ರಾಯಣ್ಣನ ಜೊತೆಗೆ ಶಿವಾಜಿಯೂ ಇರಲಿ

Update: 2020-09-01 05:46 GMT

ಇತ್ತೀಚಿನ ದಿನಗಳಲ್ಲಿ ಕನ್ನಡ ಅಸ್ಮಿತೆಗಳ ಮೇಲೆ ಉತ್ತರ ಭಾರತೀಯರ ಅಸ್ಮಿತೆಗಳನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಅದರ ಭಾಗವಾಗಿ ಹಿಂದಿ ಹೇರಿಕೆಯ ಜೊತೆಗೆ, ಉತ್ತರ ಭಾರತದ ನಾಯಕರ ಹೆಸರುಗಳನ್ನು ರಾಜ್ಯದ ರಸ್ತೆಗಳಿಗೆ, ಸೇತುವೆಗಳಿಗೆ ಇಡುವುದಕ್ಕೆ ರಾಜ್ಯ ಸರಕಾರದ ಮೂಲಕ ಕೇಂದ್ರದ ನಾಯಕರು ಮುಂದಾಗಿದ್ದಾರೆ. ಕರ್ನಾಟಕದ ನೆಲದ ಜೊತೆಗೆ ಯಾವೊಂದು ಸಂಬಂಧವೂ ಇಲ್ಲದ, ಆರೆಸ್ಸೆಸ್ ನಾಯಕರ ಹೆಸರುಗಳನ್ನು ಇಡುವ ಪ್ರಯತ್ನವೂ ಈ ಸಂಚಿನ ಭಾಗವೇ ಆಗಿದೆ. ವಿಪರ್ಯಾಸವೆಂದರೆ, ಈ ಸಂಚಿನ ಜೊತೆಗೆ ಕನ್ನಡಿಗರೇ ಆಗಿರುವ ಬಿಜೆಪಿಯ ನಾಯಕರೂ ಶಾಮೀಲಾಗುತ್ತಿರುವುದು. ನಮ್ಮ ನಾಡು ದೇಶಕ್ಕೆ ಮಾತ್ರ ಅಲ್ಲ, ವಿಶ್ವಕ್ಕೇ ಹತ್ತು ಹಲವು ಬೆರಗು ಹುಟ್ಟಿಸುವ ಕೊಡುಗೆಗಳನ್ನು ನೀಡಿದೆ. ಸಮಾನತೆ, ಸಹೋದರತೆಯನ್ನು, ಕಾಯಕ ಹಿರಿಮೆಯನ್ನು ಸಾರುವ ಲಿಂಗಾಯತ ಧರ್ಮ ಹುಟ್ಟಿರುವುದು ಕರ್ನಾಟಕದಲ್ಲಿ. ವಿಶ್ವಕ್ಕೆ ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದ, ಸ್ವಾತಂತ್ರಕ್ಕಾಗಿ ರಣರಂಗದಲ್ಲಿ ಪ್ರಾಣವನ್ನು ತೆತ್ತ ಟಿಪ್ಪುಸುಲ್ತಾನ್ ಹುಟ್ಟಿದ್ದು ಕರ್ನಾಟಕ ರಾಜ್ಯದಲ್ಲಿ. ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂತಹ ಮಹಾ ವೀರರನ್ನು ಕಂಡ ನಾಡು ನಮ್ಮದು. ತನ್ನ ನೆಲದ ಸ್ವಾತಂತ್ರಕ್ಕಾಗಿ ಪತಿಯನ್ನೇ ಧಿಕ್ಕರಿಸಿ ಪೋರ್ಚ್‌ಗೀಸರ ವಿರುದ್ಧ ಹೋರಾಟ ನಡೆಸಿ ಗೆದ್ದ ಅಬ್ಬಕ್ಕ ಹುಟ್ಟಿದ ನೆಲ ನಮ್ಮದು.

