ಗಡಿಯೆಂಬ ಕತ್ತಿಯಂಚಿನಲ್ಲಿ ಭಾರತ

Update: 2020-09-07 04:56 GMT

ಭಾರತ-ಚೀನಾದ ನಾಯಕರು ಗಡಿಯ ಕತ್ತಿಯಂಚಿನಲ್ಲಿ ನಡೆಯುತ್ತಿದ್ದಾರೆ. ಮಾತುಕತೆ ಪರಿಹಾರ ಎಂದು ಉಭಯ ದೇಶಗಳ ನಾಯಕರು ಬಾಯಲ್ಲಿ ಆಡಿಕೊಂಡು ಬಂದಿದ್ದ್ದರಾದರೂ, ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಯುದ್ಧವೊಂದು ಸಂಭವಿಸಿಲ್ಲ ಎನ್ನುವುದು ಬಿಟ್ಟರೆ, ಉಳಿದಂತೆ ಗಡಿ ‘ಸ್ಫೋಟಿಸಲು ಸಿದ್ಧವಾಗಿ ನಿಂತ ಬಾಂಬಿ’ನಂತಿದೆ. ಯಾವುದೇ ಸಣ್ಣ ಕಿಡಿಯೂ ಉಭಯ ದೇಶಗಳ ನಡುವೆ ದೊಡ್ಡ ಯುದ್ಧವೊಂದರ ಸೃಷ್ಟಿಗೆ ಕಾರಣವಾಗಬಹುದು. ಚೀನಾ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂದು ರಾಜನಾಥ್ ಸಿಂಗ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಮಾಸ್ಕೊದಲ್ಲಿ ಉಭಯ ದೇಶಗಳ ಉನ್ನತ ಮಟ್ಟದ ನಿಯೋಗದಲ್ಲಿ ಭಾಗವಹಿಸಿದ ಬಳಿಕ ಈ ಮಾತು ಹೇಳಿರುವುದು, ಮಾತುಕತೆ ವಿಫಲವಾಗಿರುವ ಸಂಕೇತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಸಭೆಯ ಬಳಿಕ ಚೀನಾ ಇನ್ನಷ್ಟು ಆಕ್ರಮಣಕಾರಿ ಹೇಳಿಕೆಯನ್ನು ನೀಡಿತು. ‘ತನ್ನ ಭೂಪ್ರದೇಶದ ಒಂದು ಇಂಚನ್ನೂ ಕಳೆದುಕೊಳ್ಳುವುದಿಲ್ಲ. ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತೆಯನ್ನು ರಕ್ಷಿಸಲು ಚೀನಾದ ಸಶಸ್ತ್ರ ಪಡೆಗಳು ಸಮರ್ಥವಾಗಿವೆ’ ಎಂದು ಹೇಳಿತು. ಇದರ ಬೆನ್ನಿಗೇ, ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಅವರು ಲಡಾಖ್‌ಗೆ ಭೇಟಿ ನೀಡಿ ಯೋಧರನ್ನು ಉದ್ದೇಶಿಸಿ ಮಾತನಾಡಿದ್ದಾರೆ, ಹುರಿದುಂಬಿಸಿದ್ದಾರೆ. ಅಂದರೆ ಪರೋಕ್ಷವಾಗಿ ಯುದ್ಧಕ್ಕೆ ಸಿದ್ಧರಾಗಿ ಎಂಬ ಸೂಚನೆಯನ್ನು ನೀಡಿದ್ದಾರೆ.

