ಮಾತುಕತೆ ಬಳಿಕವೂ ಚೀನಾದಿಂದ ಪ್ರಚೋದನಾತ್ಮಕ ಕ್ರಮ: ಕೇಂದ್ರ ಸರ್ಕಾರ

Update: 2020-09-02 03:57 GMT
ಫೈಲ್ ಫೋಟೋ

ಹೊಸದಿಲ್ಲಿ, ಸೆ.2: ಲಡಾಖ್‌ನ ಪಾಂಗಾಂಗ್ ಸರೋವರ ದಕ್ಷಿಣ ದಂಡೆಯಲ್ಲಿ ಎರಡು ದಿನಗಳ ಬಳಿಕ ಮತ್ತೆ ಚೀನಾ ಪ್ರಚೋದನಾತ್ಮಕ ಕೃತ್ಯದಲ್ಲಿ ತೊಡಗಿದೆ ಎಂದು ಕೇಂದ್ರ ಸರ್ಕಾರ ಆಪಾದಿಸಿದೆ. ವಾಸ್ತವ ನಿಯಂತ್ರಣ ರೇಖೆಯನ್ನು ಏಕಪಕ್ಷೀಯವಾಗಿ ಬದಲಿಸುವ ಚೀನಾದ ಇಂಥದ್ದೇ ಯತ್ನವನ್ನು ಭಾರತ ಎರಡು ದಿನಗಳ ಹಿಂದೆ ವಿಫಲಗೊಳಿಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಪರಿಸ್ಥಿತಿಯನ್ನು ಶಮನಗೊಳಿಸಲು ಎರಡೂ ದೇಶಗಳ ಕಮಾಂಡರ್‌ಗಳು ಮಾತುಕತೆಯಲ್ಲಿ ತೊಡಗಿದ್ದ ವೇಳೆಯಲ್ಲೇ ಆಗಸ್ಟ್ 31ರಂದು ಚೀನಾ ಸೇನೆ ಪ್ರಚೋದನಾತ್ಮಕ ಕೃತ್ಯದಲ್ಲಿ ತೊಡಗಿತ್ತು ಎಂದು ಸಚಿವಾಲಯ ಹೇಳಿದೆ. ಭಾರತ ಈ ವಿಚಾರವನ್ನು ರಾಜತಾಂತ್ರಿಕ ಮತ್ತು ಸೇನಾ ವಾಹಿನಿಯ ಮೂಲಕ ಚೀನಾ ಬಳಿ ಪ್ರಸ್ತಾವಿಸಿದ್ದು, "ಮುನ್ಪಡೆ ಸೈನಿಕರು ಶಿಸ್ತು ಮತ್ತು ನಿಯಂತ್ರಣವನ್ನು ಕಾಪಾಡಿಕೊಳ್ಳಬೇಕು" ಎಂದು ಆಗ್ರಹಿಸಿದೆ.

ಈ ಬಾರಿ ಹಗಲಿನ ವೇಳೆ ಚೀನಿ ಸೈನಿಕರು ಭಾರತದ ಸೈನಿಕರನ್ನು ಸುತ್ತುವರಿದಿದ್ದಾರೆ. ಭಾರತೀಯ ಸೇನೆಯ ಪ್ರಾಬಲ್ಯ ಇರುವ ಶಿಖರಗಳನ್ನು ಮತ್ತೆ ವಶಕ್ಕೆ ಪಡೆಯುವ ಕಾರ್ಯಾಚರಣೆಯಲ್ಲಿದ್ದ ಸೈನಿಕರನ್ನು ಚೀನಾ ಅಡ್ಡಿಪಡಿಸಿದೆ. ಮುಂದಕ್ಕೆ ಹೋಗದಂತೆ ಚೀನಾ ಸೈನಿಕರು ಎಚ್ಚರಿಕೆ ನೀಡಿದ್ದಾರೆ. ಭಾರತದ ಬ್ರಿಗೇಡಿಯರ್ ಜತೆಗೆ ಮಾತುಕತೆಯಲ್ಲಿದ್ದ ಚೀನಾದ ಸೇನಾ ಕಮಾಂಡರ್ ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಮ್ಮ ಸೈನಿಕರನ್ನು ತಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಇದಕ್ಕೂ ಮುನ್ನ ದಿಲ್ಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಹೇಳಿಕೆ ನೀಡಿ, "ಭಾರತದ ನಡೆ ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ. ಈ ಕುರಿತ ಒಪ್ಪಂದಗಳ ಉಲ್ಲಂಘನೆಯಾಗಿದ್ದು, ಎಲ್ಲ ಶಿಷ್ಟಾಚಾರ ಹಾಗೂ ಉಭಯ ದೇಶಗಳ ನಡುವಿನ ಒಮ್ಮತವನ್ನು ಉಲ್ಲಂಘಿಸಿದೆ" ಎಂದು ಆಪಾದಿಸಿದೆ. ಭಾರತ ವಿವಾದಿತ ಪ್ರದೇಶದಲ್ಲಿ ಸಂಪೂರ್ಣ ಸೇನಾ ನಿಯಂತ್ರಣವನ್ನು ಸಾಧಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News