ಶುಭಾಶಯ ಸಾಕೇ - ಸಂಭ್ರಮ ಮತ್ತು ಸವಾಲುಗಳ ಸನ್ನಿವೇಶದಲ್ಲಿ?

Update: 2020-08-29 04:25 GMT

ಇಂದು ನಿಮ್ಮ ‘ವಾರ್ತಾಭಾರತಿ’ಯು ಮಾಧ್ಯಮ ರಂಗದಲ್ಲಿನ ತನ್ನ ಪ್ರಯಾಣದಲ್ಲಿ 18ನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ. ಇದು, ವಾರ್ತಾಭಾರತಿ ಬಳಗ ಮತ್ತು ನಿತ್ಯ ಈ ಪತ್ರಿಕೆಯನ್ನು ಓದುವ,ನಮ್ಮ ವಿಶಾಲ ಓದುಗ ಸಮುದಾಯದವರೆಲ್ಲ ಅಭಿಮಾನಪಟ್ಟು ಸಂಭ್ರಮಿಸುವ ಸಂದರ್ಭವೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ನಮ್ಮ ದೃಷ್ಟಿಯಿಂದ ಇದು ಕೇವಲ ಸಂಭ್ರಮದ ಸಂದರ್ಭವಲ್ಲ. ನಾವು ಮುಂದೆ ಕ್ರಮಿಸಬೇಕಾಗಿರುವ ಹಾದಿ ಎಷ್ಟು ದುರ್ಗಮ ಎಂಬುದನ್ನು ಊಹಿಸಿದಾಗ, ಈಗಾಗಲೇ ಹಾದು ಬಂದ ದೂರದ ಬಗೆಗಿನ ನಮ್ಮ ನೆಮ್ಮದಿ ಮತ್ತು ಸಂತಸವೆಲ್ಲ ಕರಗಿ ಹೋಗುತ್ತಿದೆ. ನಾಳಿನ ಕುರಿತಾದ ನಮ್ಮ ಚಿಂತೆ ನಮ್ಮ ವರ್ತಮಾನದ ಸಂಭ್ರಮವನ್ನು ನಮ್ಮ ಕೈಗೆಟುಕದಷ್ಟು ದೂರಗೊಳಿಸಿಬಿಟ್ಟಿದೆ. ಇಂದು ನಮ್ಮ ತಂಡ ಒಂದು ವಿಶಿಷ್ಟ ಸಂದಿಗ್ಧತೆಯಲ್ಲಿದೆ. ನಾಳಿನ ಸಂಭಾವ್ಯ ಬಿಕ್ಕಟ್ಟುಗಳ ಕುರಿತಾದ ತೀವ್ರ ಆತಂಕ ಹಾಗೂ ಆಶಂಕೆಗಳ ಮಧ್ಯೆ ನಿನ್ನೆ ಹಾಗೂ ಇಂದಿನ ಗೆಲುವನ್ನು ಸಂಭ್ರಮಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಶುಭಹಾರೈಕೆಗಳ ಗದ್ದಲದ ಹಿಂದೆ ಕ್ಷೀಣವಾಗಿಯಾದರೂ ಅಗಲುತ್ತಿರುವ ಆತ್ಮಕ್ಕೆ ಶಾಂತಿ ಕೋರುವ ಧ್ವನಿಗಳು ಕೇಳಿಸುತ್ತಿದ್ದರೆ ಅದು ಕೇವಲ ಸಂಭ್ರಮದ ಸನ್ನಿವೇಶವಾಗಿರಲು ಸಾಧ್ಯವೇ? ಆದ್ದರಿಂದಲೇ ನಮ್ಮ ಮಟ್ಟಿಗೆ ಇದು ಕೇವಲ ಔಪಚಾರಿಕವಾಗಿ ಶುಭಹಾರೈಕೆಗಳನ್ನು ವಿನಿಮಯಿಸಿಕೊಂಡು ಕೈ ತೊಳೆದುಕೊಳ್ಳಬಹುದಾದ ಸಂದರ್ಭವಂತೂ ಖಂಡಿತ ಅಲ್ಲ. ಕಣ್ಣ ಮುಂದೆ ತಾಂಡವವಾಡುತ್ತಿರುವ ಸವಾಲುಗಳನ್ನು ಕಡೆಗಣಿಸದೆ, ಅವುಗಳನ್ನು ಗುರುತಿಸಿ, ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಎದುರಿಸುವುದಕ್ಕೆ ಬೇಕಾದ ತಯಾರಿ ನಡೆಸುವುದು ಇದೀಗ ನಮ್ಮ ಕರ್ತವ್ಯವಾಗಿದೆ. ಈ ಕೆಲಸವನ್ನು ಏಕಪಕ್ಷೀಯವಾಗಿ ಮಾಡಲು ಹೊರಡುವ ಬದಲು ಓದುಗ ಸಮುದಾಯದ ಸಕ್ರಿಯ ಸಹಭಾಗಿತ್ವದೊಂದಿಗೆ ಮಾಡಬೇಕೆಂಬ ಆಶಯದೊಂದಿಗೆ ಪ್ರಸ್ತುತ ಸನ್ನಿವೇಶವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇವೆ.