ಆದರೆ ಚೀನಾದಂತಹ ಸಮರ್ಥ ದೇಶದ ಜೊತೆ ಒಂದು ಯುದ್ಧದ ನಾಶ ನಷ್ಟವನ್ನು ಹಂಚಿಕೊಳ್ಳುವ ಸ್ಥಿತಿಯಲ್ಲಿ ಭಾರತವಿಲ್ಲ ಎನ್ನುವುದು ಸ್ವತಃ ಭಾರತಕ್ಕೇ ಗೊತ್ತಿದೆ. ನೋಟು ನಿಷೇಧದ ಬಳಿಕ ಆರ್ಥಿಕವಾಗಿ ತೀವ್ರ ಹಿಂಜರಿಕೆಯನ್ನು ಅನುಭವಿಸುತ್ತಿದ್ದ ಭಾರತ, ಕೊರೋನ, ಲಾಕ್‌ಡೌನ್‌ನಿಂದಾಗಿ ಇನ್ನಷ್ಟು ದಿವಾಳಿಯಾಯಿತು. ಭಾರತದ ಆರ್ಥಿಕತೆ ನೆಲಕಚ್ಚಿದ ಕಾರಣದಿಂದಾಗಿ, ಕೊರೋನದ ಆಘಾತವನ್ನು ತಾಳಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಚೀನಾದ ಸ್ಥಿತಿ ಹಾಗಿಲ್ಲ. ಕೊರೋನದ ತಾಯ್ನೆಲವೆಂದು ಚೀನಾವನ್ನು ನಾವು ವ್ಯಂಗ್ಯ ಮಾಡುತ್ತೇವಾ ರೂ, ಕೊರೋನವನ್ನು ಗೆಲ್ಲುವಲ್ಲಿ ಚೀನಾ ಭಾಗಶಃ ಯಶಸ್ವಿಯಾಗಿದೆ. ಕೊರೋನದಿಂದ ಚೀನಾದ ಆರ್ಥಿಕತೆಯೂ ಅಸ್ತವ್ಯಸ್ತಗೊಂಡಿದೆಯಾದರೂ, ಆಘಾತವನ್ನು ತಾಳಿಕೊಳ್ಳುವ ಆರೋಗ್ಯ ಚೀನಾದ ಆರ್ಥಿಕತೆಗೆ ಮೊದಲೇ ಇತ್ತು. ಆದುದರಿಂದ, ಈ ಹೊತ್ತಿನಲ್ಲೂ, ಚೀನಾಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆಯ ಸ್ಥಿತಿ ಚಿಂತಾಜನಕವಾಗಿದೆ. ಕೇಂದ್ರ ಸರಕಾರ ‘ದೇವರ ಮೇಲೆ ಭಾರ’ ಹಾಕಿ ಕೂತಿರುವ ಈ ಹೊತ್ತಿನಲ್ಲಿ, ಚೀನಾದ ವಿರುದ್ಧ ಯುದ್ಧವೇನಾದರೂ ಘೋಷಣೆಯಾದರೆ, ನಮ್ಮ ಜೊತೆಗೆ ಯುದ್ಧ ಮಾಡಲು ದೇವಾನು ದೇವತೆಗಳು ಧರೆಗಿಳಿದು ಬರುವುದಿಲ್ಲ ಎನ್ನುವ ವಾಸ್ತವ ನಮ್ಮ ನಾಯಕರಿಗಿರಬೇಕಾಗಿದೆ. ಮಹಾಭಾರತ ಕಾಲದಲ್ಲಿ ಭಾರತದೊಂದಿಗೆ ಯಾವ ಯಾವ ಮಾರಕ ಆಯುಧಗಳಿದ್ದವು ಎಂದು ಸಂಘಪರಿವಾರ ನಾಯಕರು ವೇದಿಕೆಗಳಲ್ಲಿ ಹೇಳಿಕೊಂಡಿದ್ದರೋ, ಆ ಆಯುಧಗಳನ್ನು ಬಳಸಿ ಯುದ್ಧ ಮಾಡುವುದಕ್ಕೂ ಸಾಧ್ಯವಿಲ್ಲ. ಯುದ್ಧವೆನ್ನುವುದು ಕಟು ವಾಸ್ತವ. ಮೋದಿಯವರ ತಮ್ಮ ‘ಮನ್ ಕಿ ಬಾತ್’ ಮೂಲಕ ಯುದ್ಧವನ್ನು ಗೆಲ್ಲಲಾಗುವುದಿಲ್ಲ.

