ಕೋವಿಡ್-19: ವೈದ್ಯರ ಜೀವ ಅಪಾಯದಲ್ಲಿ

Update: 2020-08-27 04:55 GMT

ದಿನದಿಂದ ದಿನಕ್ಕೆ ಕೊರೋನ ಸೋಂಕು ವ್ಯಾಪಿಸುತ್ತಲೇ ಇದೆ. ಹೆಚ್ಚುತ್ತಿರುವ ಕಾಯಿಲೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡುವುದೇ ದೊಡ್ಡ ಸಮಸ್ಯೆಯಾಗಿದೆ. ಇನ್ನೊಂದೆಡೆ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಿ ಸೋಂಕಿಗೊಳಗಾದವರನ್ನು ಪತ್ತೆ ಹಚ್ಚಬೇಕೆಂದು ಸರಕಾರ ಒತ್ತಡ ಹೇರುತ್ತಲಿದೆ. ಈ ಒತ್ತಡವನ್ನು ತಡೆಯಲಾಗದೆ ನಂಜನಗೂಡಿನ ವೈದ್ಯರೊಬ್ಬರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ವೈದ್ಯರ ಕುಟುಂಬದವರಿಗೆ ಸರಕಾರ ಪರಿಹಾರ ನೀಡಿ ಕೈ ತೊಳೆದುಕೊಂಡಿತು. ಆದರೆ ವೈದ್ಯಕೀಯ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಸೋಂಕು ಕಂಡು ಬರುತ್ತಿರುವ ಸ್ಥಳಗಳಲ್ಲಿ ಹತ್ತು ಪಟ್ಟು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಬೇಕೆಂಬುದು ಸರಕಾರ ನೀಡಿರುವ ಟಾರ್ಗೆಟ್. ಆದರೆ ಈ ಗುರಿ ತಲುಪಲು ಅಗತ್ಯದ ಸಿಬ್ಬಂದಿ ಮತ್ತು ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

  ದೇಶದಲ್ಲಿ ಜಾಗತೀಕರಣ ಮತ್ತು ಖಾಸಗೀಕರಣದ ಶಕೆ ಆರಂಭವಾದ ನಂತರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಸರಕಾರಿ ದವಾಖಾನೆಗಳನ್ನು ಸುಸಜ್ಜಿತಗೊಳಿಸುವ ಕಾರ್ಯಕ್ಕೆ ಸರಕಾರ ಆದ್ಯತೆ ನೀಡಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಹೀಗಾಗಿ ಸರಕಾರಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಯ ಮೇಲೆ ತೀವ್ರವಾದ ಕೆಲಸದ ಒತ್ತಡ ಬಿದ್ದಿದೆ. ಕೋವಿಡ್ ಚಿಕಿತ್ಸೆ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿಗೆ ಅದರಲ್ಲೂ ವೈದ್ಯರನ್ನು ಕನಿಷ್ಠ ಎರಡು ವಾರಗಳ ಕಾಲ ಐಸೋಲೇಶನ್‌ಗಾಗಿ ಕಳಿಸಬೇಕು. ಆದರೆ ಸಿಬ್ಬಂದಿ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ರಾಜ್ಯದ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಶೇಕಡಾ ಐವತ್ತರಷ್ಟು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಇರುವುದು ಸರಕಾರಕ್ಕೆ ಗೊತ್ತಿದೆ. ಬಹುತೇಕ ಸರಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ದಿನದ 24 ತಾಸು ಮೈಯೆಲ್ಲ ಕಣ್ಣಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಚಿಕಿತ್ಸೆಯಲ್ಲಿ ಲೋಪ ಕಂಡುಬಂದರೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹೊಣೆ ಹೊರಬೇಕಾಗುತ್ತದೆ. ಹೀಗಾಗಿ ಕೊರೋನ ಸೋಂಕು ಕಂಡುಬಂದ ನಂತರ ಈ ವೈದ್ಯಕೀಯ ಸಿಬ್ಬಂದಿಗೆ ಖಾಸಗಿ ಬದುಕೆಂಬುದೇ ಇಲ್ಲದಂತಾಗಿದೆ. ಎಷ್ಟೋ ಜನ ಕಳೆದ ಆರು ತಿಂಗಳಿಂದ ಒಂದೇ ಒಂದು ದಿನ ರಜೆಯನ್ನು ಪಡೆದಿಲ್ಲ. ಸಾರ್ವಜನಿಕ ರಜೆ ಹಾಗೂ ಹಬ್ಬದ ಸಂದರ್ಭಗಳಲ್ಲೂ ಮನೆಗೆ ಹೋಗಿಲ್ಲ. ಬಹುತೇಕ ವೈದ್ಯರು ಕೊರೋನ ಭಯದಿಂದಾಗಿ ಕುಟುಂಬದಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕೊರೋನ ಹಬ್ಬುತ್ತಿರುವಾಗಲೂ ಖಾಲಿ ಇರುವ ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಥಾನಗಳನ್ನು ತುಂಬದಿರುವುದು ಸರಕಾರದ ಗಂಭೀರ ಲೋಪವಾಗಿದೆ.

