ಜೆಇಇ-ನೀಟ್ ಪರೀಕ್ಷೆಗೇಕೆ ಆತುರ?

Update: 2020-08-31 05:25 GMT

ಭಾರತದ ಪಾಲಿಗೆ ಇದು ಪರೀಕ್ಷೆಗಳ ಕಾಲ. ಒಂದೆಡೆ ಆರ್ಥಿಕ ಹಿಂಜರಿತ, ಬೆನ್ನಿಗೇ ಕೊರೋನ ಸೋಂಕು ಇವೆಲ್ಲದರ ನಡುವೆ, ಅಸಹಾಯಕತೆ ಮತ್ತು ಹತಾಶೆಯ ಅಂಚಿನಲ್ಲಿರುವ ಸರಕಾರ. ಎಲ್ಲ ಪರೀಕ್ಷೆಗಳಲ್ಲೂ ಪದೇ ಪದೇ ಫೇಲಾಗಿ, ಎಲ್ಲವನ್ನೂ ದೇವರ ತಲೆಯ ಮೇಲೆ ಹಾಕಿ ಕೂತಿರುವ ಸರಕಾರ, ಇದೀಗ ಜೆಇಇ-ನೀಟ್ ಪರೀಕ್ಷೆಗಳ ಬಗ್ಗೆ ಮಾತ್ರ ಮೊಂಡು ಹಠವನ್ನು ಹಿಡಿದು ಕೂತಿದೆ. ಸದ್ಯಕ್ಕೆ ದೇಶದ ಭವಿಷ್ಯವೇ ಈ ಪರೀಕ್ಷೆಯ ಮೇಲೆ ನಿಂತಿದೆಯೋ ಎಂಬಂತೆ ದೇಶದ ಯುವಜನತೆಯನ್ನು ಎದುರು ಹಾಕಿಕೊಂಡು ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಹೊರಟಿದೆ. ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಜೆಇಇ-ನೀಟ್ ಸೇರಿದಂತೆ ವೃತ್ತಿಪರ ಶಿಕ್ಷಣಕೋರ್ಸ್‌ಗಳಿಗಾಗಿನ ಪ್ರವೇಶ ಪರೀಕ್ಷೆಗಳನ್ನು ಮುಂದೂಡಬೇಕೆಂದು ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಲವಾಗಿ ಆಗ್ರಹಿಸುತ್ತಿದ್ದಾರೆ. ಆದಾಗ್ಯೂ ಇದ್ಯಾವುದಕ್ಕೂ ಕಿವಿಗೊಡದ ಕೇಂದ್ರ ಸರಕಾರವು ಜೆಇಇ-ನೀಟ್ ಪರೀಕ್ಷೆಗಳನ್ನು ಸೆಪ್ಟಂಬರ್‌ನಲ್ಲಿ ನಡೆಸಲು ದೃಢ ನಿರ್ಧಾರ ಮಾಡಿದೆ. ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿನ ಜೆಇಇ ಹಾಗೂ ವೈದ್ಯಕೀಯ ಪದವಿ ಕೋರ್ಸ್‌ಗಳಿಗಾಗಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಯನ್ನು ಮುಂದೂಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ದೇಶದೆಲ್ಲೆಡೆ ಸಾರ್ವಜನಿಕ ಅಭಿಯಾನವು ಈಗ ಆರಂಭಗೊಂಡಿದ್ದು, ದಿನಗಳೆದಂತೆ ಕಾವು ಪಡೆದುಕೊಳ್ಳುತ್ತಿದೆ.