ಹಾಗೆಂದು ಚೀನಾದ ಸವಾಲುಗಳಿಗೆ ಭಾರತ ಉತ್ತರಿಸಬೇಡವೇ? ಖಂಡಿತ ಉತ್ತರಿಸಲೇ ಬೇಕು. ಈ ಹಿಂದೆ ಪಾಕಿಸ್ತಾನ ನಮಗೆ ಸವಾಲು ಹಾಕಿದಾಗ, ಬಾಂಗ್ಲಾದ ವಿಭಜನೆಯ ಬಿಕ್ಕಟ್ಟು ಇವೆಲ್ಲವನ್ನೂ ಭಾರತ ಯಶಸ್ವಿಯಾಗಿಯೇ ನಿಭಾಯಿಸಿದೆ. ಆದರೆ ಚೀನಾದ ವಿಷಯದಲ್ಲಿ ಮಾತ್ರ ಹಿನ್ನಡೆಯನ್ನು ಅನುಭವಿಸಿತು. ಅಷ್ಟೇ ಅಲ್ಲ, ಚೀನಾದ ವಿಷಯದಲ್ಲಿ ಎಲ್ಲ ಸರಕಾರಗಳು ಯಾವ ಆತುರವನ್ನು ಪ್ರದರ್ಶಿಸದೆ, ಮುತ್ಸದ್ದಿತನದ ಹೆಜ್ಜೆಗಳನ್ನು ಇಡುತ್ತಾ ಬಂದವು. ಅದು ಭಾರತದ ಪಾಲಿಗೆ ಖಂಡಿತ ಹಿನ್ನಡೆಯ ವಿಷಯವಲ್ಲ. ಭಾರತ ಮುಂದಿಡುವ ಒಂದು ತಪ್ಪು ಹೆಜ್ಜೆಗಾಗಿ ಚೀನಾ ಕಾಯುತ್ತಿದೆ ಎನ್ನುವುದು ಎಲ್ಲ ಮುತ್ಸದ್ದಿ ನಾಯಕರಿಗೂ ಸ್ಪಷ್ಟವಾಗಿ ಗೊತ್ತಿತ್ತು. ಆದುದರಿಂದ, ಪಾಕಿಸ್ತಾನದ ವಿಷಯಕ್ಕೆ ಅನ್ವಯವಾಗುವ ಮಾತುಗಳನ್ನು ಯಾವತ್ತೂ ಚೀನಾದ ವಿಷಯದಲ್ಲಿ ಆಡಿರಲಿಲ್ಲ. ಆದರೆ ಯಾವುದೇ ವಿದೇಶಾಂಗ ನೀತಿಯ ಕುರಿತಂತೆ ಅರಿವಿಲ್ಲದ ಮೋದಿ ನೇತೃತ್ವದ ಸರಕಾರ ಗಡಿಭಾಗದಲ್ಲಿ ತೋರಿಸಿದ ಆತುರಗಳು ಇಂದು ಭಾರತದ ಪಾಲಿಗೆ ನುಂಗಲೂ, ಉಗುಳಲೂ ಆಗದ ತುತ್ತಾಗಿ ಪರಿಣಮಿಸಿದೆ. ಕಳೆದ ಐದು ವರ್ಷಗಳಿಂದ ಮೋದಿ ನೇತೃತ್ವದ ಸಂಘಪರಿವಾರ ಭಾರತದ ಸೇನೆಯನ್ನು ತಮ್ಮ ರಾಜಕೀಯದಿಂದ ಕಲುಷಿತಗೊಳಿಸಿದೆ. ಸೇನೆಯನ್ನು ತನ್ನ ಪರವಾಗಿ ಕೆಲಸ ಮಾಡುವ ಮಾಧ್ಯಮದ ರೀತಿಯಲ್ಲಿ ಅದು ಬಳಸಿಕೊಂಡಿದೆ. ಇದು ದೇಶದ ರಕ್ಷಣಾ ವಿಷಯದಲ್ಲಿ ಬಹುದೊಡ್ಡ ದುಷ್ಪರಿಣಾಮವನ್ನು ಬೀರಿತು. ರಕ್ಷಣಾ ಖಾತೆ ಮತ್ತು ವಿದೇಶಾಂಗ ಖಾತೆಯನ್ನು ದುರ್ಬಲಗೊಳಿಸಿ, ಸೇನಾ ಮುಖ್ಯಸ್ಥರೇ ಪದೇ ಪದೇ ಪತ್ರಿಕಾಗೋಷ್ಠಿ ಕರೆಯುವ ಮೂಲಕ, ಸರಕಾರದ ವೈಫಲ್ಯಗಳನ್ನು ಸಮರ್ಥಿಸುತ್ತಾ ಬಿಜೆಪಿಯ ವಕ್ತಾರರಾಗುವ ಮೂಲಕ ತನ್ನ ಹುದ್ದೆಯ ಘನತೆಯನ್ನು ಕೆಳಗಿಳಿಸಿರುವುದು ಬರೇ ಆರೋಪವಷ್ಟೇ ಅಲ್ಲ. ಇದೇ ಸಂದರ್ಭದಲ್ಲಿ ಸೇನೆಯೊಳಗಿನ ವಿಷಯವಾಗಿರಬೇಕಾಗಿದ್ದ ‘ಸರ್ಜಿಕಲ್ ಸ್ಟ್ರೈಕ್’ನ್ನು ಬಿಜೆಪಿ ತನ್ನ ರಾಜಕೀಯಕ್ಕೆ ಬಹಿರಂಗವಾಗಿ ಬಳಸಿಕೊಂಡಿತು. ಪಾಕಿಸ್ತಾನದ ಗಡಿ ಉಲ್ಲಂಘಿಸಿ ದಾಳಿ ನಡೆಸಿದ್ದೇನೆ ಎಂದು ಪದೇ ಪದೇ ಹೇಳಿಕೆ ನೀಡುತ್ತಾ ಬಂದಿರುವುದು ನೆರೆಯ ಎಲ್ಲ ದೇಶಗಳು ಭಾರತದ ಕುರಿತಂತೆ ಮುಂಜಾಗೃತೆಯನ್ನು ವಹಿಸುವಂತೆ ಮಾಡಿತು.

ನೇಪಾಳದಂತಹ ಪುಟ್ಟ ರಾಷ್ಟ್ರವೂ ಭಾರತದ ಕುರಿತಂತೆ ಅನಗತ್ಯ ಅಭದ್ರತೆಯನ್ನು ಅನುಭವಿಸುತ್ತಾ ಚೀನಾದ ಸಂಗ ಮಾಡುವಂತಾಯಿತು. ನೋಟು ನಿಷೇಧದಿಂದ ದೇಶದ ಆರ್ಥಿಕತೆ ಹದಗೆಟ್ಟು ಕೂತಾಗ ಅದನ್ನು ಮುಚ್ಚಿ ಹಾಕಲು ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್, ಯುದ್ಧ, ಸಂಘರ್ಷಗಳನ್ನು ಮೂರ್ಖ, ಅವಿವೇಕಿ ನಾಯಕನಷ್ಟೇ ಸೃಷ್ಟಿ ಮಾಡಬಲ್ಲ. ತನ್ನ ರಾಜಕೀಯ ಲಾಭಕ್ಕಾಗಿ ಗಡಿಯನ್ನು ಸದಾ ಉದ್ವಿಗ್ನವಾಗಿಸುತ್ತಾ ಬಂದ ಸರಕಾರದ ಬೇಜವಾಬ್ದಾರಿಯಿಂದ ದೇಶ ಅದರ ಫಲವನ್ನು ಉಣ್ಣುವ ಸ್ಥಿತಿ ನಿರ್ಮಾಣವಾಗಿದೆ. ಒಳಗಿನಿಂದ ದೇಶವನ್ನು ಗಟ್ಟಿಯಾಗಿಸುತ್ತಾ, ಅದನ್ನು ಆರ್ಥಿಕವಾಗಿ ಮೇಲೆತ್ತಿ ನಿಲ್ಲಿಸಿದ ಬಳಿಕ, ಯಾವುದೇ ನಾಯಕ ಇನ್ನೊಂದು ಬಲಾಢ್ಯ ದೇಶದ ಜೊತೆಗೆ ಸಂಘರ್ಷಕ್ಕಿಗಿಳಿಯುತ್ತಾನೆ. ಆದರೆ ಮೋದಿ ಸರಕಾರ, ದೇಶದ ಆರ್ಥಿಕತೆ ಸರ್ವನಾಶವಾಗುತ್ತಿರುವ ಹೊತ್ತಿನಲ್ಲಿ ಒಂದು ಯುದ್ಧವನ್ನು ತಾನಾಗಿಯೇ ಆಹ್ವಾನಿಸಿಕೊಂಡಿದೆ. ನೋಟು ನಿಷೇಧ ಬಹುದೊಡ್ಡ ಪ್ರಮಾದವೆನ್ನುವುದು ಗೊತ್ತಿದ್ದೂ, ದೇಶದಲ್ಲಿ ತೆರಿಗೆ ಸುಧಾರಣೆಯ ನೆಪವೊಡ್ಡಿ ಸರಕಾರ ಜಿಎಸ್‌ಟಿಯನ್ನು ಜಾರಿಗೆ ತಂದಿತು. ಇದು ದೇಶದ ಆರ್ಥಿಕ ವ್ಯವಹಾರವನ್ನು ಇನ್ನಷ್ಟು ಬಿಗಡಾಯಿಸಿತು. ಇದನ್ನು ಮುಚ್ಚಿ ಹಾಕಲು ಕಾಶ್ಮೀರವೆನ್ನುವ ಜೇನು ಗೂಡಿಗೆ ಕೈ ಹಾಕಿತು.

