ಬಾಲಕನ ಅಪಹರಿಸಿ 2 ಕೋಟಿ ರೂ.ಗೆ ಬೇಡಿಕೆ: 16 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು

Update: 2020-08-29 15:54 GMT

ಬೆಂಗಳೂರು, ಆ.29: ಬಟ್ಟೆ ವ್ಯಾಪಾರಿಯೋರ್ವರ ಮಗನನ್ನು ಅಪಹರಿಸಿ 2 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟ ಅಪಹರಣಕಾರರನ್ನು ಕೇವಲ 16 ಗಂಟೆಗಳಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಪೂರ್ವ ವಿಭಾಗದ ಪೊಲೀಸರು ಬಾಲಕನನ್ನು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.

ಶನಿವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಮುಹಮ್ಮದ್ ಝೈನ್‍, ಭಾರತೀನಗರದ ಫಾಹೀಂ, ಮುಝಮ್ಮಿಲ್, ಫೈಝಾನ್, ಶಾಹೀದ್, ಖಲೀಲ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರ ಪೈಕಿ ಪ್ರಮುಖ ಆರೋಪಿ ಮುಹಮ್ಮದ್ ಝೈನ್‍ನನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಆತ ಹಲ್ಲೆ ನಡೆಸಿದ್ದು, ಆಗ ಆತ್ಮರಕ್ಷಣೆಗಾಗಿ ಭಾರತೀನಗರ ಪೊಲೀಸ್ ಇನ್‍ಸ್ಪೆಕ್ಟರ್ ಗುಂಡು ಹಾರಿಸಿದ್ದಾರೆ. ಆರೋಪಿಯ ಬಲಗಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದ ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ತಾಯಿಯ ಮಡಿಲಿಗೆ ಮಗು: ಮೂರು ದಿನಗಳ ಹಿಂದೆಯಷ್ಟೇ ದೂರುದಾರ, ಬಟ್ಟೆ ವ್ಯಾಪಾರಿಯೊಬ್ಬರು ತಮ್ಮ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗಿದ್ದರು. ವಾಪಾಸ್ ಬಂದು ನೋಡಿದಾಗ ಮನೆಯಲ್ಲಿದ್ದ 11 ವರ್ಷದ ಮಗ ಕಾಣೆಯಾಗಿದ್ದ. ತಕ್ಷಣ ಅವರು ಭಾರತಿನಗರ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಮಧ್ಯರಾತ್ರಿ 1 ಗಂಟೆಗೆ ಮಗುವಿನ ತಂದೆಗೆ ಕರೆಯೊಂದು ಬಂದಿದ್ದು, ನಿಮ್ಮ ಮಗನನ್ನು ಅಪಹರಿಸಿದ್ದೇವೆ. 2 ಕೋಟಿ ರೂಪಾಯಿ ನೀಡಿದರೆ ಬಿಡುತ್ತೇವೆ. ಒಂದು ವೇಳೆ ಈ ವಿಷಯವನ್ನು ಪೊಲೀಸರಿಗೆ ಅಥವಾ ಇತರ ಯಾರಿಗಾದರು ತಿಳಿಸಿದರೆ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಪ್ರಕರಣದ ಗಂಭೀರತೆ ಅರಿತ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ, ತಮ್ಮ ನೇತೃತ್ವದಲ್ಲಿ ಮಗು ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಈ ತಂಡ ತಕ್ಷಣ ಕಾರ್ಯಾಚರಣೆಗೆ ಇಳಿದು, ಆರೋಪಿಗಳ ಪತ್ತೆಗಾಗಿ ಪ್ರತ್ಯೇಕವಾಗಿ ಶೋಧ ಕಾರ್ಯ ಆರಂಭಿಸಿತು.

ಒಂದು ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಮತ್ತೊಂದು ತಂಡ ಕಾಲ್ ಡಿಟೈಲ್ಸ್ ಪರಿಶೀಲಿಸಿದರೆ, ಇನ್ನೊಂದು ತಂಡ ಕೃತ್ಯ ನಡೆದ ಸ್ಥಳದಲ್ಲಿ ಮಾಹಿತಿಯನ್ನು ಕಲೆ ಹಾಕುವಲ್ಲಿ ನಿರತವಾಯಿತು. ಮತ್ತೊಂದು ತಂಡ ಆರೋಪಿಗಳ ಪೂರ್ವಾಪರ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿತು.

