ವೇಗ ಕಳೆದುಕೊಂಡ ಗ್ರಾಮೀಣ ಆರ್ಥಿಕತೆ, ನಿರುದ್ಯೋಗ ಹೆಚ್ಚಳ: ಭಾರತೀಯ ಸ್ಟೇಟ್ ಬ್ಯಾಂಕ್‌ ವರದಿ

Update: 2020-09-03 17:10 GMT

    ಹೊಸದಿಲ್ಲಿ, ಸೆ.3: ಕೊರೋನ ಸಾಂಕ್ರಾಮಿಕದ ಹಾವಳಿಯ ಆರಂಭದ ಕೆಲವು ತಿಂಗಳುಗಳಲ್ಲಿ ಚೇತರಿಸಿಕೊಂಡಿದ್ದ ಭಾರತದ ಗ್ರಾಮೀಣ ಆರ್ಥಿಕತೆಯು ತನ್ನ ವೇಗವನ್ನು ಕಳೆದುಕೊಳ್ಳುತ್ತಿದೆಯೆಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ಆಗಸ್ಟ್ ತಿಂಗಳ ನಂತರ ಗ್ರಾಮೀಣ ನಿರುದ್ಯೋಗ ಪ್ರಮಾಣವು ಹೆಚ್ಚಲು ಶುರುವಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಾಗುವ ಉದ್ಯೋಗ ಹಾಗೂ ಸರಾಸರಿ ವೇತನದಲ್ಲಿಯೂ ಇಳಿಕೆಯುಂಟಾಗಿದೆಯೆಂದು ಗುರುವಾರ ಪ್ರಕಟವಾದ ಈ ವರದಿ ಹೇಳಿದೆ.

   12 ರಾಜ್ಯಗಳಲ್ಲಿ, ಅವುಗಳ ಒಟ್ಟು ಆಂತರಿಕ ಉತ್ಪಾದನೆ (ಜಿಎಸ್‌ಡಿಪಿ)ಯಲ್ಲಿ ಉಂಟಾಗಿರುವ ಎರಡನೆ ಮೂರಂಶದಷ್ಟು ನಷ್ಟವು ಗ್ರಾಮೀಣ ಪ್ರದೇಶಗಳಿಂದಾಗಿವೆ ಎಂದು ಅದು ಗಮನಸೆಳೆದಿದೆ.

ಚತ್ತೀಸ್‌ಗಢ, ಅಸ್ಸಾಂ, ಹಿಮಾಚಲಪ್ರದೇಶ, ಬಿಹಾರ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಉಂಟಾಗಿರುವ ಜಿಎಸ್‌ಡಿಪಿ ನಷ್ಟದಲ್ಲಿ ಗ್ರಾಮೀಣ ಪ್ರದೇಶಗಳ ಪಾಲು ಗಣನೀಯವಾಗಿದೆ ಎಂದು ವರದಿ ತಿಳಿಸಿದೆ.

ಇವುಗಳ ಪೈಕಿ ಚತ್ತೀಸ್‌ಗಢ ಅಸ್ಸಾಂ ಹಾಗೂ ಹಿಮಾಚಲ ಪ್ರದೇಶಗಳ ಜಿಎಸ್‌ಡಿಯ ಶೇ.90ರಷ್ಟು ನಷ್ಟ ಗ್ರಾಮೀಣ ಪ್ರದೇಶಗಳಿಂದಾಗಿವೆ. ಕೋವಿಡ್-19 ಹಾವಳಿ ಮತ್ತು ಈ ಸಾಂಕ್ರಾಮಿಕ ರೋಗದ ತಡೆಗೆ ಹೇರಲಾದ ಲಾಕ್‌ಡೌನ್ ನಿರ್ಬಂಧಗಳಿಂದ ತತ್ತರಿಸಿರುವ ಭಾತದ ಆರ್ಥಿಕತೆಗೆ ಕೃಷಿ ಹಾಗೂ ಗ್ರಾಮೀಣ ಬೇಡಿಕೆಯು ಚೇತರಿಕೆ ನೀಡಬಹುದೆಂಬ ನಿರೀಕ್ಷೆ ವ್ಯಕ್ತವಾಗಿರುವ ಸಂದರ್ಭದಲ್ಲಿಯೇ ಈ ವರದಿ ಬಿಡುಗಡೆಯಾಗಿದೆ.

  ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ.3.4ರಷ್ಟು ಧನಾತ್ಮಕ ಬೆಳವಣಿಗೆಯಾಗಿತ್ತು. ಆದರೆ, ಇದೇ ಅವಧಿಯಲ್ಲಿ ಕಟ್ಟಡ ನಿರ್ಮಾಣ, ಉತ್ಪಾದನೆ, ಹೊಟೇಲ್‌ಗಳು ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.50, ಶೇ.39 ಹಾಗೂ ಶೇ.47 ಕುಸಿತವುಂಟಾಗಿತ್ತು.

 ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ತಿಂಗಳು ಬಿಡುಗಡೆಗೊಳಿಸಿದ ವಾರ್ಷಿಕ ವರದಿಯಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನ್ ಹಾಗೂ ನರೇಗಾ ಯೋಜನೆಯ ವೇತನ ಹೆಚ್ಚಳವು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲಿದೆಯೆಂಬ ಭರವಸೆ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News