ಇ-ಚಿಪ್‌ಗಳನ್ನು ಬಳಸಿ ಗ್ರಾಹಕರಿಗೆ ಕಡಿಮೆ ಇಂಧನ ಪೂರೈಸುತ್ತಿದ್ದ 33 ಪೆಟ್ರೋಲ್ ಪಂಪ್‌ಗಳಿಗೆ ಬೀಗಮುದ್ರೆ

Update: 2020-09-06 06:19 GMT

  ಹೈದರಾಬಾದ್, ಸೆ.6: ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಪೂರೈಸುವ ಯಂತ್ರಗಳಲ್ಲಿ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಬಳಸಿ ಗ್ರಾಹಕರಿಗೆ ವಂಚಿಸುತ್ತಿದ್ದ ಅಂತರ್‌ರಾಜ್ಯ ಗ್ಯಾಂಗ್‌ನ್ನು ಪತ್ತೆಹಚ್ಚಿರುವ ಅಧಿಕಾರಿಗಳು ತೆಲಂಗಾಣ ಹಾಗೂ ಆಂಧ್ರಪ್ರದೇಶದ 33 ಪೆಟ್ರೋಲ್ ಪಂಪ್‌ಗಳಿಗೆ ಬೀಗಮುದ್ರೆ ಹಾಕಿದ್ದಾರೆ.

 ಪೊಲೀಸರು ಹಾಗೂ ಮಾಪನಶಾಸ್ತ್ರ ವಿಭಾಗ ಜಂಟಿಯಾಗಿ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ದಾಳಿ ನಡೆಸಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಭರ್ತಿ ಬೋರ್ಡ್‌ನಲ್ಲಿ ಪ್ರದರ್ಶಿಸುವುದಕ್ಕಿಂತ ಕಡಿಮೆ ಇಂಧನ ವಿಸರ್ಜನೆಯಾಗಲು ಸಂಯೋಜಿತ ಚಿಪ್‌ಗಳನ್ನು ಇಂಧನ ಭರ್ತಿ ಮಾಡುವ ಯಂತ್ರಗಳಲ್ಲಿ ಅಳವಡಿಸಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಪೆಟ್ರೋಲ್ ಪಂಪ್‌ಗಳಲ್ಲಿ ಪ್ರತಿ 1000 ಎಮ್‌ಎಲ್ ಪೆಟ್ರೋಲ್ ಅಥವಾ ಡಿಸೇಲ್‌ನಲ್ಲಿ 970 ಎಮ್‌ಎಲ್ ಮಾತ್ರ ವಾಹನಗಳಿಗೆ ಭರ್ತಿಯಾಗುತ್ತಿತ್ತು. ಇಂಧನ ಕೇಂದ್ರಗಳ ಪೈಕಿ ಭಾರತೀಯ ತೈಲ ಕಾರ್ಪೊರೇಶನ್ ಲಿಮಿಟೆಡ್‌ಗೆ ಸೇರಿರುವ 17 ಪಂಪ್‌ಗಳು ಆಂಧ್ರದಲ್ಲಿ ಹಾಗೂ 5 ಪಂಪ್‌ಗಳು ತೆಲಂಗಾಣದಲ್ಲಿವೆ. ಭಾರತೀಯ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ನ 9 ಪಂಪ್‌ಗಳು, ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ನ 2 ಪಂಪ್‌ಗಳಲ್ಲಿ ಇಂಧನ ಪೂರೈಕೆಯಲ್ಲಿ ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರಾಬಾದ್ ಪೊಲೀಸ್ ಕಮೀಶನರ್ ವಿ.ಸಿ.ಸಜ್ಜ್ಜನರ್ ಶನಿವಾರ ಅಂತರ್‌ರಾಜ್ಯ ಗ್ಯಾಂಗ್ ಬಂಧನ ಕುರಿತು ಪ್ರಕಟಿಸಿದರು. ಸಾಫ್ಟ್‌ವೇರ್‌ಗಳನ್ನೊಳಗೊಂಡ ಸಂಯೋಜಿತ ಚಿಪ್‌ಗಳನ್ನು ಪೆಟ್ರೋಲ್ ಪಂಪ್‌ಗಳ ಮಾಲೀಕರುಗಳ ಸಂಪರ್ಕ ಸಾಧಿಸಿ ಅಳವಡಿಸಲಾಗಿತ್ತು. ಇದರಿಂದ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸಜ್ಜನರ್ ಹೇಳಿದ್ದಾರೆ.

ಸೈಬರಾಬಾದ್ ಹಾಗೂ ನಂದಿಗಾಮ ಪೊಲೀಸರು ಸುಭಾನಿ ಬಾಷಾನನ್ನು ಬಂಧಿಸಿದ್ದು, ಆತನಿಂದ 14 ಐಸಿಗಳನ್ನು, 8 ಡಿಸ್‌ಪ್ಲೇಗಳು, 3 ಜಿಬಿಆರ್ ಕೇಬಲ್‌ಗಳು,1 ಮದರ್ ಬೋರ್ಡ್ ಹಾಗೂ 1 ಹುಂಡೈ ಐ20 ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಬಾಷಾ, ಬಬ್ಜಿ ಬಾಬಾ ಎಮ್.ಶಂಕರ್ ಹಾಗೂ ಮಲ್ಲೇಶ್ವರ್ ರಾವ್ ಆಂಧ್ರಪ್ರದೇಶದ ಇಲೂರು ನಗರದವರಾಗಿದ್ದಾರೆ.

ಎರಡೂ ರಾಜ್ಯಗಳ ವಿವಿಧ ಪೆಟ್ರೋಲ್ ಪಂಪ್‌ಗಳ 9 ಮಾಲಕರುಗಳನ್ನು ಬಂಧಿಸಲಾಗಿದ್ದು ಇತರ 5 ಮಾಲಕರುಗಳು ತಲೆಮರೆಸಿಕೊಂಡಿದ್ದಾರೆ. ಮುಂಬೈನಿಂದ ಎಲೆಕ್ಟ್ರಾನಿಕ್ ಚಿಪ್ ಹಾಗೂ ಉಪಕರಣಗಳನ್ನು ಪೂರೈಸುತ್ತಿದ್ದ ಜೋಸೆಫ್ ಹಾಗೂ ಶಿಬು ಥಾಮಸ್ ಕೂಡಾ ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News