ಮಹಿಳೆಯರಿಗೆ ಶೇ.80 ಮೀಸಲಾತಿ ಆರೋಪ: ಕೇಂದ್ರ, ಏಮ್ಸ್‌ಗೆ ಸಿಎಟಿ ನೋಟಿಸ್

Update: 2020-08-30 16:08 GMT

ಹೊಸದಿಲ್ಲಿ,ಆ.30: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಗೆ ನರ್ಸಿಂಗ್ ಅಧಿಕಾರಿಗಳ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.80ರಷ್ಟು ಕೋಟಾವನ್ನು ನಿಗದಿಗೊಳಿಸುವ ಮೂಲಕ ಲಿಂಗಾಧಾರಿತ ತಾರತಮ್ಯವನ್ನು ಎಸಗಲಾಗಿದೆ ಎಂದು ಆರೋಪಿಸಿರುವ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ)ವು ಕೇಂದ್ರ ಸರಕಾರ ಮತ್ತು ಏಮ್ಸ್‌ಗೆ ನೋಟಿಸ್‌ಗಳನ್ನು ಜಾರಿಗೊಳಿಸಿದೆ.

ನರ್ಸಿಂಗ್ ಅಧಿಕಾರಿಗಳ ನೇಮಕಾತಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಎನ್‌ಒಆರ್‌ಸಿಎಟಿ)ಯು ಸೆ.8ರಂದು ನಡೆಯಲಿದೆ.

ಮಹಿಳೆಯರಿಗೆ ಶೇ.80ರಷ್ಟು ಕೋಟಾ ನಿಗದಿಗೊಳಿಸಿರುವುದು ಅತಿಯಾಗಿದೆ ಮತ್ತು ಸಮಾನತೆಗೆ ವಿರುದ್ಧವಾಗಿದೆ ಹಾಗೂ ಅದು ಮೀಸಲಾತಿ ಮತ್ತು ಪ್ರತಿಭೆಗಳ ನಡುವಿನ ಸಮತೋಲನವನ್ನು ಕೆಡಿಸುತ್ತದೆ. ಇದು ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯದ ವಿವಿಧ ತೀರ್ಪುಗಳ ಆಶಯಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಆದರೆ ಅಧ್ಯಕ್ಷ ನ್ಯಾ.ಎಲ್.ನರಸಿಂಹ ರೆಡ್ಡಿ ಮತ್ತು ಸದಸ್ಯ ಪ್ರದೀಪ ಕುಮಾರ ಅವರನ್ನೊಳಗೊಂಡ ಸಿಎಟಿಯ ಪ್ರಧಾನ ಪೀಠವು ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಅರ್ಜಿದಾರರು ಒಳ್ಳೆಯ ಅಂಕಗಳನ್ನು ಗಳಿಸಿದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಸ್ವರೂಪಗಳನ್ನು ಪರಿಶೀಲಿಸಬಹುದು. ಆದರೆ ಅವರು ಪರೀಕ್ಷೆಯಲ್ಲಿ ಯಶಸ್ವಿಯಾಗದಿದ್ದರೆ ವಿಷಯವು ಅಲ್ಲಿಗೇ ಮುಗಿಯುತ್ತದೆ ಎಂದು ಹೇಳಿರುವ ಪೀಠವು,ಮುಂದಿನ ವಿಚಾರಣೆಯನ್ನು ಅ.7ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News