ಮುಹರ್ರಂ ಮೆರವಣಿಗೆ ಚದುರಿಸಲು ಪೆಲೆಟ್ ಗುಂಡು ಪ್ರಯೋಗ: ಹಲವರ ದೃಷ್ಠಿ ನಷ್ಟ

Update: 2020-08-30 15:55 GMT
Photo: thewire.in

ಶ್ರೀನಗರ, ಆ.30: ಶ್ರೀನಗರದ ಹೊರವಲಯದಲ್ಲಿರುವ ಖೊಮೈನಿ ಚೌಕ್‌ನಲ್ಲಿ ನಡೆಯುತ್ತಿದ್ದ ಮುಹರ್ರಂ ಮೆರವಣಿಗೆಯನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಪೆಲೆಟ್ ಗುಂಡು ಪ್ರಯೋಗಿಸಿದ್ದು ಇದರಿಂದ ಹಲವರು ದೃಷ್ಟಿಶಕ್ತಿ ಕಳೆದುಕೊಂಡಿದ್ದಾರೆ ಎಂದು thewire.in ವರದಿ ಮಾಡಿದೆ.

ಪೊಲೀಸರ ಪೆಲೆಟ್ ಗುಂಡು 10ನೇ ತರಗತಿ ವಿದ್ಯಾರ್ಥಿ ತನ್ವೀರ್ ಎಂಬಾತನ ಬಲಗಣ್ಣನ್ನು ಛಿದ್ರಗೊಳಿಸಿದೆ. ಈತನ ಎಡಗಣ್ಣಿನ ದೃಷ್ಟಿಯೂ ನಾಶವಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿರುವುದಾಗಿ ತನ್ವೀರ್‌ನ ತಂದೆ ನಝೀರ್ ಅಹ್ಮದ್ ಆರೋಪಿಸಿದ್ದಾರೆ.

ಇದೀಗ ಶ್ರೀನಗರದ ಮಹಾರಾಜಾ ಹರಿಸಿಂಗ್ ಆಸ್ಪತ್ರೆಗೆ ದಾಖಲಾಗಿರುವ ತನ್ವೀರ್ ಆಲಿಗಢ ಮುಸ್ಲಿಂ ವಿವಿಯಲ್ಲಿ ಉನ್ನತ ಅಧ್ಯಯನ ಪೂರೈಸಬೇಕೆಂಬ ಮಹಾತ್ವಾಕಾಂಕ್ಷೆ ಹೊಂದಿದ್ದ. ಈಗ ತನ್ನೆರಡೂ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ. ಆದರೆ ಈ ಸತ್ಯವನ್ನು ಆತನಿಗೆ ಹೇಳುವ ಸಾಹಸ ಮಾಡಿಲ್ಲ ಎಂದು ಅಹ್ಮದ್ ಅಸಹಾಯಕರಾಗಿ ಹೇಳುತ್ತಾರೆ.

ಮುಹರ್ರಂ ಮೆರವಣಿಗೆ ಶಾಂತರೀತಿಯಲ್ಲಿ ನಡೆಯುತ್ತಿದ್ದಾಗ ಅನವಶ್ಯಕವಾಗಿ ಪೊಲೀಸರು ಬಲಪ್ರಯೋಗಿಸಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆಯೂ ಅವರು ಕರುಣೆ ತೋರಲಿಲ್ಲ. ಆಗ ಮೆರವಣಿಗೆಯಲ್ಲಿದ್ದವರು ದಿಕ್ಕಾಪಾಲಾಗಿ ಓಡಿದರು. ಪೊಲೀಸರು ಹಾರಿಸಿದ ಪೆಲೆಟ್ ಗನ್‌ನಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದ 40ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ತನ್ವೀರ್‌ನ ಮಾವ ಆರೋಪಿಸಿದ್ದಾರೆ.

ಗಾಯಗೊಂಡವರಲ್ಲಿ ಹಲವರಿಗೆ ಮೂಳೆಗೆ ಗಂಭೀರ ಏಟು ಬಿದ್ದಿದ್ದು, ಇವರಿಗೆ ಇಮಾನ್ ಹುಸೇನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಜಾ ಹರಿಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹುಸೇನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ನಝೀರ್ ಚೌಧರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News