ಬೆಂಗಳೂರಿನಲ್ಲಿ ಕೋವಿಡ್ ಅಟ್ಟಹಾಸಕ್ಕೆ ಬಲಿಯಾದವರ ಸಂಖ್ಯೆ 2 ಸಾವಿರಕ್ಕೆ ಏರಿಕೆ

Update: 2020-09-01 15:24 GMT

ಬೆಂಗಳೂರು, ಸೆ.1: ನಗರದಲ್ಲಿ ಮಂಗಳವಾರ ಒಂದೇ ದಿನ 2,967 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. 1137 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 40 ಮಂದಿ ಸೋಂಕಿನಿಂದಾಗಿ ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 1,32,092 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ 2,005 ಜನರು ಸೋಂಕಿಗೆ ಬಲಿಯಾಗಿದ್ದಾರೆ. 91,180 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 38,906 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 1,75,474 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಸೋಮವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 15,229 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 40,563 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ. ನಗರದ 3,36,739 ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ದ್ವಿತೀಯ ಸಂಪರ್ಕಿತ 4,31,630 ಜನರನ್ನು ಗುರುತಿಸಲಾಗಿದೆ.

ನಗರದಲ್ಲಿ 8,55,434 ಜನರಿಗೆ ಕೊರೋನ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಪಾಸಿಟಿವ್ ಪ್ರಮಾಣ ಶೇ.15.09ರಷ್ಟಿದೆ. ಕೊರೋನ ಸೋಂಕಿಗೆ ಮೃತರಾಗುತ್ತಿರುವ ಪ್ರಮಾಣ ಶೇ.1.54 ರಷ್ಟಿದ್ದು, ಗುಣಮುಖರಾಗುತ್ತಿರುವ ಪ್ರಮಾಣ ಶೇ.68.48ರಷ್ಟಿದೆ.

ಆಗಸ್ಟ್ ನಲ್ಲಿ ಕೊರೋನ ಹೆಚ್ಚಳ: ಕೊರೋನ ಸೋಂಕು ಜುಲೈ ತಿಂಗಳನ್ನೂ ಮೀರಿಸಿ ಆಗಸ್ಟ್ ತಿಂಗಳಲ್ಲಿ ಹೆಚ್ಚಾಗಿದೆ. ಬೆಂಗಳೂರಿನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ಆಗಸ್ಟ್ ಒಂದೇ ತಿಂಗಳಿನಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 71,729. ಜುಲೈ ತಿಂಗಳಿನಲ್ಲಿ ದಾಖಲಾಗಿದ್ದ ಸೋಂಕಿತರ ಸಂಖ್ಯೆ 52,106. ಜುಲೈ ತಿಂಗಳಿಗೆ ಹೋಲಿಸಿಕೊಂಡರೆ ಆಗಸ್ಟ್ ನಲ್ಲಿ 19,623 ಜನರಲ್ಲಿ ಹೆಚ್ಚುವರಿಯಾಗಿ ಸೋಂಕು ಕಂಡು ಬಂದಿದೆ. ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 909. ಜುಲೈ ತಿಂಗಳಿನಲ್ಲಿ 962 ಜನ ಸಾವನ್ನಪ್ಪಿದ್ದರು. ಹಿಂದಿನ ತಿಂಗಳಿಗೆ ಹೋಲಿಸಿಕೊಂಡರೆ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ.

ಕೊರೋನ ಸೋಂಕಿತನಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಕೋವಿಡ್ ಪಾಸಿಟಿವ್ ಹೊಂದಿದ್ದ 60 ವರ್ಷ ಪ್ರಾಯದ ಮಹಿಳಾ ರೋಗಿಯೊಬ್ಬರಿಗೆ ಹೃದಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಅನೇಕ ಬಾರಿ ಹೃದಯಾಘಾತಕ್ಕೆ ತುತ್ತಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕೊರೋನ ಸೊಂಕಿತ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಡಾ.ರಾಜಪಾಲ್ ಸಿಂಗ್ ನೇತೃತ್ವದ ತಜ್ಞ ವೈದ್ಯರ ತಂಡ ಈ ಚಿಕಿತ್ಸೆಯನ್ನು ನಡೆಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News