ಅನಧಿಕೃತ ಟ್ಯೂಷನ್ ವಿರುದ್ಧ ಕ್ರಮ ಕೈಗೊಳ್ಳಿ: ರಮೇಶ್ ಗೌಡ

Update: 2020-09-03 12:45 GMT

ಬೆಂಗಳೂರು, ಸೆ.3: ಶಿಕ್ಷಣ ಇಲಾಖೆಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ, ಅನಧಿಕೃತವಾಗಿ ಖಾಸಗಿ ಟ್ಯೂಷನ್(ಮನೆಪಾಠ) ನಡೆಸಿ, ಪೋಷಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯ ಎಚ್.ಎಂ.ರಮೇಶ್ ಗೌಡ ಆಗ್ರಹಿಸಿದ್ದಾರೆ.

ಗುರುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಧಿಕೃತ ಟ್ಯೂಷನ್‍ಗಳು ರಾಜ್ಯವಾಪ್ತಿಯಲ್ಲಿ ನಡೆದಿದ್ದು, ಖಾಸಗಿ ವ್ಯಕ್ತಿಗಳು ಇದನ್ನು ನಿಯಂತ್ರಿಸುತ್ತಿದ್ದಾರೆ. ಮುಖ್ಯವಾಗಿ ಈ ದಂಧೆಕೋರರು ಯಾವುದೇ ಅನುಮತಿ ಪಡೆದಿಲ್ಲ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕೆಲ ಬಂಡವಾಳಗಾರರು ಫ್ರಾಂಚೈಸಿ ಪಡೆದುಕೊಂಡು ರಾಜ್ಯದ ಪ್ರಮುಖ ನಗರಗಳಲ್ಲಿ ಹೈ ಸ್ಕೂಲ್‍ಗಳನ್ನು ತೆರೆದು ಮನಸೋ ಇಚ್ಛೆ ಶುಲ್ಕಗಳನ್ನು ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಯುತ್ತಿದೆ. ಮತ್ತೊಂದೆಡೆ ಪ್ಲೇ ಸ್ಕೂಲ್, ಕಿಡ್ಸ್ ಯೂರೋ ಕಿಡ್ಸ್ ಹೀಗೆ ಹಲವು ಮಾದರಿಯ ಕಾರ್ಪೋರೇಟ್ ಕಂಪೆನಿಗಳು ಹೊರ ರಾಜ್ಯಗಳಲ್ಲಿ ಮುಖ್ಯ ಕಚೇರಿಗಳನ್ನು ತೆರೆದು, ಕರ್ನಾಟಕದಲ್ಲಿ ಅಕ್ರಮವಾಗಿ ಟ್ಯೂಷನ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮನೆ ಪಾಠ ಹೆಸರಿನಲ್ಲಿ ದಂಧೆಯಲ್ಲಿ ಕೆಲ ಖಾಸಗಿ ಮತ್ತು ಸರಕಾರಿ ಶಿಕ್ಷಕರು, ತಜ್ಞರು ಕೈಜೋಡಿಸಿರುವ ಅನುಮಾನ ಇದ್ದು, ಈ ಬಗ್ಗೆ ಸೂಕ್ತ ರೀತಿ ಕ್ರಮ ಕೈಗೊಳ್ಳಬೇಕು. ಜೊತೆಗೆ, ಪೋಷಕರಲ್ಲಿ ಇದರ ಬಗ್ಗೆ ಜಾಗೃತಿಯೂ ಮೂಡಿಸಬೇಕಾಗಿದೆ ಎಂದು ರಮೇಶ್ ಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News