ಕೊರೋನ ನಿಯಂತ್ರಣ ಮಾಡುವ ಸರಕಾರದ ಆದ್ಯತೆಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಖಾಲಿ ಬಿದ್ದಿರುವ ಸ್ಥಾನಗಳನ್ನು ಭರ್ತಿ ಮಾಡದೆ ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಒತ್ತಡ ಹೇರುವುದು, ರಜೆ ನೀಡದೇ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ದುಡಿಸಿಕೊಳ್ಳುವುದು, 50 ವರ್ಷ ಮೇಲ್ಪಟ್ಟವರನ್ನು ಕೋವಿಡ್ ವಾರ್ಡ್‌ಗಳಿಗೆ ಕೆಲಸಕ್ಕೆ ನಿಯೋಜಿಸುವುದು ಸರಿಯಲ್ಲ. ವೈದ್ಯರ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಖಟ್ಲೆ ಹಾಕುವ ಹಾಗೂ ಜೈಲಿಗೆ ಕಳಿಸುವ ಬೆದರಿಕೆಯನ್ನು ಕೆಲ ಉನ್ನತ ಸರಕಾರಿ ಅಧಿಕಾರಿಗಳು ಹಾಕುತ್ತಿದ್ದಾರೆಂಬ ದೂರುಗಳು ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದು ನಿಜವೇ ಆಗಿದ್ದರೆ ಖಂಡಿತ ಸರಿಯಲ್ಲ. ಇಂತಹ ಆಘಾತಕಾರಿ ವರ್ತನೆಗೆ ಸರಕಾರ ಕಡಿವಾಣ ಹಾಕಬೇಕು.

 ಕೊರೋನ ಸೋಂಕಿಗೊಳಗಾದ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಶಿಕ್ಷಕರನ್ನು ಸರಕಾರ ಅತ್ಯಂತ ಅಮಾನವೀಯವಾಗಿ ದುಡಿಸಿಕೊಳ್ಳುತ್ತಿದೆ. ಈ ಸಿಬ್ಬಂದಿಗೆ ವಾರಕ್ಕೊಮ್ಮೆಯಾದರೂ ಅಗತ್ಯದ ರಜೆ ನೀಡಬೇಕು. ಸಕಾಲದಲ್ಲಿ ಸಂಬಳ, ಭತ್ತೆಗಳನ್ನು ನೀಡಬೇಕು. ಬೆದರಿಕೆ ಹಾಕಿ ಹಗಲೂ ರಾತ್ರಿ ಕೆಲಸ ಮಾಡಿಸಿಕೊಳ್ಳುವ ಬದಲಾಗಿ ಅವರಿಗೆ ಸೂಕ್ತ ಸವಲತ್ತುಗಳನ್ನು ನೀಡಿ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸೇವೆಯನ್ನು ಪಡೆಯುವುದು ಸೂಕ್ತ.