ದೇಶವನ್ನು ಕಾಯಬೇಕಾದ ಸೈನಿಕರು ಕಾಶ್ಮೀರದಲ್ಲಿ ನಮ್ಮದೇ ಜನರನ್ನು ಕೋವಿ ಹಿಡಿದು ಕಾಯಬೇಕಾದ ಸ್ಥಿತಿ ನಿರ್ಮಾಣವಾಯಿತು. ಕಾಶ್ಮೀರದ ಕುರಿತಂತೆ ಭಾರತ ತೆಗೆದುಕೊಂಡ ಅವಸರದ ನಿರ್ಧಾರದಿಂದಾಗಿ, ಲಡಾಖ್ ವಿಷಯದಲ್ಲಿ ಚೀನಾ ಜಾಗೃತವಾಯಿತು. ಅಮೆರಿಕದ ಕುರಿತಂತೆ ಭಾರತದ ಅತಿ ನಂಬಿಕೆ, ಚೀನಾವನ್ನು ಇನ್ನಷ್ಟು ಕೆರಳಿಸಿತು. ನೇಪಾಳವೂ ಭಾರತದ ಕುರಿತಂತೆ ಆತಂಕಗೊಂಡು, ಚೀನಾದ ಜೊತೆಗೆ ಕೈ ಜೋಡಿಸಿತು. ಆವರೆಗೆ ಬೂದಿ ಮುಚ್ಚಿದ ಕೆಂಡದಂತಿದ್ದ ಭಾರತ-ಚೀನಾ ಗಡಿ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿತು. ಇದೀಗ ಬೆಂಕಿಯನ್ನು ‘ಮಾತುಕತೆ’ಯ ಮೂಲಕ ಆರಿಸಲು ಭಾರತ ಹೊರಟಿದೆ. ಆದರೆ ಚೀನಾ ತನ್ನ ನಿಲುವಿನಿಂದ ಒಂದಿಷ್ಟ್ಟೂ ಹಿಂದೆ ಸರಿದಿಲ್ಲ. ಚೀನಾದೊಂದಿಗೆ ಯುದ್ಧವಾದರೆ ಅಮೆರಿಕ ಭಾರತದೊಂದಿಗೆ ಕೈ ಜೋಡಿಸುತ್ತದೆಯೋ ಇಲ್ಲವೋ ಎನ್ನುವುದು ಆನಂತರದ ಮಾತು. ಅಮೆರಿಕ ನೆರವಿನಿಂದ ಯುದ್ಧವನ್ನು ಗೆದ್ದರೂ, ಸೋತರೂ ಯುದ್ಧ ನಷ್ಟವನ್ನೇ ತಂದಿಡುತ್ತದೆ. ಅಮೆರಿಕವೇನೂ ಸುಮ್ಮನೆ ಭಾರತದ ಜೊತೆಗೆ ನಿಲ್ಲುವುದಿಲ್ಲ. ಚೀನಾವನ್ನು ಟೀಕಿಸುವ ಮೂಲಕ, ಆ್ಯಪ್‌ಗಳನ್ನು ಬ್ಯಾನ್ ಮಾಡುವ ಮೂಲಕ ಗಡಿಭಾಗದಲ್ಲಿ ನಡೆಯುತ್ತಿರುವ ಅನಾಹುತಗಳನ್ನು ಮುಚ್ಚಿಹಾಕುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ವತಃ ಆರ್ಥಿಕವಾಗಿ ದಿವಾಳಿಯೆದ್ದು ಕೂತಿರುವ ಭಾರತ, ಆ್ಯಪ್ ನಿಷೇಧದ ಮೂಲಕ ಚೀನಾ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದ್ದೇನೆ ಎಂದು ದೇಶದ ಜನರನ್ನು ನಂಬಿಸಲು ಹೊರಡುವುದು ಹಾಸ್ಯಾಸ್ಪದ.

