Breaking News: ‘ಪಬ್ ಜಿ ಮೊಬೈಲ್’ ಸೇರಿದಂತೆ 118 ಚೀನಾ ಆ್ಯಪ್ ಗಳನ್ನು ನಿಷೇಧಿಸಿದ ಕೇಂದ್ರ ಸರಕಾರ

Update: 2020-09-02 14:42 GMT

ಹೊಸದಿಲ್ಲಿ, ಸೆ.2: ಜನಪ್ರಿಯ ಗೇಮ್ ಆ್ಯಪ್ ಪಬ್‌ಜಿ ಮೊಬೈಲ್ ಸೇರಿದಂತೆ ಚೀನಾದ 118 ಆ್ಯಪ್‌ಗಳನ್ನು ಕೇಂದ್ರ ಸರಕಾರ ಬುಧವಾರ ನಿಷೇಧಿಸಿದೆ. ಭಾರತದ ಸಾರ್ವಭೌಮತೆ, ಸಮಗ್ರತೆ, ರಕ್ಷಣಾ ಕ್ಷೇತ್ರ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಗೆ ಹಾನಿಕಾರವಾದ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಈ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರದ ಇಲೆಕ್ಟ್ರಾನಿಕ್ಸ್, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹೇಳಿದೆ.

 ಈ ಉಪಕ್ರಮವು ಭಾರತದ ಕೋಟ್ಯಾಂತರ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆದಾರರ ಹಿತಾಸಕ್ತಿಯನ್ನು ರಕ್ಷಿಸುತ್ತದೆ. ಭಾರತದ ಸೈಬರ್‌ವಲಯದ ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುವ ಉದ್ದೇಶದ ನಿರ್ಧಾರ ಇದಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಆ್ಯಂಡ್ರಾಯ್ಡ್ ಮತ್ತು ಐಒಎಸ್ ವ್ಯವಸ್ಥೆ ಹೊಂದಿರುವ ಮೊಬೈಲ್‌ಗಳಲ್ಲಿ ಲಭ್ಯವಿರುವ ಆ್ಯಪ್‌ಗಳ ಮೂಲಕ ಬಳಕೆದಾರರ ಮಾಹಿತಿ ಕದ್ದು ಭಾರತದಿಂದ ಹೊರಗಿರುವ ಸರ್ವರ್‌ಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಭಾರತದ ಭದ್ರತೆ ಮತ್ತು ರಕ್ಷಣೆಗೆ ಪ್ರತಿಕೂಲವಾದ ಶಕ್ತಿಗಳಿಂದ ಈ ಮಾಹಿತಿಯ ಸಂಗ್ರಹಣೆ, ಪರಿಶೀಲನೆಯು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯ ಮೇಲೆ ಪ್ರಭಾವ ಬೀರುತ್ತದೆ. ಇದು ಅತ್ಯಂತ ಆತಂಕಕಾರಿ ವಿಷಯವಾಗಿದ್ದು ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿಕೆ ತಿಳಿಸಿದೆ.

ಈ ದುರುದ್ದೇಶಪೂರಿತ ಆ್ಯಪ್‌ಗಳನ್ನು ನಿಷೇಧಿಸಬೇಕೆಂದು ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ ಸಮಗ್ರ ಶಿಫಾರಸು ಸಲ್ಲಿಸಿದೆ. ಅಲ್ಲದೆ, ದೇಶದ ಸಂಸತ್ತಿನಲ್ಲಿ ಮತ್ತೆ ಸಂಸತ್ತಿನ ಹೊರಗೆ ಜನಪ್ರತಿನಿಧಿಗಳು ಇದೇ ರೀತಿಯ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದ ಸಮಗ್ರತೆ ಹಾಗೂ ಜನರ ಖಾಸಗಿತನಕ್ಕೆ ಧಕ್ಕೆ ತರುವ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರೂ ಆಗ್ರಹಿಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ, ಮತ್ತು ಈ ಆ್ಯಪ್‌ಗಳು ಮಾಹಿತಿಯನ್ನು ಅಕ್ರಮವಾಗಿ ವರ್ಗಾಯಿಸುವ ವಗ್ಗೆ ವಿಶ್ವಾಸಾರ್ಹ ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಆ್ಯಪ್‌ಗಳ ನಿಷೇಧಕ್ಕೆ ನಿರ್ಧರಿಸಲಾಗಿದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News