ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ ರದ್ದು: ‘ಪ್ರಜಾಪ್ರಭುತ್ವದ ಕಗ್ಗೊಲೆ' ಎಂದ ವಿಪಕ್ಷ ಸಂಸದರು

Update: 2020-09-02 15:52 GMT

ಹೊಸದಿಲ್ಲಿ:  ಸೆಪ್ಟೆಂಬರ್ 14ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳೆ ಪ್ರಶ್ನೋತ್ತರ ಕಲಾಪವನ್ನು ರದ್ದುಗೊಳಿಸಿರುವ ಸರಕಾರದ ಕ್ರಮ ವಿಪಕ್ಷಗಳ ಸಂಸದರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಸದರು ಈ ಅಧಿವೇಶನದಲ್ಲಿ ಖಾಸಗಿ ಸದಸ್ಯರ ಮಸೂದೆಯನ್ನೂ ಮಂಡಿಸುವ ಹಾಗಿಲ್ಲ, ಕಲಾಪದಲ್ಲಿ ಶೂನ್ಯ ವೇಳೆ ಇರಲಿದ್ದು ಸದಸ್ಯರು ಸಾರ್ವಜನಿಕ ಮಹತ್ವದ ವಿಚಾರಗಳನ್ನು ಎತ್ತಬಹುದಾಗಿದೆ. ಆದರೆ ಶೂನ್ಯ ವೇಳೆಯ ಅವಧಿಯನ್ನು 30 ನಿಮಿಷಗಳಿಗೆ ಇಳಿಸಲಾಗಿದೆ.

ಪ್ರಶ್ನೋತ್ತರ ಕಲಾಪವು ಯಾವತ್ತೂ ದಿನದ ಅಧಿವೇಶನದ ಆರಂಭದಲ್ಲಿರುತ್ತದೆ ಹಾಗೂ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳಲು ಸದಸ್ಯರಿಗೆ  ಅನುವು ಮಾಡಿಕೊಡುತ್ತದೆ. ಆದರೆ ಈ ಬಾರಿ ಈ ಅವಕಾಶವಿಲ್ಲದೇ ಇರುವುದು ಸದಸ್ಯರಲ್ಲಿ ಆಕ್ರೋಶ ಮೂಡಿಸಿದೆ.

ಲೋಕಸಭೆ ಮತ್ತು ರಾಜ್ಯ ಸಭೆ ಪ್ರತ್ಯೇಕ ಶಿಫ್ಟ್‍ನಲ್ಲಿ ಕೆಲಸ ಮಾಡಲಿದ್ದು  ಸಂಸದರ ಆಸನಗಳ ನಡುವೆ ಅಂತರ ಕಾಪಾಡಲಾಗುವುದು.

ಪ್ರಶ್ನೋತ್ತರ ಕಲಾಪ ರದ್ದುಪಡಿಸಿರುವ ಕ್ರಮವನ್ನು ಟೀಕಿಸಿ ಟ್ವೀಟ್ ಮಾಡಿರುವ ತೃಣಮೂಲ ಸಂಸದ  ಡೆರೆಕ್ ಒ'ಬ್ರಿಯಾನ್ ಸರಕಾರವು ಕೋವಿಡ್ ನೆಪದಲ್ಲಿ ‘ಪ್ರಜಾಪ್ರಭುತ್ವದ ಕಗ್ಗೊಲೆ' ನಡೆಸುತ್ತಿದೆ ಎಂದು ಹೇಳಿದ್ದಾರೆ. “ವಿಪಕ್ಷ ಸದಸ್ಯರು  ಸರಕಾರವನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ. 1950 ನಂತರ ಮೊದಲ ಬಾರಿ? ಸಂಸತ್ತಿನ ಒಟ್ಟಾರೆ ಅವಧಿ ಅದೇ ಆಗಿರುವಾಗ ಪ್ರಶ್ನೋತ್ತರ ಅವಧಿಯ ರದ್ದೇಕೆ?'' ಎಂದು ಅವರು ಪ್ರಶ್ನಿಸಿದ್ದಾರೆ.

ಸಂಸದ ಶಶಿ ತರೂರ್ ಕೂಡ ಸರಕಾರದ ಕ್ರಮವನ್ನು ಪ್ರಶ್ನಿಸಿದ್ದರೆ ಕಾಂಗ್ರೆಸ್‍ನ ಅಧೀರ್ ರಂಜನ್ ಚೌಧುರಿ ಸರಕಾರದ ನಿರ್ಧಾರವನ್ನು ಖಂಡಿಸಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಶ್ನೋತ್ತರ ಅವಧಿ ಇದ್ದರೆ ಸಚಿವರುಗಳಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕಾಗುವುದರಿಂದ  ಇದರಿಂದ ಸಂಸತ್ತಿಗೆ ಕೋವಿಡ್ ಸಂದರ್ಭ  ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಸರಕಾರದ ಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಜಾಯಿಷಿ ನೀಡಿದ್ದಾರೆ.

ಸರಕಾರವನ್ನು ಪ್ರಶ್ನಿಸುವುದು ಸಂಸದೀಯ ಪ್ರಜಾಪ್ರಭುತ್ವದ ಆಮ್ಲಜನಕವಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯದ ಧ್ವನಿಯನ್ನಡಗಿಸಲು ಬಲಿಷ್ಠ ನಾಯಕರು ಕೋವಿಡ್ ಪಿಡುಗನ್ನು ಬಳಸಿಕೊಳ್ಳಲಿದ್ದಾರೆ ಎಂದು ನಾನು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ನಮ್ಮನ್ನು ಸುರಕ್ಷಿತರನ್ನಾಗಿಸಲು ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿರುವುದನ್ನು ಸಮರ್ಥಿಸುವುದು ಹೇಗೆ? ’ಎಂದು ಟ್ವೀಟಿಸಿದ್ದಾರೆ.

ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಲು ಕಾರಣಗಳೇ ಇಲ್ಲ ಎಂದು ಹೇಳಿದ ಕಾಂಗ್ರೆಸ್ ವಕ್ತಾರ ಅಭಿಷೇಕ ಮನು ಸಿಂಘ್ವಿ ಅವರು, ಪ್ರಶ್ನೋತ್ತರ ಅವಧಿಯನ್ನು ಕೈಬಿಡುವ ಮೂಲಕ ನಮ್ಮ ಸುರಕ್ಷತೆಯನ್ನು ಹೆಚ್ಚಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸುವುದು ಸದಸ್ಯರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರೆ,ಮೋದಿ ಸರಕಾರವು ಪ್ರತಿಪಕ್ಷಗಳ ಬಗ್ಗೆ ಭೀತಿಗೊಂಡಿದೆ ಮತ್ತು ಪ್ರಶ್ನೆಗಳನ್ನು ನಿವಾರಿಸಲು ಕೋವಿಡ್ ಬಿಕ್ಕಟ್ಟನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ ಉಲಕಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News