ಬೆಂಗಳೂರು ಹಿಂಸಾಚಾರ ಪ್ರಕರಣ: ಎಸ್‍ಡಿಪಿಐ ಕಚೇರಿ ಸೇರಿ ಹಲವು ಕಡೆ ಸಿಸಿಬಿ ದಾಳಿ

Update: 2020-09-01 12:54 GMT

ಬೆಂಗಳೂರು, ಸೆ.1: ಬೆಂಗಳೂರು ಹಿಂಸಾಚಾರ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಇಲ್ಲಿನ ಕಬ್ಬನ್ ಪೇಟೆಯ ಹಮೀದ್ ಶಾ ಆವರಣದಲ್ಲಿರುವ ಎಸ್‍ಡಿಪಿಐ ಕಚೇರಿ ಸೇರಿ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.

ಮಂಗಳವಾರ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪ್ರದೇಶಗಳಲ್ಲಿರುವ ಎಸ್‍ಡಿಪಿಐ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದ್ದು, ಮುಖ್ಯವಾಗಿ ಹಮೀದ್ ಶಾ ಆವರಣದಲ್ಲಿರುವ ಎಸ್‍ಡಿಪಿಐ ಕಚೇರಿಯಲ್ಲಿ ಶೋಧ ನಡೆಸಿದರು.

ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದ ಸಿಸಿಬಿ ಎಸಿಪಿಯೋರ್ವರ ನೇತೃತ್ವದ ತಂಡದಿಂದ ಈ ದಾಳಿ ನಡೆದಿದ್ದು, ಸತತ 4 ಗಂಟೆಗಳ ಕಾಲ ಶೋಧ ನಡೆಸಿದ ತನಿಖಾಧಿಕಾರಿಗಳು ಕಚೇರಿಯಲ್ಲಿದ್ದ ಲ್ಯಾಪ್‍ಟಾಪ್, ಹಾರ್ಡ್‍ಡಿಸ್ಕ್, ಕೆಲ ಪುಸ್ತಕಗಳು, ಪಕ್ಷಕ್ಕೆ ಸಂಬಂಧಿಸಿದ ಭಿತ್ತಿ ಪತ್ರಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?: ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಇದೇ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಎನ್ನಲಾದ ಹಲವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಆರೋಪಿಗಳ ಪ್ರಾಥಮಿಕ ಮಾಹಿತಿ ಅನ್ವಯ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಉದ್ದೇಶಪೂರ್ವಕ ದಾಳಿ: ಎಸ್‍ಡಿಪಿಐ ರಾಜ್ಯಾಧ್ಯಕ್ಷ ಆರೋಪ

ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣಗಳಲ್ಲಿ ಎಸ್‍ಡಿಪಿಐ ಪಕ್ಷದ ಯಾವುದೇ ಪಾತ್ರ ಇಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ನಮ್ಮನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.

ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಡಿಪಿಐ ಕಚೇರಿ ಮೇಲೆ ಸಿಸಿಬಿ ಪೊಲೀಸರು ಉದ್ದೇಶಪೂರ್ವಕವಾಗಿಯೇ ದಾಳಿ ನಡೆಸಿದ್ದಾರೆ. ಆದರೆ, ಅವರಿಗೆ ಯಾವುದೇ ಆಧಾರ ಸಿಕ್ಕಿಲ್ಲ. ಅಲ್ಲದೆ, ಪಕ್ಷದ ಬೆಳವಣಿಗೆ ಸಹಿಸದೆ, ಈ ರೀತಿಯ ದಾಳಿಗೆ ರಾಜ್ಯ ಸರಕಾರ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.

ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನೇರ ಆರೋಪಿ ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದರೂ, ಎಸ್‍ಡಿಪಿಐ ಮೇಲೆ ಆರೋಪ ಹೊರಿಸಲು ಇಲ್ಲಸಲ್ಲದ ಕಾರ್ಯತಂತ್ರ ನಡೆಸಲಾಗುತ್ತಿದೆ. ನಮ್ಮ ಮೇಲಿನ ಆರೋಪಗಳಿಗೆ ಕಾನೂನಿನ ಮೂಲಕ ಉತ್ತರ ನೀಡುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News