ದಿಲ್ಲಿ ಗಲಭೆ: ‘ಪೊಲೀಸರು ಪಿತೂರಿಯ ತನಿಖೆ ನಡೆಸುತ್ತಾರೋ ಅಥವಾ ತನಿಖೆಯೇ ಪಿತೂರಿಯೇ ?’

Update: 2020-09-05 17:27 GMT

ಹೊಸದಿಲ್ಲಿ, ಸೆ. 5: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರನ್ನು ದಿಲ್ಲಿ ಗಲಭೆಯ ಸೂತ್ರಧಾರಿಗಳು ಎಂದು ತಪ್ಪಾಗಿ ಬಿಂಬಿಸಲು ದಿಲ್ಲಿ ಪೊಲೀಸರು ನಿರಂತರ ಪ್ರಯತ್ನಿಸುತ್ತಿದ್ದಾರೆ ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಅಪೂರ್ವಾನಂದ, ಹೋರಾಟಗಾರ ಹಾಗೂ ಲೇಖಕ ಹರ್ಷ ಮಂದರ್, ಹೋರಾಟಗಾರ ಹಾಗೂ ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷ ಯೋಗೇಂದ್ರ ಯಾದವ್ ಜೆಎನ್‌ಯು ಮಾಜಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಹಾಗೂ ದಿಲ್ಲಿ ಎಐಎಸ್‌ಎಯ ಅಧ್ಯಕ್ಷ ಹಾಗೂ ವಿದ್ಯಾರ್ಥಿ ಹೋರಾಟಗಾರ ಕಾವಲ್‌ಪ್ರೀತ್ ಕೌರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ದಿಲ್ಲಿಯ ಈಶಾನ್ಯ ವಲಯದಲ್ಲಿ ಫೆಬ್ರವರಿಯಲ್ಲಿ ಕೋಮು ಗಲಭೆ ಸಂಭವಿಸಿದ ಬಳಿಕ, ಈ ಗಲಭೆಗೆ ಸಂಬಂಧಿಸಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಹಲವು ವಿದ್ಯಾರ್ಥಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದವರು ಹಾಗೂ ಹೋರಾಟದ ಬೆಂಬಲಿಗರಿಗೆ ಪೊಲೀಸರು ಕಳೆದ ಆರು ತಿಂಗಳಿಂದ ನಿರಂತರ ಸಮನ್ಸ್ ಕಳುಹಿಸುತ್ತಿದ್ದಾರೆ. ಅಲ್ಲದೆ, ಅವರನ್ನು ನಿರಂತರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಹಾಗೂ ಕಿರುಕುಳ ನೀಡುತ್ತಿದ್ದಾರೆ. ಯಾವುದೇ ಅಧಿಕೃತ ಆರೋಪವನ್ನು ರೂಪಿಸದೇ ಇದ್ದರೂ ಕಠಿಣ ಭಯೋತ್ಪಾದನಾ ವಿರೋಧಿ ಕಾಯ್ದೆ ಯುಎಪಿಎ ಅಡಿಯಲ್ಲಿ ಹಲವು ಯುವ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳು ಕಳೆದ ಆರು ತಿಂಗಳಿಂದ ಕಾರಾಗೃಹದಲ್ಲಿ ಕೊಳೆಯುತ್ತಿರುವುದು ಮುಂದುವರಿದಿದೆ ಎಂದು ಈ ಹೋರಾಟಗಾರರು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರು ಇತರ ಹೋರಾಟಗಾರರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಉಮರ್ ಖಾಲಿದ್ ಅವರ ಪತ್ರ ಹಾಗೂ ‘ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿಯನ್ನು ಉಲ್ಲೇಖಿಸಿ ಅಪೂರ್ವಾನಂದ ಹೇಳಿದ್ದಾರೆ.

 53 ಜನರ ಸಾವಿಗೆ ಕಾರಣವಾಗಿದ್ದ ದಿಲ್ಲಿ ಹಿಂಸಾಚಾರದ ತನಿಖೆ ತಪ್ಪು ಹಾದಿಯಲ್ಲಿ ಸಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿರುವುದೇ ಅಪರಾಧ ಎಂಬಂತೆ ಅದರಲ್ಲಿ ಪಾಲ್ಗೊಂಡವರ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಅವರು ಇತ್ತೀಚೆಗೆ ಬಿಡುಗಡೆಯಾದ ಆ್ಯಮ್ನೆಸ್ಟಿ ವರದಿ ಹಾಗೂ ದಿಲ್ಲಿ ಗಲಭೆ ಕುರಿತು ಪೋಲಿಸ್ ಯೋಜನೆ ವರದಿಯನ್ನು ಉಲ್ಲೇಖಿಸಿದ್ದಾರೆ.

