ಸ್ಯಾಂಡಲ್ ವುಡ್‍ನಲ್ಲಿ ಡ್ರಗ್ಸ್ ದಂಧೆ ಆರೋಪ: ಇಂದ್ರಜಿತ್‍ಗೆ ಮತ್ತೊಮ್ಮೆ ನೋಟಿಸ್- ಸಿಸಿಬಿ

Update: 2020-09-01 13:18 GMT

ಬೆಂಗಳೂರು, ಸೆ.1: ಸ್ಯಾಂಡಲ್ ವುಡ್‍ನಲ್ಲಿ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಮತ್ತೊಮ್ಮೆ ನೋಟಿಸ್ ನೀಡಿ, ಮಾಹಿತಿ ಸಂಗ್ರಹಿಸಲಾಗುವುದು ಎಂದು ಸಿಸಿಬಿ ತಿಳಿಸಿದೆ.

ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡ್ರಗ್ಸ್ ಸೇವನೆ ಆರೋಪ ಸಂಬಂಧ ಇಂದ್ರಜಿತ್ ಅವರು ಹೇಳಿಕೆಗಳನ್ನು ಮಾತ್ರ ನೀಡಿದ್ದು, ಯಾವುದೇ ರೀತಿಯ ದಾಖಲೆ ಸಲ್ಲಿಕೆ ಮಾಡಿಲ್ಲ ಎಂದರು.

ಹಳೆ ಘಟನೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದು, ಜೊತೆಗೆ ಇದರ ಆಧಾರದ ಮೇಲೆ ಕೆಲವು ಹೆಸರುಗಳನ್ನು ತಿಳಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲೆ ಕೊಟ್ಟಿಲ್ಲ. ಹೀಗಾಗಿ, ಮತ್ತೊಮ್ಮೆ ಇಂದ್ರಜಿತ್‍ಗೆ ನೋಟಿಸ್ ನೀಡಿ, ದಾಖಲೆ ಸಲ್ಲಿಕೆಗೆ ಹೇಳುತ್ತೇವೆ ಎಂದು ಅವರು ತಿಳಿಸಿದರು.

ಪ್ರಕರಣದ ಬಗ್ಗೆ ಸೂಕ್ತ ದಾಖಲೆ ಸಲ್ಲಿಕೆಯಾದರೆ ತನಿಖೆ ನಡೆಸಬಹುದು ಎಂದ ಅವರು, ಮತ್ತೊಂದು ಕಡೆ ಸಿಸಿಬಿ ತಂಡ ಕೂಡ ಈ ಬಗ್ಗೆ ದಾಖಲೆ ಸಂಗ್ರಹಿಸುವಲ್ಲಿ ನಿರತವಾಗಿದೆ ಎಂದು ಅವರು ಹೇಳಿದರು.

`ಡ್ರಗ್ ಮಾಫಿಯಾ ದೊಡ್ಡ ಮಟ್ಟದ ದಂಧೆ'

ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದ ದಂಧೆಯಾಗಿದ್ದು, ಇದರ ವಿರುದ್ಧ ಪರಿಣಾಮಕಾರಿ ಆಗಿ ಹೋರಾಟ ನಡೆಸಬೇಕೆಂದು ಕೆಎಸ್ಸಾರ್ಪಿ ಎಡಿಜಿಪಿ ಅಲೋಕ್‍ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, 2011ರಲ್ಲಿ ಸಿಸಿಬಿಯಲ್ಲಿ ನಾವಿದ್ದಾಗ ಮಾರ್ಟಿನ್ ಎನ್‍ಡ್ಯೂಕ್ ಎನ್ನುವ ಮಾಸ್ಟರ್ ಮೈಂಡ್‍ನನ್ನು ಬಂಧಿಸಲಾಗಿತ್ತು. 2019 ರಲ್ಲಿ 60 ಜನ ಡ್ರಗ್ ಪೆಡ್ಲರ್ ಗಳಿಗೆ ಪರೇಡ್ ನಡೆಸಿದ್ದೆವು ಎಂದು ಹೇಳಿದರು.

ಠಾಣೆಗಳಿಗೆ ಪಂತ್ ಭೇಟಿ

ಅಪರಾಧ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇಲ್ಲಿನ ಬಸವೇಶ್ವರ ನಗರ, ಚಂದ್ರಾ ಲೇಔಟ್ ಹಾಗೂ ಉಪ್ಪಾರಪೇಟೆ ಠಾಣೆಗಳಿಗೆ ಖುದ್ದು ಭೇಟಿ ನೀಡಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ನಗರದಲ್ಲಿ ನಡೆಯುವ ಅಪರಾಧ, ಮಾದಕದ್ರವ್ಯ ಸೇವನೆ ಪ್ರಕರಣಗಳ ಕುರಿತು ಹದ್ದಿನ ಕಣ್ಣಿಡುವಂತೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News