ಪರೀಕ್ಷೆ ಎನ್ನುವುದೇ ಹಲವು ಒತ್ತಡಗಳಿಗೆ ಕಾರಣವಾಗುವಂತಹದು. ಇಂತಹ ಪರೀಕ್ಷೆಗಳನ್ನು ಇನ್ನಷ್ಟು ಒತ್ತಡಗಳ ನಡುವೆ ನಡೆಸುವುದು ಹಲವು ಅನಾಹುತಗಳನ್ನು ಮೈಮೇಲೆ ಎಳೆದುಕೊಂಡಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೊರೋನ ಕುರಿತಂತೆ ಜನರಲ್ಲಿ ಭಯ ಭೀತಿಯನ್ನು ಹರಡಿ, ಸುಮಾರು ಎರಡು ತಿಂಗಳ ಕಾಲ ಜನರ ಮೇಲೆ ಲಾಕ್‌ಡೌನ್ ಹೇರಿ ಸರ್ವನಾಶಕ್ಕೆ ಕಾರಣವಾಗಿರುವ ಸರಕಾರವೇ ಇದೀಗ ಕೊರೋನವನ್ನು ಹಗುರವಾಗಿ ಸ್ವೀಕರಿಸಿ, ಪರೀಕ್ಷೆ ನಡೆಸಲು ಮುಂದಾಗಿರುವುದು ವಿಪರ್ಯಾಸವಾಗಿದೆ. ಕೊರೋನ ಮಹಾಮಾರಿಯ ಹಾವಳಿಯ ನಡುವೆ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವುದರಿಂದ, ಪರೀಕ್ಷಾರ್ಥಿಗಳ ಆರೋಗ್ಯಕ್ಕೆ ಅಪಾಯವುಂಟಾಗುವ ಸಾಧ್ಯತೆಯ ಬಗ್ಗೆ ಯಾವ ಕಾಳಜಿಯೂ ಇಲ್ಲದಂತೆ ವರ್ತಿಸುತ್ತಿರುವ ಸರಕಾರ, ಅಭ್ಯರ್ಥಿಗಳ ಆತಂಕವನ್ನು ನಿವಾರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನೂರಾರು ವಿದ್ಯಾರ್ಥಿಗಳು ಒಂದೇ ಹಾಲ್‌ನಲ್ಲಿ ಕುಳಿತು ತಾಸುಗಟ್ಟಲೆ ಪರೀಕ್ಷೆ ಬರೆಯಬೇಕಾಗಿರುವುದರಿಂದ ಕೊರೋನ ವೈರಸ್ ಸೋಂಕಿಗೆ ಅವರು ಒಳಗಾಗುವ ಸಂಭವನೀಯತೆ ತುಂಬಾ ಅಧಿಕವಾಗಿರುತ್ತದೆ.ಕೊರೋನ ಹಾವಳಿಯ ವಿರುದ್ಧ ಹೋರಾಡಲು ಸಮರ್ಪಕ ಮೂಲ ಸೌಕರ್ಯಗಳ ಕೊರತೆಯಿಂದ ಹೆಣಗಾಡುತ್ತಿರುವ ಭಾರತದಂತಹ ರಾಷ್ಟ್ರದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಪರೀಕ್ಷೆಗಳನ್ನು ನಡೆಸುವುದೆಂದರೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೊಡ್ಡಿದಂತಾಗುವುದು.ಒಂದು ಅಂದಾಜಿನ ಪ್ರಕಾರ ಹತ್ತಿರ ಹತ್ತಿರ 25 ಲಕ್ಷ ಮಂದಿ ವಿದ್ಯಾರ್ಥಿಗಳು ಜೆಇಇ-ನೀಟ್ ಪರೀಕ್ಷೆ ಬರೆಯಲಿದ್ದಾರೆ. ಅಷ್ಟೇ ಅಲ್ಲ ಈ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಂದರ್ಭ ಸೋಂಕು ತಗಲಿ, ಅವರು ರೋಗಕ್ಕೆ ಸುಲಭವಾಗಿ ತುತ್ತಾಗುವ ಸಾಧ್ಯತೆಯಿದೆ.

ಒಂದು ವೇಳೆ ಅವರಿಗೆ ರೋಗಲಕ್ಷಣಗಳಿಲ್ಲದಿದ್ದರೂ, ಸೋಂಕು ಅವರ ಮೂಲಕ ಮನೆಯಲ್ಲಿರುವ ತಂದೆ, ತಾಯಿ, ತಾತ,ಅಜ್ಜಿಯಂದಿರಿಗೆ ಹರಡಿದಲ್ಲಿ ಉಂಟಾಗುವ ಪರಿಣಾಮ ಊಹಿಸಲೂ ಸಾಧ್ಯವಿಲ್ಲದಷ್ಟು ಭಯಾನಕವಾಗಲಿದೆ. ಕೊರೋನಾ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರ, ಇನ್ನಷ್ಟು ಕೊರೋನಾ ಹೆಚ್ಚಳಕ್ಕೆ ಈ ಮೂಲಕ ದಾರಿ ಮಾಡಿಕೊಟ್ಟಂತಾಗುತ್ತದೆ. ಅಷ್ಟೇ ಅಲ್ಲ ಕೋವಿಡ್-19 ಹಾವಳಿಯ ಬಳಿಕ ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಕೊರತೆಯುಂಟಾಗಿದೆ. ಹೀಗಾಗಿ ಪರೀಕ್ಷಾ ಕೇಂದ್ರಗಳನ್ನು ಸಕಾಲದಲ್ಲಿ ತಲುಪಲು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟಾಗಲಿದೆ. ಇಷ್ಟೇ ಅಲ್ಲದೆ, ಕೊರೋನ ರೋಗಲಕ್ಷಣಗಳನ್ನು ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಐಸೋಲೇಶನ್ ಕೊಠಡಿಗಳ ಏರ್ಪಾಡು ಮಾಡಲಾಗುವ ಸರಕಾರದ ನಿರ್ಧಾರ ಎಷ್ಟರ ಮಟ್ಟಿಗೆ ಕಾರ್ಯಗತಗೊಳ್ಳಲಿದೆ ಎಂಬ ಪ್ರಶ್ನೆ ಕೂಡಾ ಮೂಡುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ಕೊರೋನ ರೋಗಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ಬಲವಂತವಾಗಿ ಅವರ ಮನೆಯ ಹೊರಗಡೆ ಪ್ರಯಾಣಿಸುವಂತೆ ಮಾಡುವುದರಿಂದ ಅವರು ಸೋಂಕಿಗೆ ಒಳಗಾಗುವುದಕ್ಕೆ ಆಹ್ವಾನ ನೀಡಿದಂತಾಗಲಿದೆ. ಇಷ್ಟೆಲ್ಲಾ ಆಪಾಯ, ಆತಂಕಗಳ ನಡುವೆಯೂ ಮೋದಿ ಸರಕಾರವು ಪರೀಕ್ಷೆಯನ್ನು ನಡೆಸುವ ತನ್ನ ನಿರ್ಧಾರಕ್ಕೆ ಅಂಟಿಕೊಂಡು ಬಿಟ್ಟಿದೆ. ಈ ಮಧ್ಯೆ ಸುಪ್ರೀಂಕೋರ್ಟ್ ಕೂಡಾ ಒಂದು ವೇಳೆ ಪರೀಕ್ಷೆ ಮುಂದೂಡಲ್ಪಟ್ಟಲ್ಲಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಒಂದು ವರ್ಷವನ್ನು ಕಳೆದುಕೊಳ್ಳುವರು ಎಂದು ಅಭಿಪ್ರಾಯಿಸುವ ಮೂಲಕ ಸರಕಾರದ ನಿಲುವನ್ನು ಸಮರ್ಥಿಸಿಕೊಂಡಿದೆ.

ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಕಳವಳವನ್ನು ಕಡೆಗಣಿಸಿರುವ ಕೇಂದ್ರ ಸರಕಾರದ ಈಗಿನ ನಡವಳಿಕೆಯು, ಕಳೆದ ಮಾರ್ಚ್‌ನಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಲಾದ ಸಂದರ್ಭದಲ್ಲಿ ಅದು ತಳೆದಿದ್ದ ನಿಲುವಿಗೆ ತೀರಾ ವ್ಯತಿರಿಕ್ತವಾಗಿದೆ.ಕೊರೋನ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯಲು ಮೋದಿ ಸರಕಾರವು ಮಾರ್ಚ್ 24ರಂದು ಜಗತ್ತಿನಲ್ಲೇ ಅತ್ಯಂತ ಕಠಿಣವಾದ ಲಾಕ್‌ಡೌನ್ ಕ್ರಮಗಳನ್ನು ಘೋಷಿಸಿತ್ತು. ಈ ಲಾಕ್‌ಡೌನ್ ಎಷ್ಟು ದುಸ್ತರವಾಗಿತ್ತೆಂದರೆ, ದೇಶದೆಲ್ಲೆಡೆ ಸಾರಿಗೆ ಸಂಚಾರ ಸ್ತಬ್ಧಗೊಂಡಿತ್ತು. ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡರು.ಹಣವಿಲ್ಲದೆ ಹೊಟ್ಟೆಗೆ ಒಂದು ಹೊತ್ತು ಊಟ ಮಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಯಿತು. ಇನ್ನೊಂದೆಡೆ ಆಹಾರ ಸಾಮಗ್ರಿಗಳನ್ನು ಖರೀದಿಸಲೆಂದು ಹೊರಟ ನಾಗರಿಕರನ್ನು ಪೊಲೀಸರು ಲಾಠಿಯೇಟು ನೀಡಿ ಹಿಂದಕ್ಕಟ್ಟಿದರು. ಬೇರೆದಾರಿಕಾಣದೆ ಅನೇಕ ವಲಸಿಗರು ನೂರಾರು ಮೈಲು ದೂರದಲ್ಲಿರುವ ತಮ್ಮ ಹಳ್ಳಿಗಳನ್ನು ಸೇರಲು ಕಾಲ್ನಡಿಗೆಯಲ್ಲಿ ಸಾಗಬೇಕಾಯಿತು. ಪರಿಸ್ಥಿತಿ ಎಷ್ಟು ಗಂಭೀರಮಟ್ಟಿಗೆ ತಲುಪಿತೆಂದರೆ ಲಾಕ್‌ಡೌನ್‌ನಿಂದಾಗಿಯೇ ನೂರಾರು ಮಂದಿ ಪ್ರಾಣ ಕಳೆದುಕೊಂಡರು. ಅನೇಕ ವಲಸೆಕಾರ್ಮಿಕರು ಕಾಲ್ನಡಿಗೆಯಲ್ಲಿ ಊರು ತಲುಪುವ ಧಾವಂತದಲ್ಲಿ ಬಳಲಿಕೆ, ಹಸಿವು ಹಾಗೂ ಅನಾರೋಗ್ಯದಿಂದ ಮೃತಪಟ್ಟರು. ಇನ್ನು ಹಲವರು ಅಪಘಾತಗಳಲ್ಲಿ ಪ್ರಾಣಕಳೆದುಕೊಂಡರು.ಕೊರೋನ ವೈರಸ್ ತಡೆಗೆ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಿ, ಜನಜೀವನವನ್ನು ಸ್ತಬ್ಧಗೊಳಿಸಿದ್ದ ಇದೇ ಕೇಂದ್ರ ಸರಕಾರ, ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಮೊಂಡು ಹಠ ಹಿಡಿದಿರುವುದು ಯಾಕೆ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

ಕೊರೋನ ಹಾವಳಿಯ ನಡುವೆಯೂ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಸಂಸದೀಯ ಕಲಾಪಗಳು ಸಾಂಗವಾಗಿ ನಡೆಯುತ್ತಿವೆ ಹಾಗೂ ಸಂಸದರು ಪಾಲ್ಗೊಳ್ಳುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಸಂಸತ್ ಕಲಾಪಗಳನ್ನು ಆರಂಭಿಸಲು ಹಿಂದೇಟು ಹಾಕಲಾಗುತ್ತಿದೆ. ಕೊರೋನ ಸೋಂಕಿನ ಭೀತಿಯಿಂದಾಗಿ ಕೆಲವೇ ನೂರುಗಳಷ್ಟು ಸಂಖ್ಯೆಯಲ್ಲಿರುವ ಸಂಸದರನ್ನು ಒಟ್ಟುಗೂಡಿಸಿ ಕಲಾಪ ನಡೆಸಲು ಕೇಂದ್ರ ಸರಕಾರ ಹಿಂಜರಿಯುತ್ತಿದೆ. ತನ್ನ ಬಳಿ ಲಭ್ಯವಿರುವ ಇಡೀ ಸಾಂಸ್ಥಿಕ ಬಲವನ್ನು ಬಳಸಿಕೊಂಡು ಸೋಂಕಿನ ಹರಡುವಿಕೆಯಿಂದ ಸಂಸದರಿಗೆ ರಕ್ಷಣೆ ನೀಡಲು ಅದಕ್ಕೆ ಸಾಧ್ಯವಿದೆ. ಆದರೂ ಹಾಗೆ ಮಾಡುತ್ತಿಲ್ಲ. ಇನ್ನು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವ ಜೆಇಇ-ನೀಟ್ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಕೊರೋನದಿಂದ ರಕ್ಷಣೆ ನೀಡಲು ಸರಕಾರಕ್ಕೆ ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಗೆ ಸರಕಾರ ಉತ್ತರಿಸಲೇಬೇಕು. ರಾಜಕಾರಣಿಗಳು ತಮ್ಮ ಆರೋಗ್ಯದ ಕುರಿತಂತೆ ಹೊಂದಿರುವ ಕಾಳಜಿಯನ್ನು ದೇಶದ ಯುವ ಜನತೆಯ ಬಗ್ಗೆಯೂ ಹೊಂದಿರಬೇಕಾಗಿದೆ. ಈ ನಿಟ್ಟಿನಲ್ಲಿ ಯುವಜನರ ಬೇಡಿಕೆಗೆ ಸರಕಾರ ಕಿವಿಯಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News