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಕರ್ನಾಟಕ ತನ್ನದಾಗಿಸಿಕೊಂಡಿದೆ. ನಾಲ್ಮಡಿ ಕೃಷ್ಣರಾಜ ಅರಸರಂತಹ ಸಮಾನತೆಯ ಕನಸು ಕಂಡ ರಾಜರು ಇಲ್ಲಿ ಆಗಿ ಹೋಗಿದ್ದಾರೆ. ಕುವೆಂಪು, ಬೇಂದ್ರೆಯಂತಹ ಮಹಾನ್ ಕವಿಗಳ ನಾಡಿದು. ಐಟಿ, ಬಿಟಿಯಲ್ಲೂ ಬೆಂಗಳೂರಿನ ಸಾಧನೆ ವಿಶ್ವಮಟ್ಟದಲ್ಲಿ ಬೆರಗು ಹುಟ್ಟಿಸಿದೆ. ಇದಿಷ್ಟೇ ಅಲ್ಲ, ಶಿಕ್ಷಣ, ಆರೋಗ್ಯ ಕ್ಷೇತ್ರವೂ ಸೇರಿದಂತೆ ಸಾಮಾಜಿಕ ಕ್ಷೇತ್ರಗಳಲ್ಲಿ ಕರ್ನಾಟಕ ಉತ್ತರ ಭಾರತಕ್ಕಿಂತ ಗಣನೀಯ ಸಾಧನೆಯನ್ನು ಮಾಡಿದೆ. ಉತ್ತರ ಭಾರತೀಯರಿಗೆ ಮಾದರಿ, ಆದರ್ಶವಾಗಬೇಕಾದ ಹತ್ತು ಹಲವು ಅಂಶಗಳು ಕರ್ನಾಟಕದಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ವಿಮಾನ ನಿಲ್ದಾಣಗಳಿಗೆ, ಮೇಲ್ಸೇತುವೆಗಳಿಗೆ ಹೆಸರಿಡುವ ಸಂದರ್ಭದಲ್ಲಿ ಸರಕಾರಕ್ಕೆ ಇವರಾರು ನೆನಪಿಗೆ ಬರುತ್ತಿಲ್ಲ. ಅಷ್ಟೇ ಅಲ್ಲ, ಕರ್ನಾಟಕದ ಹಲವು ಧೀರ ನಾಯಕರು, ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ನಿರ್ಲಕ್ಷಿಸುವ, ಜನರ ನೆನಪಿನಿಂದ ಅವರನ್ನು ಅಳಿಸುವ ಪ್ರಯತ್ನವೂ ನಡೆಯುತ್ತಿದೆ. ಪಠ್ಯ ಪುಸ್ತಕದಿಂದ ಸಂಗೊಳ್ಳಿ ರಾಯಣ್ಣನ ವಿಷಯವನ್ನು ಕೈ ಬಿಟ್ಟಿರುವುದು ಈ ಹಿನ್ನೆಲೆಯಲ್ಲಿ ಚರ್ಚೆಯ ವಿಷಯವಾಗಬೇಕು. ಇದರ ಬೆನ್ನಿಗೇ ಬೆಳಗಾವಿಯಲ್ಲಿ ರಾಯಣ್ಣ ಅವರ ಪ್ರತಿಮೆ ಸ್ಥಾಪನೆಗೆ ಇತ್ತೀಚೆಗೆ ಸ್ಥಳೀಯ ಸಂಸ್ಥೆ ಅಡ್ಡಿ ಪಡಿಸಿತು. ರಾತ್ರೋ ರಾತ್ರಿ ರಾಯಣ್ಣನ ಪ್ರತಿಮೆಯನ್ನು ಎತ್ತಂಗಡಿ ಮಾಡಿತು. ಆದರೆ ಯಾವಾಗ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಿತೋ ಆಗ, ಸ್ಥಳೀಯಾಡಳಿತ ಎಚ್ಚೆತ್ತು ರಾಯಣ್ಣನ ಪ್ರತಿಮೆಗೆ ಅನುಮತಿ ನೀಡಿತು.

ತನ್ನವರ ಮೋಸಕ್ಕೆ ಬಲಿಯಾಗಿ ಕಿತ್ತೂರು ಚೆನ್ನಮ್ಮ ಬ್ರಿಟಿಷರಿಗೆ ಸೆರೆಯಾದರು. ಚೆನ್ನಮ್ಮಳ ಹೋರಾಟವನ್ನು ರಾಯಣ್ಣ ಮುಂದುವರಿಸಿದರು. ಆದರೆ ರಾಯಣ್ಣನನ್ನು ಕೂಡ ಮೋಸದಿಂದಲೇ ಬ್ರಿಟಿಷರು ಬಂಧಿಸಿ ನೇಣಿಗೇರಿಸಿದರು. ಅಂದು ಚೆನ್ನಮ್ಮ ಮತ್ತು ರಾಯಣ್ಣನಿಗೆ ವಂಚಿಸಿದ ಮನಸ್ಥಿತಿಯೇ ಇಂದು ಅವರ ಹೆಸರುಗಳನ್ನು ಅಳಿಸಿ ಹಾಕುವುದಕ್ಕೆ ಸಂಚು ನಡೆಸುತ್ತಿದೆೆ. ಈ ದೇಶದ ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಪಾತ್ರವನ್ನು ವಹಿಸದ, ಶಿಕ್ಷೆಗೆ ಹೆದರಿ ಬ್ರಿಟಿಷರಿಗೆ ಎರಡೆರಡು ಬಾರಿ ಕ್ಷಮೆಯಾಚನೆ ಪತ್ರವನ್ನು ಬರೆದ, ಸ್ವಾತಂತ್ರ ಯೋಧರ ಕುರಿತಂತೆ ಬ್ರಿಟಿಷರಿಗೆ ಮಾಹಿತಿಗಳನ್ನು ನೀಡಿದ ದ್ರೋಹಿಗಳನ್ನೇ ನಾಯಕರೆಂದು ಬಿಂಬಿಸಿ ಅವರ ಹೆಸರನ್ನು ಕರ್ನಾಟಕದಲ್ಲಿರುವ ರಸ್ತೆಗೆ, ಸೇತುವೆಗಳಿಗೆ ಇಡುವುದಕ್ಕೆ ಮುಂದಾಗುವುದು, ಕನ್ನಡ ದ್ರೋಹ ಮಾತ್ರವಲ್ಲ, ದೇಶಕ್ಕಾಗಿ ಬಲಿದಾನಗೈದ ಎಲ್ಲ ನಾಯಕರಿಗೂ ಎಸಗುವ ದ್ರೋಹವಾಗಿದೆ. ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆಯ ವಿಷಯದಲ್ಲಿ ಕನ್ನಡಿಗರಿಗೆ ನ್ಯಾಯ ದೊರಕಿರಬಹುದು, ಆದರೆ, ಕನ್ನಡದ ಅಸ್ಮಿತೆಗಳ ಬದಲಿಗೆ ಹಿಂದಿ ಅಸ್ಮಿತೆಗಳನ್ನು ತುರುಕುವ ಪ್ರಯತ್ನ ಮಾತ್ರ ಯಶಸ್ವಿಯಾಗಿ ಮುಂದುವರಿಯುತ್ತಿದೆ.

ಎರಡು ವರ್ಷಗಳ ಹಿಂದೆ ಕೇರಳದಲ್ಲೂ ಇಂತಹದೇ ಒಂದು ಪ್ರಯತ್ನ ನಡೆಯಿತು. ದಕ್ಷಿಣ ಭಾರತದ ಸಂಭ್ರಮದ ಹಬ್ಬವಾಗಿರುವ ಓಣಂ ಸಂದರ್ಭದಲ್ಲಿ, ಗೃಹ ಸಚಿವ ಅಮಿತ್ ಶಾ ಅವರು ‘ಕೇರಳದ ಜನರಿಗೆ ವಾಮನ ಜಯಂತಿಯ ಶುಭಾಶಯಗಳು’ ಎಂದು ಕೋರಿದರು. ಇದು ಇಡೀ ಕೇರಳವನ್ನು ಕೆರಳಿಸಿತು. ಓಣಂ ಎನ್ನುವುದು ಬಲಿ ಚಕ್ರವರ್ತಿ ತನ್ನ ನಾಡನ್ನು ಮತ್ತೊಮ್ಮೆ ಭೇಟಿ ಮಾಡಲು ಬರುವ ದಿನ. ಅತ್ಯುತ್ತಮ ರಾಜನೆಂಬ ಹೆಗ್ಗಳಿಕೆ ಪಡೆದಿದ್ದ ಬಲಿಚಕ್ರವರ್ತಿಯನ್ನು ತುಳಿದು ದಕ್ಷಿಣಕ್ಕೆ ಓಡಿಸಿರುವುದು