ಬೆಂಗಳೂರು ಹಿಂಸಾಚಾರ: ಬಂಧಿತರ ಮಾಹಿತಿ ಬಹಿರಂಗದ ಬಗ್ಗೆ ವಿವರಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-09-03 12:52 GMT

ಬೆಂಗಳೂರು, ಸೆ.3: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಲ್ಲರ ಮಾಹಿತಿಯನ್ನು ಸಿಆರ್‍ಪಿಸಿ ಸೆಕ್ಷನ್ 41-ಸಿ ಅನ್ವಯ ಬಹಿರಂಗಪಡಿಸಬೇಕೆಂದು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಜುನೈದ್ ಅಹಮದ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸಿಆರ್‍ಪಿಸಿ 41-ಸಿ ಅನ್ವಯ ಬಂಧಿತರು ಮತ್ತು ಬಂಧನ ಕಾರ್ಯಾಚರಣೆ ನಡೆಸಿದ ಪೊಲೀಸರ ವಿವರವನ್ನು ಎಲ್ಲ ಪೊಲೀಸ್ ನಿಯಂತ್ರಣಾ ಕೊಠಡಿಗಳ ಫಲಕಗಳಲ್ಲಿ ಪ್ರದರ್ಶಿಸಬೇಕೆಂದು ಅರ್ಜಿದಾರರು ಹೇಳಿದ್ದಾರೆ.

ಯಾಕೆ ಬಂಧಿಸಲಾಗಿದೆ. ಎಷ್ಟು ಜನರನ್ನು ಬಂಧಿಸಲಾಗಿದೆ. ಅದಕ್ಕೆ ಕಾರಣ ಏನು ಎಂಬ ಮಾಹಿತಿಯನ್ನು ಎಲ್ಲ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಪ್ರದರ್ಶಿಸಬೇಕು. ಮಾಹಿತಿ ಕಲೆ ಹಾಕಲು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದಾಗ ಎಲ್ಲಿಯೂ ಈ ವಿವರ ಕಾಣಿಸಲಿಲ್ಲ ಎಂದು ಪೀಠಕ್ಕೆ ತಿಳಿಸಿದ್ದಾರೆ.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಈ ಸೆಕ್ಷನ್‍ಗೆ ಅನುಗುಣವಾಗಿ ಎಲ್ಲ ವಿವರಗಳನ್ನು ಅಳವಡಿಸಲಾಗಿದೆಯೇ ಎಂಬುದರ ಬಗ್ಗೆ ಸೆ.11ರಂದು ವಿವರ ಸಲ್ಲಿಸಬೇಕೆಂದು ಸರಕಾರಕ್ಕೆ ಪೀಠ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News