ಇನ್ನೊಂದು ಬಿಜೆಪಿಯ ಅಗತ್ಯ ದೇಶಕ್ಕಿದೆಯೇ?

Update: 2020-08-28 05:00 GMT

ಕಾಂಗ್ರೆಸ್ ಎನ್ನುವ ಪಿತ್ರಾರ್ಜಿತ ಗೋಮಾಳ ಬರಡಾಗುತ್ತಿದ್ದಂತೆಯೇ, ಹಿರಿಯ ಗೋವುಗಳೆಲ್ಲ ‘ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ಗೋಳಾಡತೊಡಗಿವೆ. ಹಲವು ಹಿರಿಯ ಗೋವುಗಳು ಈಗಾಗಲೇ ಹೊಸ ಗೋಮಾಳವನ್ನು ಹುಡುಕಿಕೊಂಡು ಪಕ್ಷ ತ್ಯಜಿಸಿದ್ದರೆ, ಸಂಪೂರ್ಣ ಬೇಡಿಕೆ ಕಳೆದುಕೊಂಡು ಇನ್ನೂ ಕಾಂಗ್ರೆಸ್‌ನೊಳಗೇ ಇರುವ ಒಂದಿಷ್ಟು ಗೋವುಗಳು ಅಳಿದುಳಿದ ಹುಲ್ಲುಗಾವಲಿನಲ್ಲಿ ನಮ್ಮನ್ನು ಮೇಯುವುದಕ್ಕೆ ಬಿಡುತ್ತಿಲ್ಲ ಎಂದು ಬಂಡೆದ್ದಿವೆ. ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಕೆಲವು ಕಾಂಗ್ರೆಸ್‌ನ ಹಿರಿಯ ನಾಯಕರ ಬಂಡಾಯವನ್ನು ಮೇಲಿನಂತಲ್ಲದೆ, ಇನ್ನಾವ ರೀತಿಯಲ್ಲೂ ಬಣ್ಣಿಸುವುದಕ್ಕೆ ಅಸಾಧ್ಯ. ತಮ್ಮ ರಾಜಕೀಯದುದ್ದಕ್ಕೂ ‘ಗಾಂಧಿ ಕುಟುಂಬದ ಹೆಸರಲ್ಲೇ’ ರಾಜಕೀಯ ನಡೆಸಿ, ಆ ಹೆಸರನ್ನು ಗರಿಷ್ಠಮಟ್ಟದಲ್ಲಿ ಬಳಸಿ, ಪಕ್ಷದ ಬೆಳವಣಿಗೆಗೆ ತಮ್ಮ ಪಾಲಿನ ಯಾವ ಕೊಡುಗೆಗಳನ್ನು ನೀಡದ ನಾಯಕರು, ಇದೀಗ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದು ‘ಹಿರಿಯರು-ಕಿರಿಯವರು’ ಎಂದು ಪಕ್ಷವನ್ನು ಒಡೆಯಲು ಮುಂದಾಗಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗರಿಷ್ಠ ಫಲವನ್ನು ಅನುಭವಿಸಿದ ಈ ಹಿರಿಯರು, ಕಾಂಗ್ರೆಸನ್ನು ಬೆಳೆಸುವುದಕ್ಕೆ ನೀಡಿದ ಕೊಡುಗೆಗಳೇನು ಎಂದು ಅವಲೋಕಿಸಿದರೆ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಕಾರಣಗಳನ್ನು ಹುಡುಕಬಹುದು.