ಇಂದು ಸಾಮಾನ್ಯವಾಗಿ ಸಮೂಹ ಮಾಧ್ಯಮಗಳ ಮುಂದಿರುವ ಸವಾಲುಗಳ ಕುರಿತಾದ ಎಲ್ಲ ಚರ್ಚೆಗಳು ‘ಕೋವಿಡ್’ ಎಂಬ ಅಜ್ಞಾತ, ನಿಗೂಢ ಶತ್ರುವಿಗೆ ಹಿಡಿಶಾಪ ಹಾಕುವುದರಲ್ಲಿ ಕೊನೆಗೊಳ್ಳುತ್ತಿವೆ. ಆದರೆ ನಿಜವಾಗಿ ಈ ವಿಷಯದಲ್ಲಿ ಕೋವಿಡ್ ಒಂಟಿ ಅಪರಾಧಿಯೇನಲ್ಲ. ಮುದ್ರಣ ಮಾಧ್ಯಮದ ಪಾಲಿನ ಮರಣ ಮೃದಂಗ ಕೆಲವು ದಶಕಗಳ ಹಿಂದೆಯೇ ಮೊಳಗಿದೆ. 21ನೇ ಶತಮಾನವಂತೂ ಮುದ್ರಣ ಮಾಧ್ಯಮದ ಪಾಲಿಗೆ ‘ಕಡ್ಡಾಯ ನಿವೃತ್ತಿ’ಯ ನೋಟಿಸ್ ಹೊತ್ತುಕೊಂಡೇ ಬಂದಿತ್ತು. ಹೊಸ ಶತಮಾನ ಅನಾವರಣಗೊಂಡಂತೆಯೇ, ಬಹಳ ಸುಸ್ಥಿರವಾಗಿವೆ ಎಂದು ಜನರು ನಂಬಿದ್ದ ಹಲವು ಮಾಧ್ಯಮ ಸಂಸ್ಥೆಗಳ ಒಳಗುಟ್ಟು ಬಯಲಾಗತೊಡಗಿತು. ಯಾವುದಾದರೂ ಪತ್ರಿಕೆ ಮುಚ್ಚಿಹೋದರೆ ಅದೊಂದು ಬೆಚ್ಚಿಬೀಳಿಸುವ ಸುದ್ದಿಯೇ ಅಲ್ಲ ಎಂಬಂತಹ ಮಾನಸಿಕ ಸಿದ್ಧತೆ ವ್ಯಾಪಕವಾಗಿ ಕಾಣಿಸುವಂತಹ ವಾತಾವರಣ ನಿರ್ಮಾಣವಾಯಿತು. ಪಶ್ಚಿಮದ ದೇಶಗಳಲ್ಲೂ ಹಲವು ಪ್ರಮುಖ, ಜನಪ್ರಿಯ ಪತ್ರಿಕೆಗಳು ಮುಚ್ಚಿಹೋಗುವುದು ಮಾಮೂಲಿಯಾಗಿ ಬಿಟ್ಟಿತು. ನಮ್ಮ ದೇಶದಲ್ಲಿ, ಭಾರೀ ಬಂಡವಾಳದೊಂದಿಗೆ ಆರಂಭವಾದ ಮತ್ತು ಲಕ್ಷಾಂತರ ಓದುಗರಿದ್ದ ಹಲವು ಪತ್ರಿಕೆಗಳು ಕಳೆದೆರಡು ವರ್ಷಗಳಲ್ಲಿ ಉರುಳಿಬಿದ್ದಿವೆ.ಹಲವು ದೊಡ್ಡ ಪತ್ರಿಕೆಗಳು ತಮ್ಮ ಅನೇಕ ಆವೃತ್ತಿಗಳನ್ನು ಮುಚ್ಚಿ ಕೆಲವನ್ನು ಮಾತ್ರ ಉಳಿಸಿಕೊಂಡಿವೆ. ಹೆಚ್ಚಿನೆಲ್ಲ ದೊಡ್ಡ ಪತ್ರಿಕೆಗಳು ತಮ್ಮ ಸಿಬ್ಬಂದಿಯ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿವೆ. ಇಲ್ಲಿ ಕೋವಿಡ್, ನಡೆಯಲಾಗದೆ ವಾಲುತ್ತಿದ್ದವರ ಬೆನ್ನಿಗೆ ಬಲವಾದ ಒದೆ ನೀಡುವ ಕೆಲಸವನ್ನಷ್ಟೇ ಮಾಡಿದೆ.