ಪ್ರಧಾನಿ ಮೋದಿಯವರು ಮೊದಲು ಅಮೆರಿಕದ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿ, ಭಾರತದ ಹಿರಿಯ ಮುತ್ಸದ್ದಿಗಳು, ಸರ್ವಪಕ್ಷನಾಯಕರುಗಳ ಸಲಹೆಯನ್ನು ಪಡೆದುಕೊಂಡು ಮುಂದಕ್ಕೆ ಹೆಜ್ಜೆ ಇಡಬೇಕಾಗಿದೆ. ದೇಶದ ಒಳಗನ್ನು ಗಟ್ಟಿಗೊಳಿಸದೆ, ಗಡಿಯನ್ನು ಸರಿಪಡಿಸುವುದು ಅಸಾಧ್ಯ. ಗಡಿಯಲ್ಲಿ ಹೋದ ಮಾನವನ್ನು ಯಾವ ರಾಮಮಂದಿರ, ಎನ್‌ಆರ್‌ಸಿಗಳೂ ತುಂಬಲಾರವು. ಅದು ಭಾರತದ ಒಳಗನ್ನು ದುರ್ಬಲಗೊಳಿಸಿ ಶತ್ರುಗಳಿಗೆ ಇನ್ನಷ್ಟು ಅನುಕೂಲ ಮಾಡಿಕೊಡುತ್ತದೆ. ಮೊದಲು ಪ್ರಜಾಸತ್ತಾತ್ಮಕ, ಜಾತ್ಯತೀತ ಭಾರತವನ್ನು ಸದೃಢಗೊಳಿಸುವ ಕಾರ್ಯದೆಡೆಗೆ ಸರಕಾರ ಮನಮಾಡಬೇಕು. ಕೆಲವು ಹೆಜ್ಜೆ ಹಿಂದಿಟ್ಟರೂ ಸರಿ, ಸದ್ಯಕ್ಕಂತೂ ಭಾರತ ಒಂದು ಯುದ್ಧವನ್ನು ತನ್ನ ಮೇಲೆ ಹೇರಿಕೊಳ್ಳಬಾರದು. ಈಗಾಗಲೇ ಕೊರೋನ ಯುದ್ಧದಲ್ಲಿ ಕಳೆದುಕೊಂಡದ್ದನ್ನು ತುಂಬಿಕೊಳ್ಳುವ ಬಗೆಯಷ್ಟೇ ಸರಕಾರಕ್ಕೆ ಮುಖ್ಯವಾಗಬೇಕು.

ಹೊರ-ಒಳಗೆ ಯುದ್ಧಗಳನ್ನು ಆಹ್ವಾನಿಸಿ ಅಭಿವೃದ್ಧಿಯ ಕುರಿತಂತೆ ಮಾತನಾಡುವುದೇ ಆಷಾಡಭೂತಿತನ. ಪ್ರಧಾನಿ ಮೋದಿ ಒಂದೋ ರಾಜೀನಾಮೆ ನೀಡಿ ಯೋಗ್ಯರಿಗೆ ಅಧಿಕಾರ ಹಸ್ತಾಂತರಿಸಬೇಕು. ಇಲ್ಲವೇ, ಯೋಗ್ಯರ ಸಲಹೆ ಪಡೆದು ಹಳಿ ತಪ್ಪಿದ ರಾಜತಾಂತ್ರಿಕ ಸಂಬಂಧವನ್ನು ಸುಧಾರಿಸಿ, ಆರ್ಥಿಕತೆಯನ್ನು ಮೇಲೆತ್ತುವ ಕಡೆಗೆ ಗಮನ ಹರಿಸಬೇಕು. ಅಮೆರಿಕದ ಮೇಲೆ ಇಟ್ಟ ನಂಬಿಕೆಯನ್ನು ತನ್ನ ದೇಶದ ಜನರ ಮೇಲೂ ಇಟ್ಟು ಅವರನ್ನು ಒಟ್ಟಾಗಿ ಕೊಂಡೊಯ್ಯುವುದನ್ನು ಸರಕಾರ ಕಲಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News