ಕಾಂಗ್ರೆಸ್‌ನಲ್ಲಿದ್ದುಕೊಂಡು, ಮಗದೊಂದೆಡೆ ಸಂಘಪರಿವಾರ ದೇಶಾದ್ಯಂತ ಹುಲುಸಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟ ಈ ಹಿರಿಯರು, ಅತ್ತ ಕಾಂಗ್ರೆಸ್‌ನಲ್ಲಿ ಯುವ ನಾಯಕರು ಬೆಳೆಯದಂತೆ, ಹೊಸ ಆಲೋಚನೆಗಳು ಹುಟ್ಟದಂತೆ ನೋಡಿಕೊಳ್ಳುತ್ತಾ ಬಂದರು. ಹೈಕಮಾಂಡನ್ನು ಸಂಪೂರ್ಣ ಕತ್ತಲೆಯಲ್ಲಿಟ್ಟು, ಹೊಸ ಪ್ರಬುದ್ಧ ನಾಯಕರು ಬೆಳೆಯುತ್ತಿದ್ದಂತೆಯೇ ಅವರನ್ನು ಚಿವುಟುತ್ತಾ ಪಕ್ಷಕ್ಕಿಂತ ತಮ್ಮ ಅಸ್ತಿತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿರುವ ಈ ಹಿರಿಯರ ದೆಸೆಯಿಂದಲೇ ಕಾಂಗ್ರೆಸ್ ಮುಳುಗುವ ಹಂತದಲ್ಲಿದೆ. ಹಿರಿಯರ ಭಾರವನ್ನು ತಾಳಲಾರದೆ ಈಗಾಗಲೇ ಅರ್ಧ ಮುಳುಗಿರುವ ಹಡಗಿನ ಚುಕ್ಕಾಣಿ ಯಾರ ಕೈಯಲ್ಲಿದ್ದರೇನು? ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವೆನ್ನುವುದು ಒಂದು ಶಿಲುಬೆ. ಆದುದರಿಂದಲೇ ಅದನ್ನು ಏರುವುದಕ್ಕೆ ಯಾರೂ ಮುಂದಾಗುತ್ತಿಲ್ಲ. ಈಗಾಗಲೇ ಒಂದು ಬಾರಿ ಈ ಶಿಲುಬೆಯನ್ನು ಏರಿರುವ ರಾಹುಲ್‌ಗಾಂಧಿಗೆ ಇದು ಸ್ಪಷ್ಟವಿದೆ. ಸೋನಿಯಾಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಒಪ್ಪಿದ್ದಾರೆ. ಆದರೆ ಆರು ತಿಂಗಳ ಬಳಿಕ ಕಾಂಗ್ರೆಸ್‌ನ ಭವಿಷ್ಯವೇನು? ರಾಹುಲ್‌ಗಾಂಧಿಯನ್ನು ಹೊರತು ಪಡಿಸಿ ಕಾಂಗ್ರೆಸನ್ನು ಮುನ್ನಡೆಸುವ ಶಕ್ತಿಯನ್ನು ಇನ್ನಿತರ ನಾಯಕರು ಹೊಂದಿದ್ದಾರೆಯೇ? ಸದ್ಯಕ್ಕೆ ಗಾಂಧಿ ಕುಟುಂಬ ಈ ಹಿಂದಿನ ವರ್ಚಸ್ಸನ್ನು ಸಂಪೂರ್ಣ ಕಳೆದುಕೊಂಡಿದೆ. ಇಂದಿರಾಗಾಂಧಿಯ ಮೊಮ್ಮಕ್ಕಳು ಎಂದು ಮತ ಹಾಕುವ ದಿನಗಳು ಇಂದು ದೇಶದಲ್ಲಿಲ್ಲ.

ಇದೇ ಸಂದರ್ಭದಲ್ಲಿ ಮೋದಿಯ ಸುಳ್ಳುಗಳ ಅಬ್ಬರಗಳ ಮುಂದೆ, ರಾಹುಲ್‌ಗಾಂಧಿಯ ಸಣ್ಣ ಧ್ವನಿ ಯಾರಿಗೂ ಕೇಳಿಸುತ್ತಿಲ್ಲ. ಪಕ್ಷವನ್ನು ಸಂಪೂರ್ಣವಾಗಿ ಪುನರ್‌ರಚಿಸದೇ ಇದ್ದರೆ ಕಾಂಗ್ರೆಸ್‌ಗೆ ಉಳಿಗಾಲವೇ ಇಲ್ಲ. ಇಂತಹ ಪ್ರಯತ್ನವೇನಾದರೂ ನಡೆದರೆ ಪಕ್ಷ ಮತ್ತೊಮ್ಮೆ ಹೋಳಾಗುತ್ತದೆ. ಒಂದಿಷ್ಟು ಹಿರಿಯರು ಪಕ್ಷದಿಂದ ಹೊರ ನಡೆಯುವ ಸಾಧ್ಯತೆಗಳಿವೆ. ಮುಳುಗುವ ಹಡಗಿನ ಒಡೆಯನಾಗಿರುವುದಕ್ಕಿಂತ, ತೇಲುವ ತೆಪ್ಪವನ್ನೇರುವುದು ಜಾಣತನ. ರಾಹುಲ್ ಗಾಂಧಿಗೆ ನಿಜಕ್ಕೂ ಪಕ್ಷಕ್ಕೆ ಜೀವ ಕೊಡುವ ಉದ್ದೇಶವೇನಾದರೂ ಇದ್ದರೆ, ತೇಲುವ ತೆಪ್ಪವನ್ನೇ ಆರಿಸಿಕೊಳ್ಳುವುದು ಉತ್ತಮ. ಅಂದರೆ ಎಲ್ಲವನ್ನು ಮತ್ತೆ ಆರಂಭದಿಂದಲೇ ಶುರು ಹಚ್ಚಿಕೊಳ್ಳಬೇಕು. ಆದರೆ ಅದಕ್ಕೆ ಬೇಕಾದ ನೈತಿಕ ಶಕ್ತಿ ರಾಹುಲ್‌ಗಾಂಧಿಯ ಬಳಿ ಇದೆ ಎಂದು ಅನ್ನಿಸುವುದಿಲ್ಲ. ಸದ್ಯದ ಸಂದರ್ಭದಲ್ಲಿ ಕಾಂಗ್ರೆಸ್‌ನ ಅತಿ ದೊಡ್ಡ ಸಮಸ್ಯೆ ‘ನಾಯಕತ್ವ’ವಲ್ಲ. ತನ್ನ ರಾಜಕೀಯ ನಿಲುವುಗಳ ಕುರಿತಂತೆಯೇ ಅದು ಅಸ್ಪಷ್ಟತೆಯನ್ನು ಹೊಂದಿದೆ ಮತ್ತು ಗೊಂದಲದಲ್ಲಿದೆ. ಹಿಂದಿನ ಕಾಂಗ್ರೆಸ್ ಆಗಿ ಬಿಜೆಪಿಯನ್ನು ಎದುರಿಸಬೇಕೋ ಅಥವಾ ತಾನೂ ಹಿಂದುತ್ವದ ವೇಷ ಧರಿಸಿ ಬಿಜೆಪಿಯನ್ನು ಎದುರಿಸಬೇಕೋ ಎನ್ನುವ ಕುರಿತಂತೆ ಕಾಂಗ್ರೆಸ್‌ನೊಳಗೆ ಗೊಂದಲಗಳಿವೆ.

ಆರೆಸ್ಸೆಸ್ ಈ ಹಿಂದೆಯೇ ಕಾಂಗ್ರೆಸ್‌ನೊಳಗೆ ತೂರಿ ಬಿಟ್ಟ ನಾಯಕರು ಅಲ್ಲಿ ಮೃದು ಹಿಂದುತ್ವವನ್ನು ಜಾರಿಯಲ್ಲಿರಿಸಿದ್ದರು ಮಾತ್ರವಲ್ಲ, ಸುಮಾರು 70 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿರುವ ಸಂದರ್ಭದಲ್ಲಿ ಆರೆಸ್ಸೆಸ್‌ನ್ನು ವಿಸ್ತರಿಸುವುದಕ್ಕೆ, ಬೆಳೆಸುವುದಕ್ಕೆ ಪರೋಕ್ಷ ಸಹಕಾರವನ್ನು ನೀಡಿದ್ದರು. ಇಂದು ದೇಶದ ರಾಜಕೀಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ‘ಹಿಂದುತ್ವ ಶಕ್ತಿ’ ಭಾಗಶಃ ಯಶಸ್ವಿಯಾಗಿದೆ. ಆದುದರಿಂದಲೇ, ಕಾಂಗ್ರೆಸ್ ಆ ಹಿಂದುತ್ವದ ಪಾಲುದಾರನಾಗುವ ಬಗೆಯನ್ನು ಯೋಚಿಸುತ್ತಿದೆಯೇ ಹೊರತು, ದುರ್ಬಲಗೊಂಡ ಜಾತ್ಯತೀತ ವೌಲ್ಯಗಳನ್ನು ಸಬಲಗೊಳಿಸುವುದರ ಕಡೆಗೆ ಯೋಚಿಸುತ್ತಿಲ್ಲ. ಸುಮಾರು 70 ವರ್ಷ ಅಧಿಕಾರ ತನ್ನ ಕೈಯಲ್ಲೇ ಇದ್ದರೂ, ಸಂವಿಧಾನಗಳ ಆಶಯ ಹೇಗೆ ದುರ್ಬಲಗೊಳ್ಳುತ್ತಾ ಬಂತು ಮತ್ತು ಆರೆಸ್ಸೆಸ್ ಯಾವ ದಾರಿಯ ಮೂಲಕ ಬೆಳೆಯುತ್ತಾ ಹೋಯಿತು ಎನ್ನುವ ಕುರಿತು ಆತ್ಮವಿಮರ್ಶೆ ಮಾಡುವ ಇಚ್ಛೆಯೂ ಕಾಂಗ್ರೆಸ್‌ಗೆ ಇದ್ದಂತಿಲ್ಲ.

ಆಗಸ್ಟ್ ಮೊದಲ ವಾರ ರಾಮಮಂದಿರಕ್ಕೆ ಚಾಲನೆ ದೊರಕುತ್ತಿದ್ದಂತೆಯೇ ಕಾಂಗ್ರೆಸ್ ಯಾವ ಮುಜುಗರವೂ ಇಲ್ಲದೆ, ಅದರ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಂಡಿತು ಮತ್ತು ರಾಮಮಂದಿರ ನಿರ್ಮಾಣದಲ್ಲಿ ರಾಜೀವ್‌ಗಾಂಧಿಯ ಪಾತ್ರವನ್ನು ಎತ್ತಿ ಹಿಡಿಯಿತು. ಈ ಮೂಲಕ ‘ಬಾಬರಿ ಮಸೀದಿ ಧ್ವಂಸ’ದ ಹೆಗ್ಗಳಿಕೆಯನ್ನು ಸಂಪೂರ್ಣ ತನ್ನದಾಗಿಸಿಕೊಂಡಿತು. ರಾಮಮಂದಿರ ನಿರ್ಮಾಣವಾಗುತ್ತಿರುವುದು ಬಿಜೆಪಿಯ ಕಾರಣದಿಂದಲ್ಲ, ನ್ಯಾಯಾಲಯ ತೀರ್ಪು ನೀಡಿರುವ ಕಾರಣದಿಂದ ಎಂದು, ರಾಮಮಂದಿರದ ರಾಜಕೀಯ ಲಾಭವನ್ನು ಬಿಜೆಪಿ ತನ್ನದಾಗಿಸಿಕೊಳ್ಳದಂತೆ ನೋಡಿಕೊಳ್ಳಲು ವಿಫಲ ಪ್ರಯತ್ನ ಮಾಡಿತು. ರಾಮಮಂದಿರ ನಿರ್ಮಾಣದ ಕುರಿತಂತೆ ನ್ಯಾಯಾಲಯದ ತೀರ್ಪು ಗೊಂದಲಗಳಿಂದ ಕೂಡಿದೆ ಎನ್ನುವುದನ್ನು ಹಲವು ಸಂವಿಧಾನ ತಜ್ಞರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಒಂದೆಡೆ ಬಾಬರೀ ಮಸೀದಿ ಧ್ವಂಸವನ್ನು ಕ್ರಿಮಿನಲ್ ಅಪರಾಧ ಎಂದು ಹೇಳುವ ನ್ಯಾಯಾಲಯ, ಅದೇ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಅವಕಾಶ ನೀಡಿತು. ಬಾಬರಿ ಮಸೀದಿ ಧ್ವಂಸದ ಕಾರಣದಿಂದಲೇ ಅಲ್ಲಿ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಯಿತು ಎನ್ನುವುದನ್ನು ನ್ಯಾಯಾಲಯ ಮರೆಯಿತು. ಈ ತೀರ್ಪಿನ ಹಿಂದೆ ರಾಜಕೀಯ ಒತ್ತಡಗಳಿವೆ ಎನ್ನುವ ಆರೋಪಗಳು ಈಗಾಗಲೇ ವ್ಯಾಪಕವಾಗಿ ಕೇಳಿ ಬಂದಿವೆೆ. ಸ್ವತಃ ಕಾಂಗ್ರೆಸ್ ನಾಯಕರಿಗೂ ಇದು ಗೊತ್ತಿದೆ. ಇಷ್ಟಿದ್ದೂ ರಾಮಮಂದಿರದ ಜೊತೆಗೆ ಅದು ಗುರುತಿಸಿಕೊಂಡಿದೆ ಎಂದರೆ, ಕಾಂಗ್ರೆಸ್ ನಿಧಾನಕ್ಕೆ ಮಾನಸಿಕವಾಗಿ ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತಿದೆ ಎಂದೇ ಅರ್ಥ.