ಭಾರತದ ಮುದ್ರಣ ಮಾಧ್ಯಮದ ಸ್ಥಿತಿಗತಿಗಳ ಕುರಿತು, 800 ದಿನಪತ್ರಿಕೆಗಳನ್ನು ಪ್ರತಿನಿಧಿಸುವ ಇಂಡಿಯನ್ ನ್ಯೂಸ್ ಪೇಪರ್‌ಸೊಸೈಟಿ (INS) ಅಧ್ಯಕ್ಷರು ಈ ವರ್ಷ ಮಾರ್ಚ್ ತಿಂಗಳಲ್ಲಿ ಸರಕಾರಕ್ಕೆ ಕೆಲವು ಮಾಹಿತಿಗಳನ್ನೂ ಒದಗಿಸಿದರು.ಅವರ ಪ್ರಕಾರ, ಪ್ರಚಲಿತ ವರ್ಷದ ಮೊದಲ ಎರಡು ತಿಂಗಳಲ್ಲೇ ಮುದ್ರಿತ ಪತ್ರಿಕೆಗಳಿಗೆ 4,500 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸಿದ್ದು, ಜೂನ್ ಅಂತ್ಯದೊಂದಿಗೆ ಈ ನಷ್ಟದ ಪ್ರಮಾಣವು 15,000 ಕೋಟಿ ರೂ. ಮೀರಿರುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುದ್ರಣ ಮಾಧ್ಯಮ ಕ್ಷೇತ್ರವನ್ನು ಅವಲಂಬಿಸಿರುವ 30 ಲಕ್ಷಕ್ಕೂ ಅಧಿಕ ಮಂದಿ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸರಕಾರವು ಅಪಾಯದಂಚಿನಲ್ಲಿರುವ ಇತರ ಉದ್ದಿಮೆಗಳನ್ನು ರಕ್ಷಿಸುವಂತೆ ಪತ್ರಿಕಾರಂಗವನ್ನೂ ರಕ್ಷಿಸುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಐಎನ್‌ಎಸ್ ಅಧ್ಯಕ್ಷರು ಆಗ್ರಹಿಸಿದ್ದರು. ಪತ್ರಿಕೆಗಳಿಗೆ ಕನಿಷ್ಠ ಎರಡು ವರ್ಷ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು. ಸರಕಾರವು ಮುದ್ರಣ ಮಾಧ್ಯಮಗಳಿಗೆ ನೀಡುವ ತನ್ನ ಜಾಹೀರಾತು ಬಜೆಟ್‌ನಲ್ಲಿ 200ಶೇ. ಹೆಚ್ಚಳ ಮಾಡಬೇಕು ಮತ್ತು ಸರಕಾರಿ ಜಾಹೀರಾತುಗಳಿಗೆ ತಾನು ನೀಡುವ ದರವನ್ನು 50 ಶೇ.ದಷ್ಟು ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದ್ದರು.

