ಜಮ್ಮು: ಭಾರತ-ಪಾಕ್ ಗಡಿಭಾಗದಲ್ಲಿ ಸುರಂಗ ಪತ್ತೆ

Update: 2020-08-29 16:32 GMT
Photo: twitter.com/BSF_India

ಶ್ರೀನಗರ, ಆ.29: ಜಮ್ಮುವಿನ ಭಾರತ-ಪಾಕ್ ಅಂತರಾಷ್ಟ್ರೀಯ ಗಡಿಯಲ್ಲಿರುವ ಬೇಲಿಯ ಕೆಳಗಡೆ ತೋಡಲಾಗಿರುವ ಸುರಂಗವನ್ನು ಗಡಿ ಭದ್ರತಾ ಪಡೆ ಪತ್ತೆಹಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಮ್ಮುವಿನ ಸಾಂಬಾ ಪ್ರದೇಶದ ಗಡಿಬೇಲಿಯ ಭಾರತದ ಪ್ರದೇಶದಿಂದ 50 ಮೀಟರ್ ಒಳಗಡೆ ತೆರೆದುಕೊಂಡಿದ್ದ ಸುರಂಗದ ದ್ವಾರದ ಬಳಿ ಮರಳು ತುಂಬಿದ ಪ್ಲಾಸ್ಟಿಕ್ ಚೀಲಗಳೂ ಪತ್ತೆಯಾಗಿದ್ದು ಈ ಚೀಲಗಳ ಮೇಲೆ ಪಾಕಿಸ್ತಾನದ ಕರಾಚಿಯ ಹೆಸರಿದೆ. ಗುರುವಾರ ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭ ಸುರಂಗ ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ನಿರಂತರ ಸುರಿದ ಮಳೆಯಿಂದ ಈ ಪ್ರದೇಶದ ಕೆಲವೆಡೆ ಭೂಮಿ ಹೂತುಹೋಗಿರುವುದನ್ನು ಗಮನಿಸಿ ಶಂಕೆಗೊಂಡು ಪರಿಶೀಲನೆ ನಡೆಸಿದಾಗ ಸುರಂಗ ಮಾರ್ಗ ಪತ್ತೆಯಾಗಿದೆ. ಗಡಿಯಾಚೆಗಿಂದ ಭಾರತದೊಳಗೆ ನುಸುಳಲು ಉಗ್ರರು ಇದನ್ನು ನಿರ್ಮಿಸುತ್ತಿದ್ದ ಸಾಧ್ಯತೆಯಿದೆ. ಸುಮಾರು 20 ಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣ ಹಂತದಲ್ಲಿದೆ. ಪ್ರವೇಶ ದ್ವಾರದಲ್ಲಿ ಭೂಮಿಯಿಂದ 25 ಅಡಿ ಆಳದಲ್ಲಿದೆ. ಈ ಘಟನೆಯ ಬಳಿಕ ಗಡಿ ಭಾಗದಲ್ಲಿ ಗಸ್ತು ಮತ್ತು ಶೋಧ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News