ಶಿವಾಜಿನಗರದ ನಿವಾಸಿ ಮುಹಮ್ಮದ್ ಝೈನ್(23) ಎಂಬಾತ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದು, ಈತ ಆಗಾಗ ಮಗುವಿನ ತಂದೆಯ ಬಟ್ಟೆ ಅಂಗಡಿಗೆ ಹೋಗುತ್ತಿದ್ದ. ಪ್ರತಿ ದಿನ ಹೋಗಿ ಅಲ್ಲಿ ನಡೆಯುತ್ತಿದ್ದ ವ್ಯಾಪಾರ ವಹಿವಾಟುಗಳನ್ನು ಗಮನಿಸುತ್ತಿದ್ದ. ಮಗುವಿನ ತಂದೆಯ ಬಳಿ ಸಾಕಷ್ಟು ಹಣವಿದೆ ಎಂಬುದನ್ನು ತಿಳಿದುಕೊಂಡು ಆತ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಒಂದು ತಿಂಗಳಿಂದ ಮಾಲಕರ ಪೂರ್ವಾಪರಗಳ ಮಾಹಿತಿ ಕಲೆ ಹಾಕಿದ್ದ ಎಂದು ತಿಳಿದುಬಂದಿದೆ.

ವ್ಯಾಪಾರಿಯ ಎರಡನೇ ಮಗನಾದ 11 ವರ್ಷದ ಅಪ್ರಾಪ್ತ ಬಾಲಕನು ಗಾಳಿ ಪಟ ಹಾರಿಸುವಲ್ಲಿ ಆಸಕ್ತಿಯನ್ನು ಹೊಂದಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಆ.27ರಂದು ರಾತ್ರಿ ಅಪ್ರಾಪ್ತ ಬಾಲಕನಿಗೆ ಗಾಳಿಪಟ ಕೊಡಿಸುವುದಾಗಿ ಆಸೆ ತೋರಿಸಿ ತಮ್ಮೊಂದಿಗೆ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಮಾರ್ಗಮಧ್ಯೆ ಮಗು ಕಿರುಚಿಕೊಳ್ಳಬಹುದು ಎಂಬ ಭಯದಿಂದ ಬಾಲಕನಿಗೆ ತಂಪು ಪಾನಿಯದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ಬಾಲಕನನ್ನು ತುಮಕೂರಿಗೆ ಕರೆದುಕೊಂಡು ಹೋಗಿ ಆರೋಪಿಗಳು ಕಾರಿನಲ್ಲಿ ತುಮಕೂರಿನ ಸುತ್ತಮುತ್ತ ತಿರುಗಾಡಿದ್ದಾರೆ. ಇದೇ ವೇಳೆ ಮಗುವಿನ ತಂದೆಗೆ ಹಲವು ಬಾರಿ ಕರೆ ಮಾಡಿ 2 ಕೋಟಿ ರೂ. ನೀಡುವಂತೆ, ಇಲ್ಲವಾದರೆ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಸಿನಿಮೀಯ ರೀತಿ ಕಾರ್ಯಾಚರಣೆ: ಪೊಲೀಸರ ತಂಡ ಬಾಲಕನ ಪೋಷಕನ ರೀತಿಯಲ್ಲಿ ಆರೋಪಿಗಳಿಗೆ ಹಣಕೊಡುವ ನೆಪದಲ್ಲಿ ತುಮಕೂರಿಗೆ ತೆರಳಿದ್ದು, ಭಾತ್ಮೀದಾರರ ಸಹಾಯದಿಂದ ಮಗುವನ್ನು ಹುಡುಕಾಡುವ ಸಮಯದಲ್ಲಿ ಒಂದು ಕಾರಿನ ಹಿಂಬದಿಯಲ್ಲಿ ಮಗು ಕುಳಿತಿರುವುದನ್ನು ನೋಡಿ ಕಾರು ನಿಲ್ಲಿಸಲು ಹೋಗಿದ್ದು, ಇದರಿಂದ ಎಚ್ಚೆತ್ತುಕೊಂಡ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಬಳಿಕ ಪೊಲೀಸ್ ತಂಡವು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಸುಮಾರು 15 ಕಿ.ಮೀ.ದೂರ ಬೆನ್ನಟ್ಟಿ ತುಮಕೂರಿನ ಗೌತಮನ ಹಳ್ಳಿಯ ಬಳಿಯ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News