ಪತ್ರಿಕೆಗಳು ಎದುರಿಸುತ್ತಿರುವ ಬಿಕ್ಕಟ್ಟಿಗೆ, ಜನರು ಹೊಸ ತಂತ್ರಜ್ಞಾನದ ಹಾಗೂ ಹೊಸಬಗೆಯ ಮಾಧ್ಯಮಗಳ ಕಡೆಗೆ ಒಲವು ತೋರುತ್ತಿರುವುದೇ ಕಾರಣ ಎಂಬ ಜನಪ್ರಿಯ ಹಾಗೂ ಸರಳೀಕೃತ ವಿಶ್ಲೇಷಣೆ ತೀರಾ ಪೊಳ್ಳೇನೂ ಅಲ್ಲ. ಆದರೆ ವಿಷಯ ಅಷ್ಟು ಸರಳವೂ ಅಲ್ಲ. ಜನರು ಒಂದು ತಂತ್ರಜ್ಞಾನದಿಂದ ಇನ್ನೊಂದಕ್ಕೆ ವಲಸೆ ಹೋಗುವುದು ಸಹಜ.ಆದರೆ ಇತರೆಲ್ಲ ರಂಗಗಳಂತೆ ಮಾಧ್ಯಮರಂಗದಲ್ಲೂ ವಲಸೆಯ ಈ ಪ್ರಕ್ರಿಯೆ ಹಠಾತ್ತಾಗಿ ನಡೆಯುವುದಿಲ್ಲ.ಹಳೆಯದು ತೀರಾ ಬೇಡ ಎನ್ನುವಷ್ಟು ಮಟ್ಟಿನ ಹೊಸತನ ಬರುವುದಕ್ಕೆ ಹಲವಾರು ದಶಕಗಳು ತಗಲುತ್ತವೆ.ಭಾರತದ ಮಟ್ಟಿಗೆ ತಳಮಟ್ಟದ ವಾಸ್ತವವು, ಹೊಸ ತಂತ್ರಜ್ಞಾನದಿಂದಾಗಿ ಮುದ್ರಿತ ಪತ್ರಿಕೆಗಳ ಯುಗ ಮುಗಿಯಿತು ಎನ್ನುವವರ ಬಾಯಿ ಮುಚ್ಚಿಸುವಂತಿದೆ. ಪ್ರತಿಷ್ಠಿತ ಇಂಡಿಯನ್ ರೀಡರ್‌ಶಿಪ್ ಸರ್ವೇ (IRS) ಪ್ರಕಾರ 2017ರಲ್ಲಿ ದೇಶದಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಯೆ 40.7 ಕೋಟಿ ಇತ್ತು. 2019 ರ ಆರಂಭದ ಹೊತ್ತಿಗೆ ಈ ಸಂಖ್ಯೆ 42.5 ಕೋಟಿಯನ್ನು ತಲುಪಿತು.ಅಂದರೆ 2 ವರ್ಷಗಳಲ್ಲಿ ಪತ್ರಿಕೆ ಓದುವವರ ಸಂಖ್ಯೆಯಲ್ಲಿ 4.4 ಶೇ. ವೃದ್ಧಿಯಾಯಿತು! ಸರಳೀಕೃತ ವಾದಗಳು ನಿಜವಾಗಿದ್ದರೆ ಅಮೆರಿಕದಂತಹ, ತಾಂತ್ರಿಕವಾಗಿ ನಮಗಿಂತ ಸಾಕಷ್ಟು ಮುಂದುವರಿದ ದೇಶದಲ್ಲಿ ಪತ್ರಿಕೆಗಳು ಕಣ್ಮರೆಯಾಗಿರಬೇಕಿತ್ತು. 