ಇದರೊಂದಿಗೆ ಇನ್ನೊಂದು ಮುಖ್ಯವಾದ ಅಂಶವೆಂದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಈಗಲಾದರೂ ಬಲಪಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆಯನ್ನು ನಡೆಸಬೇಕಾಗಿದೆ.

ನಮ್ಮ ಸರಕಾರಗಳ ಖಾಸಗೀಕರಣ ಪರವಾದ ನೀತಿ ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಅಡ್ಡಿಯಾಗಿದೆ. ಆದರೆ ಕೊರೋನ ಪೀಡೆ ಉಲ್ಬಣವಾಗುತ್ತಿರುವ ಈ ಸಮಯದಲ್ಲಾದರೂ ಸರಕಾರ ಜನಸಾಮಾನ್ಯರ ಹಿತದೃಷ್ಟಿಯಿಂದ ತನ್ನ ಧೋರಣೆಯನ್ನು ಬದಲಿಸಬೇಕಾಗಿದೆ. ಆರೋಗ್ಯ, ಶಿಕ್ಷಣ ಮತ್ತು ನೀರಾವರಿ ಕ್ಷೇತ್ರಗಳು ಎಂದಿಗೂ ಖಾಸಗಿ ವಲಯಕ್ಕೆ ಹೋಗಬಾರದು. ಇವೆಲ್ಲ ಸರಕಾರದ ಒಡೆತನದಲ್ಲಿದ್ದರೆ ಸೂಕ್ತ ಎಂಬುದು ಕೊರೋನ ನಂತರದ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. ದೇಶದಲ್ಲಿ ಒಂದು ವೇಳೆ ಸರಕಾರಿ ಆಸ್ಪತ್ರೆಗಳು ಇರದಿದ್ದರೆ ಈ ಕೊರೋನ ಕಾಲದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿರುತ್ತಿತ್ತು. ಬ್ರಿಟನ್‌ನಂತಹ ದೇಶಗಳಲ್ಲೂ ಸರಕಾರದ ಒಡೆತನದ ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗಿದೆ. ಖಾಸಗಿ ವಲಯದ ಗುರಿ ಕೇವಲ ಲಾಭಗಳಿಕೆಯಷ್ಟೇ ಆಗಿದೆ, ಆದರೆ ಸರಕಾರಿ ಆಸ್ಪತ್ರೆಗಳು ಹಾಗಲ್ಲ. ಅವು ಲಾಭ, ನಷ್ಟದ ಗೊಡವೆಗೆ ಹೋಗದೆ ಜನರಿಗೆ ಸೂಕ್ತವಾದ ಸೇವೆಯನ್ನು ನೀಡಬೇಕಾಗುತ್ತದೆ. ಇದನ್ನು ಸರಕಾರ ಹಾಗೂ ಜನತೆ ಮನಗಾಣಬೇಕಾಗಿದೆ.ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಂಕಲ್ಪ ತೊಡಬೇಕಾಗಿದೆ. ಇದು ಶಿಕ್ಷಣ ಕ್ಷೇತ್ರಕ್ಕೂ ಅನ್ವಯ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಮಾತ್ರವಲ್ಲ ಆಕ್ಸಿಜನ್ ಟ್ಯಾಂಕ್ ಕೊರತೆಯಿದೆ ಎಂದು ಎಲ್ಲೆಡೆಯಿಂದ ದೂರುಗಳು ಬರುತ್ತಿವೆ. ಸರಕಾರ ಇತ್ತ ಗಮನ ಹರಿಸಬೇಕು. ಸೆಪ್ಟಂಬರ್ ತಿಂಗಳಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸುವ ಸೂಚನೆಗಳಿರುವುದರಿಂದ ಸರಕಾರ ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News