ರಫೇಲ್ ಹಗರಣದ ವಿರುದ್ಧ ದೊಡ್ಡ ಗದ್ದಲ ಎಬ್ಬಿಸಿರುವುದೇ ಕಾಂಗ್ರೆಸ್. ಆದರೆ ರಫೇಲ್ ವಿಮಾನ ಭಾರತಕ್ಕಿಳಿದೊಡನೆಯೇ ಮಾಧ್ಯಮಗಳ ಮೋದಿ ವೈಭವೀಕರಣದ ಲಾಭವನ್ನು ತನ್ನದಾಗಿಸಲು ‘ರಫೇಲ್ ಭಾರತಕ್ಕೆ ಬರಲು ಕಾಂಗ್ರೆಸ್ ಕಾರಣ’ ಎಂದು ಬಿಟ್ಟಿತು. ರಫೇಲ್ ಒಪ್ಪಂದ ಯುಪಿಎ ಕಾಲದಲ್ಲಿ ನಡೆದಿರುವುದು ನಿಜ. ಆದರೆ ಆಗ ಆ ಒಪ್ಪಂದದಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಭಾಗಿಯಾಗಿತ್ತು. ಬಿಜೆಪಿ ಅದನ್ನು ರಿಲಯನ್ಸ್‌ಗೆ ನೀಡುವ ಮೂಲಕ ಅದನ್ನು ಬೃಹತ್ ಹಗರಣವನ್ನಾಗಿಸಿತು. ಈಗ ರಫೇಲ್ ಭಾರತಕ್ಕೆ ಕಾಲಿಟ್ಟಿದೆಯಾದರೂ, ಆ ಹಗರಣದಿಂದ ಅದಕ್ಕೆ ಸಂಪೂರ್ಣ ಕ್ಲೀನ್‌ಚಿಟ್ ಸಿಕ್ಕಿಲ್ಲ. ಇದನ್ನು ಬಳಸಿಕೊಂಡು ಬಿಜೆಪಿಯನ್ನು ಹಣಿಯಬೇಕಾಗಿದ್ದ ಕಾಂಗ್ರೆಸ್, ಭಾರತಕ್ಕೆ ಬಂದಿಳಿದ ರಫೇಲ್ ವಿಮಾನದ ಹೆಗ್ಗಳಿಕೆಯನ್ನು ತನ್ನದಾಗಿಸಲು ಹೊರಟಿದೆ. ದಲಿತರು, ಹಿಂದುಳಿದವರ್ಗ, ಅಲ್ಪಸಂಖ್ಯಾತರನ್ನೇ ತನ್ನ ಶಕ್ತಿಯಾಗಿಸಿಕೊಂಡು ಬಂದಿದ್ದ ಕಾಂಗ್ರೆಸ್ ಇಂದು ಅವರನ್ನೆಲ್ಲ ಕಳೆದುಕೊಂಡ ಕಾರಣದಿಂದಲೇ ‘ಹಿಂದುತ್ವ’ದ ಕಡೆಗೆ ಕಣ್ಣು ಮಿಟುಕಿಸುತ್ತಿದೆ. ತನ್ನ ಸಿದ್ಧಾಂತ, ರಾಜಕೀಯ ನಿಲುವುಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳದ ಕಾಂಗ್ರೆಸ್‌ನ ಚುಕ್ಕಾಣಿಯನ್ನು ಯಾರು ವಹಿಸಿಕೊಂಡರೂ ಅದನ್ನು ಉಳಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ದೇಶಕ್ಕೆ ಒಂದು ಬಿಜೆಪಿಯನ್ನೇ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಕಾಂಗ್ರೆಸ್ ವೇಷದಲ್ಲಿರುವ ಇನ್ನೊಂದು ಬಿಜೆಪಿಯ ಅಗತ್ಯ ದೇಶಕ್ಕಿದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News