ವಾಮನ. ವರ್ಷಕ್ಕೊಮ್ಮೆ ಆತನಿಗೆ ತನ್ನ ನಾಡನ್ನು ಭೇಟಿ ಮಾಡುವ ಭರವಸೆಯನ್ನು ಗಡಿಪಾರಿನ ಸಂದರ್ಭದಲ್ಲಿ ನೀಡಲಾಗುತ್ತದೆ. ಹಾಗೆ, ತಮ್ಮ ಮೆಚ್ಚಿನ ಚಕ್ರವರ್ತಿ ಪ್ರತಿವರ್ಷ ತನ್ನ ಜನರನ್ನು ಭೇಟಿ ಮಾಡಲು ಬರುವ ದಿನವೆಂದು ಓಣಂನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ಅಮಿತ್ ಶಾ ಅವರು, ಓಣಂ ಹಬ್ಬವನ್ನು ‘ವಾಮನ ಹಬ್ಬ’ವಾಗಿ ಪರಿವರ್ತಿಸಲು ಯತ್ನಿಸಿ ಕೇರಳಿಗರ ತೀವ್ರ ವಿರೋಧವನ್ನು ಕಟ್ಟಿಕೊಂಡರು. ಕೇರಳಿಗರ ಪ್ರತಿಭಟನೆಯಿಂದ ಕಂಗಾಲಾಗಿ ಕೊನೆಗೆ ಆ ಶುಭಾಶಯ ಜಾಹೀರಾತನ್ನು ಸರಕಾರ ಹಿಂದೆಗೆದುಕೊಂಡಿತು. ಇಂದು ಕನ್ನಡ ಮತ್ತು ದ್ರಾವಿಡ ಅಸ್ಮಿತೆಗಳನ್ನು ನಾಶ ಮಾಡುವುದಕ್ಕೆ ಸಂಚು ಹೂಡುತ್ತಿರುವುದು ಕೇವಲ ಹಿಂದಿ ಅಸ್ಮಿತೆಗಳು ಮಾತ್ರವಲ್ಲ. ಮರೆಯಲ್ಲಿ ವೈದಿಕ ರಾಜಕಾರಣಗಳು ಕೆಲಸ ಮಾಡುತ್ತಿವೆ. ನಾಗಪುರದಲ್ಲಿರುವ ಆರೆಸ್ಸೆಸ್‌ನ ಕಚೇರಿಯ ಆದೇಶಗಳನ್ನು ಕೇಂದ್ರ ಸರಕಾರ ತನ್ನ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಲು ಹೊರಟಿವೆ.

ಇದೇ ಸಂದರ್ಭದಲ್ಲಿ ರಾಯಣ್ಣನನ್ನು ಹೊಗಳುವ ಸಂದರ್ಭದಲ್ಲಿ ಶಿವಾಜಿಯನ್ನು ಟೀಕಿಸುವ ಕೆಲಸಗಳೂ ನಡೆಯುತ್ತಿವೆ. ಶಿವಾಜಿ ಕರ್ನಾಟಕದ ಮೇಲೆ ದಂಡೆತ್ತಿ ಬಂದಿರುವುದು ನಿಜ. ಹಾಗೆಂದು ಶಿವಾಜಿಯನ್ನು ನಾವು ರಾಯಣ್ಣನ ಶತ್ರುವಾಗಿ ಬಿಂಬಿಸುವುದು ಮತ್ತು ಮರಾಠಿಗರ ಮೇಲಿನ ಸಿಟ್ಟಿಗಾಗಿ ಶಿವಾಜಿಯನ್ನು ನಿಂದಿಸುವುದು ತಪ್ಪು. ಶಿವಾಜಿಯ ಕುರಿತಂತೆಯೂ ಆರೆಸ್ಸೆಸ್ ಜನರನ್ನು ದಾರಿ ತಪ್ಪಿಸಿದೆ. ಶಿವಾಜಿಯ ನೇತೃತ್ವದಲ್ಲಿ ದಲಿತರು ಮತ್ತು ಮುಸ್ಲಿಮರು ಒಂದಾಗಿ ಮೊಘಲರನ್ನು ಎದುರಿಸಿದರು. ಶಿವಾಜಿಯ 11 ಪ್ರಮುಖ ದಂಡನಾಯಕರು ಮುಸ್ಲಿಮರಾಗಿದ್ದರು. ಶಿವಾಜಿಯ ಪ್ರಮುಖ ಅಂಗರಕ್ಷಕರಲ್ಲಿ ಒಬ್ಬ ದಲಿತನಾಗಿದ್ದರೆ ಇನ್ನೊಬ್ಬ ಮುಸ್ಲಿಮನಾಗಿದ್ದ. ಶಿವಾಜಿಯ ಸೇನೆಯಲ್ಲಿದ್ದ ಬಹುಸಂಖ್ಯಾತರು ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರು. ಶಿವಾಜಿ ಮರಾಠಿಯಾಗಿರದೇ, ಕೆಳವರ್ಗಕ್ಕೆ ಸೇರಿದವನಾಗಿದ್ದ. ಆದುದರಿಂದಲೇ ಆತನನ್ನು ಮೇಲ್ಜಾತಿಯ ಜನರು ಕೊನೆಯವರೆಗೂ ರಾಜನಾಗಿ ಮಾನಸಿಕವಾಗಿ ಸ್ವೀಕರಿಸಲಿಲ್ಲ. ಮೊಘಲರ ಸೇನಾಧಿಪತಿ ರಾಜ ಜಯಚಂದ್ ರಜಪೂತನಾಗಿದ್ದ. ಈತ ಶಿವಾಜಿಯ ಮೇಲೆ ಯುದ್ಧ ಹೂಡಿದಾಗ ಮೊಘಲರ ಗೆಲುವಿಗಾಗಿ ಬ್ರಾಹ್ಮಣರು 50 ದಿನಗಳ ಬೃಹತ್ ಚಂಡಿಕಾಯಾಗ ಮಾಡಿದ್ದರು.

ಶಿವಾಜಿಯು ಅಫಜಲ್‌ಖಾನ್‌ನನ್ನು ಮುಖಾಮುಖಿಯಾಗುವಾಗ ಶಿವಾಜಿಯ ಅಂಗರಕ್ಷಕರಿಬ್ಬರಲ್ಲಿ ಒಬ್ಬ ಮುಸ್ಲಿಮನಾಗಿದ್ದರೆ ಇನ್ನೊಬ್ಬ ದಲಿತನಾಗಿದ್ದ. ಇದೇ ಸಂದರ್ಭದಲ್ಲಿ ಅಫಜಲ್‌ಖಾನ್‌ನ ಅಂಗರಕ್ಷಕರ ಹೆಸರು ಕೃಷ್ಣ ಕುಲಕರ್ಣಿಯೆಂದಾಗಿತ್ತು. ಕುಲಕರ್ಣಿ ಹಿಂದಿನಿಂದ ಶಿವಾಜಿಯನ್ನು ಖಡ್ಗದಿಂದ ಇರಿಯಲು ಮುಂದಾದಾಗ ಆತನನ್ನು ಕೊಂದದ್ದು ಶಿವಾಜಿಯ ದಲಿತ ಅಂಗರಕ್ಷಕ ಶಿವಾ ಎಂಬಾತ. ಇದನ್ನು ಜ್ಯೋತಿ ಬಾಪುಲೆ ತಮ್ಮ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಇಂತಹ ಶಿವಾಜಿಯನ್ನು ಕೊನೆಯವರೆಗೂ ಪಟ್ಟವೇರದಂತೆ ತಡೆಯುವ ಸಂಚು ನಡೆಯಿತು. ಶಿವಾಜಿಯ ಪಟ್ಟಾಭಿಷೇಕ ನೆರವೇರಿಸಲು ಬ್ರಾಹ್ಮಣರು ಸಮ್ಮತಿಸದೇ ಇದ್ದಾಗ ದೂರದ ಕಾಶಿಯಿಂದ ಗಾಗಾ ಭಟ್ಟನೆಂಬವನನ್ನು ಕರೆಸಲಾಯಿತು. ಆತ ತನ್ನ ಎಡಗಾಲಿನ ಹೆಬ್ಬೆಟ್ಟಿನಿಂದ ಶಿವಾಜಿಯ ಹಣೆಗೆ ತಿಲಕವನ್ನಿಡುತ್ತಾನಂತೆ. ಆದರೆ ಈ ಪಟ್ಟಾಭಿಷೇಕವೂ ವ್ಯರ್ಥವಾಗಿ, ಮತ್ತೆ ಇನ್ನೊಮ್ಮೆ ಹೊಸದಾಗಿ ಶಿವಾಜಿ ಪಟ್ಟಾಭಿಷೇಕ ಮಾಡಿಸಿಕೊಳ್ಳಬೇಕಾಗುತ್ತದೆ. ಅಂತಿಮವಾಗಿ ಶಿವಾಜಿಯ ಪುತ್ರ ಸಾಂಭಾಜಿಯನ್ನು ಮೊಘಲರಿಗೆ ಬಲಿಕೊಟ್ಟು ಪೇಶ್ವೆಗಳು ಶಿವಾಜಿಯ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳುತ್ತಾರೆ. ಸಾಂಬಾಜಿಯ ಛಿದ್ರಗೊಂಡ ಮೃತದೇಹವನ್ನು ದಫನ ಮಾಡಿರುವುದು ಮಹಾರ್ ಸಮುದಾಯಕ್ಕೆ ಸೇರಿದ ದಲಿತ.

