ್ಕೆ ಕಲಿಸಿತು. ಇದೀಗ ನ್ಯಾಯಾಲಯವೂ ಈ ವಿಷಯದಲ್ಲಿ ಎಚ್ಚೆತ್ತುಕೊಂಡಿದೆ. ಸರಕಾರ ಮತ್ತು ಮಾಧ್ಯಮಗಳ ಸಂಚಿನ ಫಲವಾಗಿ ನಿಝಾಮುದ್ದೀನ್ ಮರ್ಕಝ್ ಸಮಾವೇಶದಲ್ಲಿ ಭಾಗವಹಿಸಿದ ಹಲವಾರು ವಿದೇಶೀಯರ ವಿರುದ್ಧದ ಪ್ರಕರಣಗಳನ್ನು ಮುಂಬೈ ಹೈಕೋರ್ಟ್ ರದ್ದುಗೊಳಿಸಿದೆ. ಸರಕಾರ ಇದರಲ್ಲಿ ಶಾಮೀಲಾಗಿರುವ ಬಗ್ಗೆಯೂ ಹೈಕೋರ್ಟ್ ಖೇದ ವ್ಯಕ್ತಪಡಿಸಿದೆ. ‘‘ಸಾಂಕ್ರಾಮಿಕ ಪಿಡುಗು ಅಥವಾ ವಿಪತ್ತುಗಳು ಉಂಟಾದಾಗ ಸರಕಾರವು ಬಲಿಪಶುಗಳನ್ನು ಹುಡುಕಲು ಪ್ರಯತ್ನಿಸುತ್ತದೆ ಮತ್ತು ಈ ವಿದೇಶೀಯರನ್ನು ಬಲಿಪಶುಗಳನ್ನಾಗಿ ಮಾಡಲು ಆಯ್ಕೆ ಮಾಡಿಕೊಂಡಿರುವ ಸಂಭವನೀಯತೆಯಿದೆ’’ ಎಂದು ಹೈಕೋರ್ಟ್ ಪ್ರಕರಣಗಳನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಹೇಳಿದೆ. ಅಷ್ಟೇ ಅಲ್ಲ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಜನರ ಕುರಿತಂತೆ ಸಮಾಜದಲ್ಲಿ ಅಸಹನೆ ಹುಟ್ಟಿಸುವುದಕ್ಕೂ ಕೊರೋನವನ್ನು ಸರಕಾರ ಬಳಸಿಕೊಂಡಿದೆ ಎಂದು ಹೈಕೋರ್ಟ್ ಹೇಳಿದೆ. ತಬ್ಲೀಗಿಗಳ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ‘‘ಪೊಲೀಸರು ಯಾಂತ್ರಿಕವಾಗಿ ಕಾರ್ಯ ನಿರ್ವಹಿಸಿದ್ದರು. ರಾಜಕೀಯ ಅನಿವಾರ್ಯಗಳಡಿ ಕ್ರಮವನ್ನು ಕೈಗೊಂಡಿದ್ದಂತೆ ಕಂಡು ಬರುತ್ತದೆ. ಪೊಲೀಸರು ಮೇಲ್ನೋಟಕ್ಕೆ ಆರೋಪಗಳನ್ನು ಸಾಬೀತು ಪಡಿಸುವ ಯಾವುದೇ ದಾಖಲೆಗಳಿಲ್ಲದಿದ್ದರೂ ಆರೋಪ ಪಟ್ಟಿ ಸಲ್ಲಿಸಿದ್ದಾರೆ’’ ಎಂದು ತರಾಟೆಗೆ ತೆಗೆದುಕೊಂಡಿದೆ. ವಿಪರ್ಯಾಸವೆಂದರೆ ಬಂಧಿತ ತಬ್ಬೀಗಿಗಳ ಮೇಲೆ ‘ಮತಾಂತರದ ಆರೋಪಗಳನ್ನೂ ಹೊರಿಸಲಾಗಿತ್ತು. ಆದರೆ ಕೋರ್ಟ್ ಇದನ್ನೂ ಸ್ಪಷ್ಟವಾಗಿ ನಿರಾಕರಿಸಿದೆ. ಪೊಲೀಸರ ಜೊತೆ ಜೊತೆಗೇ ಮಾಧ್ಯಮಗಳೂ ತಬ್ಲೀಗಿಗಳನ್ನು ಬಲಿಪಶು ಮಾಡುವ ಸಂಚಿನಲ್ಲಿ ಭಾಗವಹಿಸಿರುವುದನ್ನು ಹೈಕೋರ್ಟ್ ಉಲ್ಲೇಖಿಸಿದೆ. ‘‘ಈ ವಿದೇಶೀಯರ ವಿರುದ್ಧ ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ದೊಡ್ಡ ಅಪಪ್ರಚಾರ ನಡೆದಿದೆ. ಭಾರತದಲ್ಲಿ ಕೊರೋನ ಹರಡಲು ಇವರೇ ಕಾರಣ ಎನ್ನುವ ಚಿತ್ರಣವನ್ನು ಈ ಮಾಧ್ಯಮಗಳು ಪ್ರಸಾರ ಮಾಡಿವೆ’’ ಎಂದು ಹೈಕೋರ್ಟ್ ಖೇದ ವ್ಯಕ್ತಪಡಿಸಿದೆ.

ಹೈಕೋರ್ಟ್‌ನ ಈ ಸ್ಪಷ್ಟ ಮಾತುಗಳು ಈ ದೇಶದಲ್ಲಿ ಕೊರೋನ ವೈರಸ್‌ಗಳಿಗಿಂತಲೂ ಭೀಕರವಾದ ಇನ್ನಿತರ ವೈರಸ್‌ಗಳನ್ನು ಪರಿಚಯ ಮಾಡಿದೆ. ಹೈಕೋರ್ಟ್ ತೀರ್ಪು ತನ್ಮೂಲಕ ಆ ವೈರಸ್ ಸೋಂಕಿತರಿಗೆ ಔಷಧಿ ನೀಡಿದೆೆ. ಆದರೆ, ಈ ಲಸಿಕೆಯಿಂದ ವೈರಸ್ ನಾಶವಾಗುವ ಯಾವ ಸಾಧ್ಯತೆಗಳೂ ಸದ್ಯಕ್ಕೆ ಕಾಣುತ್ತಿಲ್ಲ. ಕನಿಷ್ಠ ಈ ವೈರಸ್‌ನ್ನು ಗುರುತಿಸುವುದಕ್ಕಾದರೂ ಹೈಕೋರ್ಟ್‌ಗೆ ಸಾಧ್ಯವಾಯಿತಲ್ಲ ಎನ್ನುವುದೇ ಸದ್ಯಕ್ಕೆ ದೇಶಕ್ಕಿರುವ ಸಮಾಧಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News