ಉಮರ್ ಖಾಲಿದ್ ಅವರ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಅವರ ವಿರುದ್ಧ ಸಾಬೀತುಪಡಿಸಲು ಸಾಧ್ಯವಾಗದ ವಿಷಯ (ಜೆಎನ್‌ಯು ರಾಷ್ಟ್ರದ್ರೋಹ ಆರೋಪ)ಗಳ ಆರೋಪ ಹೊರಿಸಿದ್ದ ಅದೇ ಸರಕಾರ ಈಗ ಕೂಡ ಆರೋಪ ಮಾಡುತ್ತಿದೆ ಎಂದರು. ಭೀಮಾ ಕೋರೆಗಾಂವ್ ತನಿಖೆಯನ್ನು ಉಲ್ಲೇಖಿಸಿದ ಅಪೂರ್ವಾನಂದ “ದಲಿತರಿಗೆ ಥಳಿಸಿದ್ದ ನಿಜವಾದ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ” ಎಂದಿದ್ದಾರೆ. ಗಲಭೆಗೆ ಉತ್ತೇಜನ ನೀಡಿದ ಆರೋಪದಲ್ಲಿ ಯುಎಪಿಎ ಅಡಿ ಉಮರ್ ಖಾಲಿದ್ ವಿರುದ್ಧ ಪ್ರಕರಣ ದಾಖಲಿಸಿರುವ ದಿಲ್ಲಿ ಪೊಲೀಸ್ ಕ್ರೈಮ್ ಬ್ರಾಂಚ್ ಬುಧವಾರ ಅವರಿಗೆ ಸಮನ್ಸ್ ನೀಡಿ ಕರೆದು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

‘‘ದಿಲ್ಲಿ ಪೊಲೀಸರ ತನಿಖೆ ಸ್ಕ್ರಿಪ್ಟ್ ಮಾಡಿರುವಂತದ್ದು. ಸಿಎಎ/ಎನ್‌ಆರ್‌ಸಿ/ಎನ್‌ಪಿಆರ್ ವಿರುದ್ಧದ ನಮ್ಮ ಹೋರಾಟ ಗುಪ್ತವಾಗಿತ್ತೇ ? ಅದು ಸಾರ್ವಜನಿಕ ಪ್ರತಿಭಟನೆ ಆಗಿತ್ತು. ಈ ಪ್ರತಿಭಟನೆ ಹಿಂಸಾಚಾರಕ್ಕೆ ಯಾವ ರೀತಿಯಲ್ಲಿ ಉತ್ತೇಜನ ನೀಡಿತ್ತು ಎಂದು ನಾವು ದಿಲ್ಲಿ ಪೊಲೀಸರಲ್ಲಿ ಪ್ರಶ್ನಿಸಲು ಬಯಸುತ್ತೇವೆ’’ ಎಂದು ಯೋಗಾನಂದ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆದ ಎರಡು ಪ್ರಮುಖ ಸ್ಥಳವಾದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಹಾಗೂ ಶಾಹೀನ್‌ಬಾಗ್‌ನಲ್ಲಿ ಜನವರಿ 29 ಹಾಗೂ ಫೆಬ್ರವರಿ 1ರಂದು ಗುಂಡು ಹಾರಿಸಿದ ಘಟನೆಗಳನ್ನು ಉಲ್ಲೇಖಿಸಿದ ಅವರು, ‘‘ಫೆಬ್ರವರಿ 27ರಂದು ಭಾಷಣ ಮಾಡಿದ ಅನುರಾಗ್ ಠಾಕೂರ್, ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ ಎಂದು ಹೇಳಿದ್ದರು. ಈ ಎರಡು ಘಟನೆಗಳ ನಡುವೆ ನಂಟು ಇಲ್ಲವೇ ?’’ ಎಂದು ಪ್ರಶ್ನಿಸಿದ್ದಾರೆ.

ದಿಲ್ಲಿ ಗಲಭೆ ಬಗ್ಗೆ ದಿಲ್ಲಿ ಪೊಲೀಸರು ನಡೆಸಿದ ತನಿಖೆ ಕುರಿತು ಮಾತನಾಡಿದ ಲೇಖಕ ಹಾಗೂ ಹೋರಾಟಗಾರ ಹರ್ಷ ಮಂದರ್, ದಿಲ್ಲಿ ಗಲಭೆಯ ಹಿಂದೆ ಪಿತೂರಿ ಇದೆ ಎಂಬುದು ದಿಲ್ಲಿ ಪೊಲೀಸರ ನಂಬಿಕೆ. ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ನಿಜವಾದ ಪಿತೂರಿ ದಿಲ್ಲಿ ಪೊಲೀಸರು ಪ್ರಚಾರ ಮಾಡುತ್ತಿರುವುದಕ್ಕಿಂತ ಭಿನ್ನವಾಗಿದೆ ಎಂದಿದ್ದಾರೆ.

‘‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ಗುರಿಯಾಗಿರಿಸಿ ಹಿರಿಯ ರಾಜಕೀಯ ನಾಯಕರು ಮಾಡಿದ ಭಾಷಣ ದಿಲ್ಲಿ ಚುನಾವಣೆ ಸಂದರ್ಭ ದ್ವೇಷದ ವಾತಾವರಣವನ್ನು ಸೃಷ್ಟಿಸಿರುವುದನ್ನು ನಾವು ನೋಡಿದ್ದೇವೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೋಮ ದ್ವೇಷವನ್ನು ಹರಡಿಸಿರುವುದು ಈ ಹಿಂದಿನ ಯಾವ ಚುನಾವಣೆಯಲ್ಲೂ ನಾನು ನೋಡಿಲ್ಲ’’

ಹರ್ಷ ಮಂದರ್, ಲೇಖಕ ಹಾಗೂ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News