ಕೋವಿಡ್ ಗೆ ಬಲಿಯಾಗುತ್ತಿರುವವರ ಸಂಖ್ಯೆ ದೇಶಕ್ಕಿಂತ ರಾಜ್ಯದಲ್ಲೇ ಅಧಿಕ: ಎಚ್.ಕೆ.ಪಾಟೀಲ್

Update: 2020-09-03 17:39 GMT

ಬೆಂಗಳೂರು, ಸೆ.3: ಕರ್ನಾಟಕದಲ್ಲಿ ಕೊರೋನ ಅಟ್ಟಹಾಸ ಜೋರಾಗಿದೆ. ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಈ ಪ್ರಮಾಣ ತುಂಬಾ ಹೆಚ್ಚಿದೆ. ಇದರ ನಿಯಂತ್ರಣಕ್ಕೆ ಸರಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವೈದ್ಯಕೀಯ ಶಿಕ್ಷಣ ಸಚಿವರೇ ಸಾವಿನ ಅಂಕಿ-ಸಂಖ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಭಾರತದಲ್ಲಿ ಸಾವಿನ ಸಂಖ್ಯೆ ದಶಲಕ್ಷಕ್ಕೆ 42. ಕರ್ನಾಟಕದಲ್ಲಿ ದಶಲಕ್ಷಕ್ಕೆ 83 ಇದೆ. ನೆನಪಿರಲಿ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಜನವರಿಯಿಂದ ಜುಲೈವರೆಗೆ ಶೇ.32ರಷ್ಟು ಹೆಚ್ಚಳ ಕಂಡಿದೆ ಎಂದವರು ತಿಳಿಸಿದ್ದಾರೆ.

ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡಿ ಸಮರ್ಥನೆಗಳನ್ನು ಮಾಡಿಕೊಳ್ಳುವ ನಿಮ್ಮ ಪ್ರಯತ್ನ. ಸಂಕಷ್ಟದ ಈ ಕಾಲದಲ್ಲಿ ಆಘಾತಕಾರಿ ಸತ್ಯವಾದ ಮಾಹಿತಿ ಜನರ ಜೊತೆಗೆ ಹಂಚಿಕೊಳ್ಳಿ, ಕೊರತೆಗಳನ್ನು ನೀಗಿಸಲು ಯುದ್ದೋಪಾದಿಯಲ್ಲಿ ಕೆಲಸ ಮಾಡಲು ಆಡಳಿತ ಯಂತ್ರ ಚುರುಕುಗೊಳಿಸಿ ಎಂದು ಮಾಜಿ ಸಚಿವರೂ ಆಗಿರುವ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಎಚ್.ಕೆ.ಪಾಟೀಲ್ ಟ್ವೀಟ್‍ಗೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಎಚ್.ಕೆ.ಪಾಟೀಲ್ ಅವರೆ, ತಾವು ಹಿರಿಯರಿದ್ದೀರಿ. ವಾಸ್ತವಾಂಶ ಅರಿಯದೆ ಜನರ ದಿಕ್ಕು ತಪ್ಪಿಸುವ ಹೇಳಿಕೆ ಕೊಡುವುದು ನಿಮಗೆ ಶೋಭೆ ತರುವುದಿಲ್ಲ. ಕರ್ನಾಟಕದ ಕೋವಿಡ್ ಮರಣ ಪ್ರಮಾಣ ಶೇ.1.64 ಮತ್ತು ಬೆಂಗಳೂರಿನ ಕೋವಿಡ್ ಮರಣ ಪ್ರಮಾಣ ಶೇ.1.50ರಷ್ಟಿದ್ದು ರಾಷ್ಟ್ರೀಯ ಮರಣ ಪ್ರಮಾಣಕ್ಕಿಂತ ಶೇ.1.76ರಷ್ಟು ಕಡಿಮೆಯಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಗಣನೀಯ ಸುಧಾರಣೆ ಕಂಡಿದೆ. ಜುಲೈ ತಿಂಗಳಲ್ಲಿ ಶೇ.1.85ರಷ್ಟಿದ್ದ ಮರಣ ಪ್ರಮಾಣ ಶೇ.1.50ಕ್ಕೆ ಇಳಿಕೆಯಾಗಿದೆ. ಜುಲೈ ತಿಂಗಳಲ್ಲಿ ಶೇ.24 ಇದ್ದ ಪಾಸಿಟಿವಿಟಿ ದರ ಶೇ.14.74ಕ್ಕೆ ಇಳಿಕೆಯಾಗಿದೆ. ಜುಲಯ ಆರಂಭದಲ್ಲಿ ಪ್ರತಿ ದಿನ ನಡೆಸುತ್ತಿದ್ದ 4000 ಟೆಸ್ಟಿಂಗ್ ಸಂಖ್ಯೆ ಈಗ 25000ಕ್ಕೆ ಏರಿಕೆಯಾಗಿದೆ ಎಂದು ಸುಧಾಕರ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News