ಮಳೆ-ಪ್ರವಾಹ ನಷ್ಟ ಅಧ್ಯಯನಕ್ಕೆ ಸೆ.7ಕ್ಕೆ ಕೇಂದ್ರದ ತಂಡ ಆಗಮನ: ಸಚಿವ ಆರ್.ಅಶೋಕ್

Update: 2020-09-03 13:21 GMT

ಬೆಂಗಳೂರು, ಸೆ. 3: ರಾಜ್ಯದಲ್ಲಿನ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಗಿರುವ ನಷ್ಟದ ಪರಿಶೀಲನೆಗೆ ಕೇಂದ್ರದ ಅಧ್ಯಯನ ತಂಡ ಸೆ.7ರಂದು ರಾಜ್ಯಕ್ಕೆ ಆಗಮಿಸಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಹಿರಿಯ ಅಧಿಕಾರಿ ಕೆ.ವಿ.ಪ್ರತಾಪ್ ನೇತೃತ್ವದ ಆರು ಮಂದಿಯ ತಂಡ ಕರ್ನಾಟಕಕ್ಕೆ ಆಗಮಿಸಲಿದ್ದು, ಸಿಎಂ ಜತೆ ಸಮಾಲೋಚನೆ ನಡೆಸಲಿದೆ. ಸೆ.8ಕ್ಕೆ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಿದೆ. ಸೆ.9ಕ್ಕೆ ಕೇಂದ್ರದ ತಂಡ ರಾಜ್ಯದ ಸಚಿವರೊಂದಿಗೆ ಚರ್ಚಿಸಲಿದೆ ಎಂದರು.

ರಾಜ್ಯ ಸರಕಾರ ಈಗಾಗಲೇ 4,800 ಕೋಟಿ ರೂ. ಪರಿಹಾರ ಮೊತ್ತ ಬಿಡುಗಡೆ ಮನವಿ ಸಲ್ಲಿಸಲು ನಿರ್ಧರಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರು ವೈಮಾನಿಕ ಸಮೀಕ್ಷೆ ನಡೆಸಿದ್ದು ಕೇಂದ್ರದ ಅಧ್ಯಯನ ತಂಡ ರವಾನಿಸಲು ಮನವಿ ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಧ್ಯಯನ ತಂಡವನ್ನು ರವಾನಿಸಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಕೊಡಗು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಮಳೆ ಮತ್ತು ಪ್ರವಾಸದಿಂದ ಆಗಿರುವ ಹಾನಿಯ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದ ಅವರು, ಈಗಾಗಲೇ ಕೇಂದ್ರ ಸರಕಾರ ರಾಜ್ಯದ ಮನವಿಗೆ ಸ್ಪಂದಿಸಿ 395 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News