ಮಹಿಳಾ ಸೇನಾಧಿಕಾರಿಗಳ ಅಪೀಲು ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2020-09-03 09:38 GMT

ಹೊಸದಿಲ್ಲಿ: ಸೇನೆಯಲ್ಲಿ ಖಾಯಂ ನೇಮಕಾತಿಗಾಗಿ ಪರಿಗಣಿಸುವಂತಾಗಲು ಹಾಗೂ ಸೇವಾ ಸವಲತ್ತುಗಳಿಗೆ ಅರ್ಹರಾಗಲು ಇರುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಸೇನೆಯ ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅಪೀಲನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಈ ಅಂತಿಮ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ತಂದರೆ ಅದು ಭವಿಷ್ಯದ ಬ್ಯಾಚಿನ ಅಧಿಕಾರಿಗಳಿಗೆ ತೊಡಕುಂಟು ಮಾಡಬಹುದು ಎಂದೂ ನ್ಯಾಯಾಲಯ ಹೇಳಿದೆ.

ಈ ಹಿಂದೆ ಫೆಬ್ರವರಿಯಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಸೇನೆಯಲ್ಲಿ  ಮಹಿಳಾ ಅಧಿಕಾರಿಗಳು ಪುರುಷ ಅಧಿಕಾರಿಗಳಿಗೆ ಸಮನಾಗಿ ಕಮಾಂಡ್ ಹುದ್ದೆಗಳನ್ನು ಪಡೆಯಬಹುದು ಎಂದು ಹೇಳಿತ್ತಲ್ಲದೆ ಈ ಕುರಿತು ಕೇಂದ್ರ ಮಂಡಿಸಿದ ವಾದವನ್ನು ತಾರತಮ್ಯಕಾರಿ ಎಂದು ತಿರಸ್ಕರಿಸಿತ್ತು. ಈ ಫೆಬ್ರವರಿ ತೀರ್ಪಿನಂತೆ ಶಾರ್ಟ್ ಸರ್ವಿಸ್ ಕಮಿಷನ್‍ನಲ್ಲಿ 14 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಮಹಿಳಾ ಅಧಿಕಾರಿಗಳು ಖಾಯಂ ಆಯೊಗ ಪಡೆಯಲು ವಿಫಲರಾಗಿದ್ದಲ್ಲಿ ಅವರು ಇನ್ನೂ 20 ವರ್ಷ ಸೇವೆ ಸಲ್ಲಿಸುವ ಅವಕಾಶ ಪಡೆಯಲಿದ್ದಾರೆಂದು ಹೇಳಿತ್ತು.

ಆದರೆ 14 ವರ್ಷ ಸೇವೆ ಪೂರ್ಣಗೊಳಿಸದೆ ಅದಕ್ಕಿಂತ ಒಂದು ತಿಂಗಳು ಕಡಿಮೆ ಸೇವೆ ಸಲ್ಲಿಸಿದ್ದ ಮಹಿಳಾ ಸೇನಾಧಿಕಾರಿಗಳು ತಮಗೂ 20 ವರ್ಷ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ಅಪೀಲು ಸಲ್ಲಿಸಿದ್ದರು. ಈ ಅಪೀಲನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.

ಫೆಬ್ರವರಿಯ ಕೋರ್ಟ್ ತೀರ್ಪಿನಂತೆ  ಸರಕಾರದ ಆದೇಶ ಜುಲೈ ತಿಂಗಳಲ್ಲಿ ಹೊರಬಿದ್ದಿದ್ದರಿಂದ ಈ ಮಹಿಳಾ ಅಧಿಕಾರಿಗಳ ಕೋರಿಕೆ ಮನ್ನಿಸಬೇಕೆಂದು  ಅವರ ಪರ ವಕೀಲೆ ಮೀನಾಕ್ಷಿ ಲೇಖಿ ಆಗ್ರಹಿಸಿದ್ದರು. ಆದರೆ ಸುಪ್ರೀಂ ಕೋರ್ಟ್‍ನ ಫೆಬ್ರವತಿ ತೀರ್ಪು ಹೊರಬಿದ್ದ ದಿನದಂದು 14 ವರ್ಷ ಸೇವೆ ಪೂರೈಸಿದವರು ಮಾತ್ರ ಪಿಂಚಣಿ ಮತ್ತು ಖಾಯಂ ಆಯೋಗದ ಸವಲತ್ತಿಗೆ ಅರ್ಹರು ಎಂದು ಜಸ್ಟಿಸ್   ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News