ರಾಯಣ್ಣನ ಪ್ರತಿಮೆಗೆ ಮರಾಠಿಗರು ಅಡ್ಡಿ ಪಡಿಸಿದರೆನ್ನುವ ಕಾರಣಕ್ಕೆ ಶಿವಾಜಿಯನ್ನು ನಿಂದಿಸುವುದು ತಪ್ಪು. ಮೊಘಲರ ವಿರುದ್ಧ ದಲಿತರು, ಮುಸ್ಲಿಮರನ್ನು ಸಂಘಟಿಸಿ ಸಾಮ್ರಾಜ್ಯ ಕಟ್ಟಿದ ಹಿಂದುಳಿದ ವರ್ಗಕ್ಕೆ ಸೇರಿದ ಶಿವಾಜಿಯೂ ಗೌರವಾನ್ವಿತನೇ ಆಗಿದ್ದಾನೆ. ಇಂದು ಶಿವಾಜಿಯನ್ನು ಪಕ್ಕಕ್ಕೆ ಸರಿಸಿ, ಶಿವಾಜಿಯ ವಂಶಸ್ಥರಿಗೆ ವಂಚಿಸಿ ಸಾಮ್ರಾಜ್ಯವನ್ನು ಕಿತ್ತುಕೊಂಡ ಶಿವಾಜಿಯ ಮಂತ್ರಿಗಳಾಗಿದ್ದ, ಚಿತ್ಪಾವಣ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪೇಶ್ವೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ. ಶೃಂಗೇರಿ ಮಠದ ಲೂಟಿಯೂ ಸೇರಿದಂತೆ ದೇಶಾದ್ಯಂತ ಲೂಟಿಕೋರರೆಂದೇ ಕುಖ್ಯಾತರಾಗಿರುವ ಈ ಪೇಶ್ವೆಗಳನ್ನು ವೈಭವೀಕರಿಸಿ ಸಿನೆಮಾಗಳು, ಟಿವಿ ಧಾರಾವಾಹಿಗಳು ಬರುತ್ತಿವೆ. ನಮಗೆ ಬೇಕಾಗಿರುವುದು ಜಾತಿ ಭೇದಗಳನ್ನು ಅಳಿಸಿ ತಳಸ್ತರದ ಜನರನ್ನು ಒಟ್ಟುಗೂಡಿಸಿ ಮೊಘಲರನ್ನು ಗೆದ್ದ ಶಿವಾಜಿಯೇ ಹೊರತು, ಜಾತೀಯತೆಯ ಪರಾಕಾಷ್ಠೆಯನ್ನು ಮೆರೆದು, ಅಂತಿಮವಾಗಿ ಬರೇ 500 ಮಂದಿ ಮಹಾರ್ ದಲಿತರ ಕೈಯಲ್ಲಿ ಸೋತ ಪೇಶ್ವೆಗಳಲ್ಲ. ಆದುದರಿಂದ ರಾಯಣ್ಣ ಮತ್ತು ಶಿವಾಜಿಯನ್ನು ನಾವು ಜೊತೆ ಜೊತೆಗೇ ಕೊಂಡು ಹೋಗುವ ಪ್ರಯತ್ನವನ್ನು ಈ ಸಂದರ್ಭದಲ್ಲಿ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News