ಐಸ್‍ ಕ್ರೀಂಗೆ ಹೆಚ್ಚುವರಿ 10 ರೂ. ಪಡೆದ ರೆಸ್ಟೋರೆಂಟ್‍ ಗೆ 2 ಲಕ್ಷ ರೂ. ದಂಡ

Update: 2020-08-27 07:48 GMT

ಮುಂಬೈ: ಆರು ವರ್ಷಗಳ ಹಿಂದೆ ಫ್ಯಾಮಿಲಿ ಪ್ಯಾಕ್ ಐಸ್‍ ಕ್ರೀಂಗೆ ಗ್ರಾಹಕರೊಬ್ಬರಿಂದ ದರಕ್ಕಿಂತ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದ ಮುಂಬೈ ಸೆಂಟ್ರಲ್‍ ನ ಶಗುನ್ ವೆಜ್ ರೆಸ್ಟೋರೆಂಟ್‍ ಗೆ ಜಿಲ್ಲಾ ಗ್ರಾಹಕ ವೇದಿಕೆ 2 ಲಕ್ಷ ರೂ. ದಂಡ ವಿಧಿಸಿದೆ ಹಾಗೂ ಗ್ರಾಹಕನಿಗೆ ಪರಿಹಾರ ನೀಡುವಂತೆ ಸೂಚಿಸಿದೆ.

ರೆಸ್ಟೋರೆಂಟ್‍ ಗಳು ಮತ್ತು ಅಂಗಡಿಗಳು ಹೆಚ್ಚುವರಿ ದರ ವಿಧಿಸಿ ಗ್ರಾಹಕರನ್ನು ಸುಲಿಗೆ ಮಾಡದಂತೆ ಇಂತಹ ಕ್ರಮ ಅಗತ್ಯ ಎಂದು  ಗ್ರಾಹಕ ವೇದಿಕೆ ಹೇಳಿದೆ. ರೆಸ್ಟೋರೆಂಟ್‍  ಎಂಆರ್‍ಪಿ ರೂ 165 ಬದಲು ಗ್ರಾಹಕನಿಂದ ರೂ 175 ಪಡೆದಿತ್ತು.

ಪೊಲೀಸ್ ಸಬ್-ಇನ್‍ಸ್ಪೆಕ್ಟರ್ ಭಾಸ್ಕರ್ ಜಾಧವ್ ಎಂಬವರು ದೂರುದಾರರಾಗಿದ್ದಾರೆ. ಅವರು 2015ರಲ್ಲಿ ದಕ್ಷಿಣ ಮುಂಬೈ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಜೂನ್ 8, 2014ರಂದು ಡಿಬಿ ಮಾರ್ಗ್ ಪೊಲೀಸ್ ಠಾಣೆಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಮನೆಯಲ್ಲಿದ್ದ ಅತಿಥಿಗಳಿಗೆಂದು ಐಸ್ ಕ್ರೀಂ ಖರೀದಿಸಲು ರೆಸ್ಟೋರೆಂಟ್‍ ಗೆ ಹೋಗಿದ್ದಾಗಿ ಹಾಗೂ ತಮಗೆ ಒಂದರ ಬೆಲೆಗೆ ಎರಡು ಫ್ಯಾಮಿಲಿ ಪ್ಯಾಕ್ ದೊರೆತಿದ್ದರೂ ದರ ಹಾಗೂ ಹೆಚ್ಚುವರಿ ಬಿಲ್ ನೋಡಿ ಆಘಾತವಾಯಿತು ಎಂದು ದೂರಿನಲ್ಲಿ ಹೇಳಿದ್ದರು.

 ಈ ಕುರಿತು ರೆಸ್ಟೋರೆಂಟ್‍ ಬಳಿ ವಿಚಾರಿಸಿದ್ದರೂ ಐಸ್ ಕ್ರೀಂ ತೆಗೆದಿಡಲು ವೆಚ್ಚ ತಗಲುತ್ತದೆ ಹಾಗು ಅಂಗಡಿ ಮತ್ತು ರೆಸ್ಟೋರೆಂಟ್‍ ನಡುವೆ ವ್ಯತ್ಯಾಸವಿದೆ ಎಂದು ಹೇಳಿತ್ತು. ಆದರೆ ಜಾಧವ್ ತಾವು ಹೋಟೆಲ್‍ನ ಬೇರೆ ಯಾವುದೇ ಸೇವೆ ಪಡೆದಿಲ್ಲ, ಅಲ್ಲಿ ಕುಳಿತುಕೊಂಡಿಲ್ಲ ಯಾ ಅಲ್ಲಿನ ವಸ್ತು ಬಳಸಿಲ್ಲ ಕೌಂಟರ್‍ನಿಂದಲೇ ಐಸ್ ಕ್ರೀಂ ತೆಗೆದುಕೊಂಡು ಹೋಗಿದ್ದಾಗಿ ಹೇಳಿದ್ದರು.

ಇವುಗಳನ್ನೆಲ್ಲಾ ಪರಿಶೀಲಿಸಿದ ಗ್ರಾಹಕ ವೇದಿಕೆ ಹೆಚ್ಚುವರಿ ದರ ವಿಧಿಸಿದ್ದು ಸರಿಯಲ್ಲ ಎಂದು ರೆಸ್ಟೋರೆಂಟ್‍ ಗೆ ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News