80ರ ದಶಕಕ್ಕೆ ಹೋಲಿಸಿದರೆ ಅಲ್ಲಿ ಮುದ್ರಿತ ಪತ್ರಿಕೆಗಳನ್ನು ಓದುವವರ ಸಂಖ್ಯೆ ಗಣನೀಯವಾಗಿ ಕುಸಿದಿದ್ದರೂ ಇಂದು ಕೂಡ ಸುಮಾರು 3 ಕೋಟಿ ಮಂದಿ ಅಲ್ಲಿ ನಿತ್ಯ ಪತ್ರಿಕೆಗಳನ್ನು ಓದುತ್ತಾರೆ. ಆದ್ದರಿಂದ ಸಮಸ್ಯೆ ತಂತ್ರಜ್ಞಾನದ ಬದಲು ಬೇರೆಲ್ಲೋ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ನಿಜವಾಗಿ ಪತ್ರಿಕೋದ್ಯಮದ ಇಂದಿನ ಬಿಕ್ಕಟ್ಟಿನ ಬೇರುಗಳು ಕೆಲವು ದಶಕಗಳ ಹಿಂದೆ ಅನುಸರಿಸಲಾದ, ಆದಾಯಕ್ಕಾಗಿ ಜಾಹೀರಾತನ್ನು ಅವಲಂಬಿಸಿ, ಪತ್ರಿಕೆಯನ್ನು ಅದರ ಉತ್ಪಾದನಾ ವೆಚ್ಚಕ್ಕಿಂತ ತೀರಾ ಕಡಿಮೆ ಬೆಲೆಗೆ ಮಾರುವ ಧೋರಣೆಯಲ್ಲಿ ಅಡಗಿವೆ.ಒಂದು ಸರಕನ್ನು ಅದರ ಉತ್ಪಾದನಾ ವೆಚ್ಚಕ್ಕಿಂತ 50ಶೇ., 60 ಶೇ. ಅಥವಾ ಕೆಲವೊಮ್ಮೆ 90 ಶೇ. ಕಡಿಮೆ ದರಕ್ಕೆ ಮಾರುವ, ಜಗತ್ತಿನಲ್ಲಿ ಬೇರಾವುದೇ ಸರಕಿಗೆ ಅನ್ವಯವಾಗದ ಪರಿಪಾಠವನ್ನು ಪತ್ರಿಕೆ ಎಂಬ ಸರಕಿಗೆ ಅನ್ವಯಿಸಲಾಯಿತು. (‘ವಾರ್ತಾಭಾರತಿ’ಯ ಬಗ್ಗೆ ಹೇಳುವುದಾದರೆ, ಅದರ ಉತ್ಪಾದನಾ ವೆಚ್ಚವು ಅದರ ಮುಖಬೆಲೆಗಿಂತ ಮೂರು ಪಟ್ಟು ಅಧಿಕವಿದೆ) ಇದರಿಂದಾಗಿ ಪತ್ರಿಕೆಗಳು ತಮ್ಮ ಅಸ್ತಿತ್ವಕ್ಕಾಗಿ ಓದುಗರ ಬದಲು ಜಾಹೀರಾತುದಾರರನ್ನು ಅವಲಂಬಿಸುವಂತಾಯಿತು. ಪತ್ರಿಕೆಗಳ ಮುಖಬೆಲೆ ಅವುಗಳ ಉತ್ಪಾದನಾ ವೆಚ್ಚಕ್ಕೆ ಸಮೀಪವಿದ್ದಿದ್ದರೆ ಓದುಗರ ಸಂಖ್ಯೆ ಹೆಚ್ಚಿದಂತೆ ಪತ್ರಿಕೆಗಳ ಲಾಭ ಹೆಚ್ಚುತ್ತಿತ್ತು. ಆದರೆ ಹಾಗಾಗಲಿಲ್ಲ. ಪ್ರಸಾರ ಸಂಖ್ಯೆ ಹೆಚ್ಚಿದಂತೆಲ್ಲಾ ನಷ್ಟದ ಪ್ರಮಾಣ ಹೆಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹಲವು ದಶಕಗಳ ಅವಧಿಯಲ್ಲಿ ಓದುಗರು ಪತ್ರಿಕೆ ಎಂಬ ಸರಕನ್ನು ತೀರಾ ಜುಜುಬಿ ಮುಖ ಬೆಲೆಗೆ ಖರೀದಿಸುವ ಅಭ್ಯಾಸಕ್ಕೆ ಒಗ್ಗಿಹೋದರು. ಈಗ ಅವರೊಡನೆ, ಉತ್ಪಾದನಾ ವೆಚ್ಚ ಕೊಟ್ಟು ಪತ್ರಿಕೆ ಖರೀದಿಸಿ ಎಂದು ಹೇಳಿದರೆ ಅವರಿಗೆ ಪತ್ರಿಕೆ ತುಂಬಾ ದುಬಾರಿ ಸರಕಾಗಿ ತೋರುತ್ತದೆ. ಅದೇ ವೇಳೆ, ಓದುಗರಿಗಿಂತ ಹೆಚ್ಚಾಗಿ ಜಾಹೀರಾತುದಾರರು ಹೊಸ ಪೀಳಿಗೆಯ ಗ್ರಾಹಕರನ್ನರಸಿ ತಾಂತ್ರಿಕ ವಲಸೆ ನಡೆಸಿದ್ದಾರೆ. ಅವರು ಪತ್ರಿಕೆಗಳ ಬದಲು ಆನ್‌ಲೈನ್ ಮಾಧ್ಯಮಗಳತ್ತ ಒಲವು ತೋರಿದಾಗ ಅದರ ಬಿಸಿ ನೇರವಾಗಿ ಪತ್ರಿಕೆಗಳಿಗೆ ತಟ್ಟಿತು.

ಇನ್ನೊಂದು ಗಮನಾರ್ಹ ಅಂಶವೇನೆಂದರೆ, ಪತ್ರಿಕೆಗಳು ಮತ್ತು ತಂತ್ರಜ್ಞಾನ ಇವೆರಡೂ ಪರಸ್ಪರ ವಿರುದ್ಧ ದಿಕ್ಕುಗಳಲ್ಲೇನೂ ಚಲಿಸಿಲ್ಲ. ಎಲ್ಲ ಪತ್ರಿಕೆಗಳು ತಂತ್ರಜ್ಞಾನದ ವಿಷಯದಲ್ಲಿ ಓದುಗರಿಗಿಂತ ಹಿಂದೆ ಉಳಿದಿಲ್ಲ. ಹೆಚ್ಚಿನ ಪತ್ರಿಕೆಗಳು ತಮ್ಮ ಆನ್‌ಲೈನ್ ಆವೃತ್ತಿಗಳನ್ನು ಆರಂಭಿಸಿವೆ. ಹೊಸ ಸುದ್ದಿಗಾಗಿ 24 ಗಂಟೆ ಕಾಯಬೇಕಾಗಿದ್ದ ಅನಿವಾರ್ಯತೆಯನ್ನು ಇಲ್ಲವಾಗಿಸಿ ಕೆಲವೇ ನಿಮಿಷಗಳ ಅಂತರದಲ್ಲಿ ಹೊಸ ಸುದ್ದಿ ಹಾಗೂ ಬರಹಗಳನ್ನು ಓದುಗರಿಗೆ ಒದಗಿಸುವ ಏರ್ಪಾಟು ಮಾಡಿವೆ. ‘ವಾರ್ತಾಭಾರತಿ’ಯ ಓದುಗರಲ್ಲಿ ಬಹುತೇಕ 80ಶೇ. ಮಂದಿ ಇದೀಗ ಆನ್‌ಲೈನ್ ಮೂಲಕ ಪತ್ರಿಕೆಯನ್ನು ಓದುತ್ತಾರೆ. ಪತ್ರಿಕೆಯ ಬಳಗದ ಜೊತೆ ಅವರ ಸಂವಹನ ಕೂಡ ಆನ್‌ಲೈನ್ ಮೂಲಕವೇ ನಡೆಯುತ್ತದೆ. ನೂರಕ್ಕೂ ಹೆಚ್ಚಿನ ದೇಶಗಳಲ್ಲಿರುವ ಈ ಅಭಿಮಾನಿ ಓದುಗರ ವಿಶಾಲ ಬಳಗವು ತುಸು ಸಂವೇದನಾಶೀಲತೆ ತೋರಿದರೆ ನಮ್ಮ ಹಾಗೂ ಮುಂದಿನ ಮೈಲುಗಲ್ಲಿನ ನಡುವಣ ಅಂತರವನ್ನು ಕುಗ್ಗಿಸಲು ಖಂಡಿತ ಸಾಧ್ಯವಿದೆ. ನಮ್ಮ ಓದುಗ ಮಹನೀಯರು ತಾವು ನೆಚ್ಚಿರುವ ಪತ್ರಿಕೆಯನ್ನು ಕೇವಲ ಮಾಹಿತಿಯ ಇನ್ನೊಂದು ಮೂಲವಾಗಿ ಪರಿಗಣಿಸುವವರಲ್ಲ. ದೇಶದ ಹಿತ, ಸಾಮಾಜಿಕ ಆರೋಗ್ಯ, ವ್ಯವಸ್ಥೆಯ ಸ್ವಾಸ್ಥ, ಸ್ವತಃ ತಮ್ಮ ನಾಗರಿಕ ಅಸ್ತಿತ್ವ, ಘನತೆ, ಗೌರವ ಇತ್ಯಾದಿಗಳೊಂದಿಗೆ ಪತ್ರಿಕೆಗೆ ಇರುವ ನೇರ ಸಂಬಂಧ, ಅದು ಒದಗಿಸುವ ವಿಶ್ವಾಸಾರ್ಹ ಮಾಹಿತಿಗಳ ಔಚಿತ್ಯ, ಸಂಗತ ವಿಚಾರಗಳ ಮಹತ್ವ ಮತ್ತು ವರ್ತಮಾನದ ಸಾಮೂಹಿಕ ಸವಾಲುಗಳ ಹಿನ್ನೆಲೆಯಲ್ಲಿ ಪತ್ರಿಕೆಯು ನಿರ್ವಹಿಸುತ್ತಿರುವ ಪ್ರಬಲ ಪ್ರತಿಪಕ್ಷದ ಪಾತ್ರ ಹಾಗೂ ಅದು ಜನಸಮೂಹಕ್ಕೆ ನಿತ್ಯ ನೀಡುತ್ತಿರುವ ಕೊಡುಗೆಗಳು ಇವೆಲ್ಲವನ್ನೂ ಅವರು ಗುರುತಿಸುತ್ತಾರೆ. ತೀರಾ ಪ್ರತಿಕೂಲ ಸನ್ನಿವೇಶದಲ್ಲೂ ಪತ್ರಿಕೆಯು ತನ್ನ ಸ್ವಾತಂತ್ರವನ್ನು ಉಳಿಸಿಕೊಂಡು ತನ್ನ ಘೋಷಿತ ಧ್ಯೇಯಕ್ಕೆ ಬದ್ಧವಾಗಿ ನಿಂತಿರುವುದರ ಬಗ್ಗೆ ಅವರು ಅಭಿಮಾನ ಪಡುತ್ತಾರೆ. ಹೀಗಿರುವಾಗ ಅವರು ಇಂದಿನ ಸನ್ನಿವೇಶದಲ್ಲಿ ಕೇವಲ ನಿಷ್ಕ್ರಿಯ ಓದುಗರಾಗಿ ಉಳಿಯಲು ಸಾಧ್ಯವೇ ಇಲ್ಲ. ನಮ್ಮ ಹೊಣೆಯನ್ನು ಮತ್ತು ಹೊರೆಯನ್ನು ಅವರು ಖಂಡಿತ ಹಂಚಿಕೊಳ್ಳುತ್ತಾರೆ ಮತ್ತು ಆಮೂಲಕ ಅವರು ಸ್ವತಃ ತಮ್ಮ ಧ್ವನಿಗೆ ಬಲ ಒದಗಿಸುತ್ತಾರೆಂಬ ವಿಶ್ವಾಸ ನಮಗಿದೆ.

ಅಬ್ದುಸ್ಸಲಾಮ್ ಪುತ್ತಿಗೆ, ಪ್ರಧಾನ ಸಂಪಾದಕ, ವಾರ್ತಾಭಾರತಿ ಬಳಗದ ಪರವಾಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News